
ಶ್ರೀರಂಗಪಟ್ಟಣ (ಮೇ.15): ಕಾಂಗ್ರೆಸ್ (Congress) ಪಕ್ಷದಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ಸಿದ್ದರಾಮಯ್ಯ (Siddaramaiah) ಪರ ಇದ್ದರೆ, ಮತ್ತೊಂದು ಗುಂಪು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಪರ ಇದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ (MP Pratap Simha) ಟೀಕಿಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಬಿಜೆಪಿ (BJP) ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋರಿ ಪಾಳ್ಯದ ಬಸ್ಸು ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್ ಆಗಿ ಜಮೀರಣ್ಣ ಇದ್ದಾರೆ. ಡಿ.ಕೆ.ಶಿವಕುಮಾರ್ ಟೀಂನ ವೈಸ್ ಕ್ಯಾಪ್ಟನ್ ಆಗಿ ನಲಪಾಡ್ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ಬರುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರಿಗೂ ಮುಸ್ಲಿಮರು ಓಟ್ ಬ್ಯಾಂಕ್ ಆಗಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಿಸಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದರು ಎಂದು ಆರೋಪಿಸಿದರು. ಡಿ.ಕೆ. ಶಿವಕುಮಾರ್ ವಿರುದ್ಧ ಒಳಗಿನಿಂದಲೇ ಪಿತೂರಿ ಮಾಡಿ ತುಳಿದು ಮತ್ತೆ ಸಿಎಂ ಆಗಲು ಹೊರಟಿರುವ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಯಧು ವಂಶದವರು ನೆನಪಾಗಲಿಲ್ಲ. ಕಾನೂನು ಪದವಿ ಕೊಟ್ಟವಿಶ್ವ ವಿದ್ಯಾನಿಲಯ, ಕೆಆರ್‌ಎಸ್ ಅಣೆಕಟ್ಟೆನಿರ್ಮಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಆದರೆ, ಯಧುವಂಶವನ್ನು ನಿರ್ವಂಶ ಮಾಡಲು ಹೊರಟಿದ್ದ ಟಿಪ್ಪುವಿನ ಜಯಂತಿ ಆಚರಣೆಗೆ ನಾಂದಿ ಹಾಡಿದರು ಎಂದು ಕಿಡಿಕಾರಿದರು.
ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯ, ಕುಮಾರಸ್ವಾಮಿ ಮಾತು ಎರಡು ಒಂದೇ, ಪ್ರತಾಪ್ ಸಿಂಹ ವ್ಯಂಗ್ಯ
ಪ್ರತಿಸ್ಪರ್ಧಿಗಳನ್ನು ಹಣಿಯುತ್ತಿರುವ ಸಿದ್ದರಾಮಯ್ಯ: ವಿಪಕ್ಷ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ದುರಾಸೆಯಿಂದ ತಮ್ಮ ಪಕ್ಷದ ಪ್ರತಿಸ್ಪರ್ಧಿಗಳನ್ನು ಹಣಿಯಲು ಶುರು ಮಾಡಿದ್ದಾರೆ. ಇದರಿಂದ ಆ ಪಕ್ಷದಲ್ಲಿ ಒಗ್ಗಟ್ಟು ಇಲ್ಲದೇ ಹೀನಾಯ ಸ್ಥಿತಿಗೆ ತಲುಪಿದೆ ಎಂದು ದೂರಿದರು. ಒಬ್ಬ ವ್ಯಕ್ತಿ ಜನರ ಮುಂದೆ ಮತ ಕೇಳಲು ಹೋಗಬೇಕಾದರೆ ತನ್ನ ಅಧಿಕಾರಾವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಹೋಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಂಡ್ಯದ ಜನತೆ ನಮಗೆ ಮತ ಹಾಕಿಲ್ಲ ಎಂದು ಕಡೆಗಣಿಸಿಲ್ಲ. ಎಲ್ಲ ಜಿಲ್ಲೆಗೂ ಸಮಾನವಾಗಿ ಅಭಿವೃದ್ಧಿ ಕೆಲಸ ಹಂಚಿಕೆ ಮಾಡಿದೆ ಎಂದರು. ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರುನಿಂದ ಪಾಂಡವಪುರ ಪಟ್ಟಣದವರೆಗೆ 27 ಕೋಟಿ ರು.ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸಿದ್ದೇನೆ ಎಂದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ, ಮಂಡ್ಯ ಜಿಲ್ಲೆ ಜೆಡಿಎಸ್‌ಗೆ ಹೆಚ್ಚಿನ ಶಾಸಕರನ್ನು ನೀಡಿದರೂ ಸಿಎಂ ಆಗಿದ್ದ ರೈತನ ಮಗ ಎಂದು ಹೇಳುವ ಕುಮಾರಸ್ವಾಮಿ ಜಿಲ್ಲೆಯ ಎರಡು ಕಣ್ಣುಗಳಂತಿದ್ದ ಸಕ್ಕರೆ ಕಾರ್ಖಾನೆಗಳನ್ನು ಏಕೆ ಆರಂಭಿಸಲಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲೆಯ ಜನರು, ರೈತರು ರಾಜಕೀಯ ಬೇಸಾಯ ಬದಲು ಮಾಡಬೇಕು. ಜೆಡಿಎಸ್- ಕಾಂಗ್ರೆಸ್ ಬೆಳೆ ಬೆಳೆ ಬದಲಾಯಿಸಿ ಬೇರೆ ಬೆಳೆ ಬಿಜೆಪಿ ಬೆಳೆ ಬೆಳೆಯಬೇಕು ಎಂದರು. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಜನರಿಗೆ ತಿಳಿಸಲು ಬಿಜೆಪಿ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ. ಹೀಗಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡು ಹಳೇ ಮೈಸೂರು ಪ್ರಾಂತ್ಯದಲ್ಲಿ ಪಕ್ಷ ಬಲವರ್ಧನೆಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ದಸರಾ ಮುನ್ನ ದಶಪಥ ಯೋಜನೆ ಪೂರ್ಣ: ಸಂಸದ ಪ್ರತಾಪ್ ಸಿಂಹ
ಸಚ್ಚಿದಾನಂದ ಬಿಜೆಪಿ ಸೇರ್ಪಡೆ: ಮೇ 29ರಂದು ಇಂಡವಾಳು ಸಚ್ಚಿದಾನಂದ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ. ಅವರೊಂದಿಗೆ ಮತ್ತಷ್ಟುಜೆಡಿಎಸ್- ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸಿ.ಪಿ. ಯೋಗೇಶ್ವರ್ ಇದೇ ವೇಳೆ ಘೋಷಿಸಿದರು. ತಾಲೂಕಿನ ವಿವಿಧ ಗ್ರಾಮಗಳ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸಿದ್ಧಾಂತಗಳ ಮೆಚ್ಚಿ ಪಕ್ಷ ಸೇರ್ಪಡೆಗೊಂಡರು. ಸಚಿವರು ಹಾಗೂ ನಾಯಕರು ಬಿಜೆಪಿ ಸಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಕೆ.ಸಿ ನಾರಾಯಣಗೌಡ ಮಾತನಾಡಿದರು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ, ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ತಾಲೂಕು ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಸೇರಿದಂತೆ ಇತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.