
ಬೆಂಗಳೂರು(ಜು.10): ಗಣಿಗಾರಿಕೆಯಿಂದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನಲ್ಲಿ ಬಿರುಕು ಉಂಟಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಅವರ ಹೇಳಿಕೆಯು ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವ ನಡುವೆಯೇ ‘ಅಣೆಕಟ್ಟಿನಲ್ಲಿ ಯಾವುದೇ ತರಹದ ಬಿರುಕು ಉಂಟಾಗಿಲ್ಲ’ ಎಂದು ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿದೆ.
ರೋಹಿಣಿ ವಿರುದ್ಧ ಮತ್ತೆ ಪ್ರತಾಪ್ ಸಿಂಹ ಆಕ್ರೋಶ : ಮತ್ತೆ ಗಂಭೀರ ಆರೋಪ
ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ಪ್ರಕಟಣೆ ನೀಡಿ, ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ (ಡಿಎಸ್‌ಆರ್‌ಪಿ) ಸದಸ್ಯರು ಹಾಗೂ ಇಲಾಖಾ ಮುಖ್ಯಸ್ಥರು ಅಣೆಕಟ್ಟೆಯನ್ನು ನಿಯಮಿತ ಅವಧಿಗಳಲ್ಲಿ ಪರಿವೀಕ್ಷಿಸಿ ವರದಿಯನ್ನು ನೀಡುತ್ತಾ ಬಂದಿದ್ದಾರೆ. ಅಣೆಕಟ್ಟಿನ ಗೋಡೆಯಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಆಗಾಗ್ಗೆ ನಡೆಸಿದ ತಪಾಸಣೆಯಿಂದ ಖಚಿತವಾಗಿದೆ ಎಂದು ತಿಳಿಸಿದ್ದಾರೆ.
ಡಿಎಸ್‌ಆರ್‌ಪಿ ಸದಸ್ಯರು ನೀಡಿರುವ ಸಲಹೆಗಳ ಆಧಾರದ ಮೇಲೆ ಅಣೆಕಟ್ಟಿನ ಬಲವನ್ನು ವೃದ್ಧಿಸಲು ಅವಕಾಶವಿರುವ ಕಾಮಗಾರಿಗಳನ್ನು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಹಂತ-1 ರಡಿ ಕೈಗೊಳ್ಳಲಾಗಿದೆ. 70 ಅಡಿಯಿಂದ 131 ಅಡಿಯವರೆಗೆ ಹೊಸದಾಗಿ ಕಟ್ಟಡದ ಕಲ್ಲುಗಳ ಸಂದಿಯಲ್ಲಿ ದುರಸ್ತಿ ಮಾಡಿ ಅಣೆಕಟ್ಟೆಯನ್ನು ಭದ್ರಗೊಳಿಸಲಾಗಿದೆ. ಇದರಿಂದಾಗಿ ಅಣೆಕಟ್ಟೆಯಲ್ಲಿ ರಚನೆಯ ಯಾವುದೇ ದೋಷ ಇರುವುದಿಲ್ಲ ಮತ್ತು ಬಿರುಕುಗಳು ಇಲ್ಲ ಎಂದು ಅವರು ವಿವರಿಸಿದ್ದಾರೆ.
ಸುಮಲತಾ ಜನರ ಹಿತದೃಷ್ಠಿಯಿಂದ ಮಾತನಾಡಿದ್ದಾರೆ : ಕೈ ಮುಖಂಡ
ಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗೆ ವಿಶ್ವ ಬ್ಯಾಂಕ್ ಮತ್ತು ಕೇಂದ್ರ ಜಲ ಆಯೋಗದಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಜು.2 ರಂದು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಸಲಹೆಗಾರರು ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಅಣೆಕಟ್ಟೆಯ 136 ಗೇಟುಗಳ ಬದಲಾವಣೆ ಕಾಮಗಾರಿಯ ಸ್ಥಳ ಪರಿವೀಕ್ಷಣೆ ನಡೆಸಿದ್ದು ಅಣೆಕಟ್ಟೆಯ ಗೋಡೆಯಲ್ಲಿ ಯಾವುದೇ ತರಹದ ಬಿರುಕು ಇಲ್ಲವೆಂದು ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.