- ಅನ್ಯಪಕ್ಷದ ಒಕ್ಕಲಿಗ ಮುಖಂಡರ ಬಿಜೆಪಿ ಸೇರ್ಪಡೆ
- ಒಕ್ಕಲಿಗ ನಾಯಕರಾದ ತಮ್ಮನ್ನು ದೂರ ಇರಿಸಿದ್ದಕ್ಕೆ ಆಕ್ಷೇಪ
- ಡಿವಿಎಸ್ ಹಾಗೂ ಅಶ್ವತ್ಥ ಅವರನ್ನು ಸಮಾಧಾನ ಮಾಡಿದ ನಾಯಕರು
ಬೆಂಗಳೂರು(ಮೇ.16): ಅನ್ಯಪಕ್ಷಗಳ ಮುಖಂಡರ ಸೇರ್ಪಡೆ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಿದ್ದರ ಬಗ್ಗೆ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಕೆಲವು ನಾಯಕರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಶನಿವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಅಶ್ವತ್ಥ್ ನಾರಾಯಣ್ ಭವಿಷ್ಯದ ಸಿಎಂ? ಈ ಬಗ್ಗೆ ಖುದ್ದು ಸಚಿವರು ಹೇಳಿದ್ದಿಷ್ಟು
‘ಕಳೆದ ವಾರ ಹಳೆ ಮೈಸೂರು ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷದ ಕಚೇರಿಯಲ್ಲೇ ಸಮಾರಂಭ ಆಯೋಜಿಸಿ ಬರಮಾಡಿಕೊಳ್ಳಲಾಯಿತು. ಹಾಗೆ ಬಂದವರಲ್ಲಿ ಬಹುತೇಕರು ಒಕ್ಕಲಿಗ ಸಮುದಾಯದವರು. ಈ ಸೇರ್ಪಡೆ ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿಯನ್ನೂ ನೀಡದೆ ದೂರ ಇಟ್ಟಿದ್ದು ಯಾಕೆ?’ ಎಂದು ಅಶ್ವತ್ಥನಾರಾಯಣ ಮತ್ತು ಸದಾನಂದಗೌಡರು ನೇರವಾಗಿಯೇ ಸಭೆಯಲ್ಲಿ ಪ್ರಶ್ನಿಸಿದರು.
‘ನಾವು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಪಕ್ಷದಲ್ಲಿ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿದ್ದೇವೆ. ಸೇರ್ಪಡೆ ಬಗ್ಗೆ ಮಾಹಿತಿಯನ್ನೂ ಕೊಡದೆ ಹೊರಗಿಟ್ಟರೆ ನಾವು ಹೇಗೆ ಕೆಲಸ ಮಾಡಬೇಕು? ಪಕ್ಷದ ಕೆಲವು ಮುಖಂಡರು ಈ ಸೇರ್ಪಡೆಯಲ್ಲಿ ತಮ್ಮ ಪಾತ್ರವಿದೆ ಎಂಬುದನ್ನು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು’ ಎನ್ನಲಾಗಿದೆ.
ಹೊರಟ್ಟಿ ಬೆನ್ನಲ್ಲೇ ಜೆಡಿಎಸ್‌ನ ಬಹಳಷ್ಟು ನಾಯಕರು ಬಿಜೆಪಿ ಕಡೆ ಒಲವು, ಮಾಜಿ ಸಿಎಂ ಸ್ಫೋಟಕ ಸುಳಿವು
ಈ ನಾಯಕರ ಮಾತು ಕೇಳಿಸಿಕೊಂಡ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಡಿವಿಎಸ್ ಹಾಗೂ ಅಶ್ವತ್ಥ ಅವರನ್ನು ಸಮಾಧಾನ ಮಾಡಿದರು. ಅಲ್ಲದೆ, ಇನ್ನು ಮುಂದೆ ಅನ್ಯ ಪಕ್ಷಗಳ ಮುಖಂಡರ ಸೇರ್ಪಡೆ ವೇಳೆ ಆಯಾ ಭಾಗದ ಹಾಗೂ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಸೇರ್ಪಡೆ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗುವುದು. ಎಲ್ಲರನ್ನೂ ಒಳಗೊಂಡು ಪಕ್ಷ ಸಂಘಟನೆ ಬಲಪಡಿಸಲಾಗುವುದು ಎಂದು ಭರವಸೆ ನೀಡಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಈ ತಿಂಗಳ 7ರಂದು ಕೋಲಾರದ ಮಂಜುನಾಥ ಗೌಡ, ಮಂಡ್ಯದ ಲಕ್ಷ್ಮೇ ಅಶ್ವಿನ್‌ಗೌಡ, ಸಂದೇಶ್ ನಾಗರಾಜ್, ಅಶೋಕ್ ಜಯರಾಂ ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ
ಕಳೆದ ಬಾರಿ ಜನರು ನನಗೆ ನೀಡಿದ ಅಧಿಕಾರವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಗುರುಮಠಕಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡಿದ್ದೇನೆ. ರಾಜ್ಯದ ಸಿಎಂ ಅವರಿಗೆ ಮನವಿ ಮಾಡಿ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲು ಶ್ರಮಿಸುತ್ತೇನೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.
ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವಗುರು ಆಗುವ ಕನಸು ಕಂಡಿದ್ದಾರೆ. ಅದನ್ನು ಸಾಕಾರಗೊಳಿಸುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಗುರುಮಠಕಲ್ ಮತಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಕೈಗಾರಿಕೆ ಸೇರಿದಂತೆ ಸಾಕಷ್ಟುಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ. ಅಧಿಕಾರಿಗಳ, ಗುತ್ತಿಗೆದಾರರು ಮತ್ತು ಇತರ ಪಕ್ಷದ ಕಾರ್ಯಕರ್ತರು ಸೇರಿದಂತೆ ಮತಕ್ಷೇತ್ರದ ಸರ್ವ ಜನಾಂಗವನ್ನು ಸಮನಾಗಿ ಕಾಣುವುದರ ಮೂಲಕ ನಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತ ಸುಖ ದುಖಃಗಳಲ್ಲಿ ಭಾಗಿಯಾಗಿದ್ದೇನೆ. ಅದರಂತೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರಲ್ಲಿ ಮನವಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಕೇತ್ರದ ಅಭಿವೃದ್ಧಿಗೆ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.