ಜೂ.23ಕ್ಕೆ ಸಿಎಂ ಸಿದ್ದು ಮತ್ತೆ ದೆಹಲಿ ಭೇಟಿ: ಅವಕಾಶ ಸಿಕ್ಕರೆ ಪ್ರಧಾನಿ ಮೋದಿ ಜತೆ ಮಾತುಕತೆ

Kannadaprabha News   | Kannada Prabha
Published : Jun 21, 2025, 08:43 AM IST
CM Siddaramaiah addresses a press conference following the stampede

ಸಾರಾಂಶ

ರಾಷ್ಟ್ರಪತಿಗಳ ಅಂಕಿತ ಬಾಕಿರುವ ಐದು ಪ್ರಮುಖ ವಿಧೇಯಕಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಖುದ್ದು ಭೇಟಿಗೆ ದೆಹಲಿಗೆ ತೆರಳಲಿದ್ದಾರೆ.

ಬೆಂಗಳೂರು (ಜೂ.21): ರಾಜ್ಯದಲ್ಲಿನ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ಮಾತೃ ಭಾಷೆ ಮಾಧ್ಯಮದಲ್ಲೇ ಶಿಕ್ಷಣ ಕಡ್ಡಾಯವಾಗಿ ಕಲಿಸುವ ಕುರಿತ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಕರ್ನಾಟಕ ತಿದ್ದುಪಡಿ) -2015’ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸುವ ಕೆಟಿಪಿಪಿ ತಿದ್ದುಪಡಿ ವಿಧೇಯಕ ಸೇರಿ ರಾಷ್ಟ್ರಪತಿಗಳ ಅಂಕಿತ ಬಾಕಿರುವ ಐದು ಪ್ರಮುಖ ವಿಧೇಯಕಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಖುದ್ದು ಭೇಟಿಗೆ ದೆಹಲಿಗೆ ತೆರಳಲಿದ್ದಾರೆ.

ಸೋಮವಾರ ಸಂಜೆ ದೆಹಲಿಗೆ ಪ್ರಯಾಣಿಸಲಿರುವ ಅವರು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯಪಾಲರು ಅನುಮತಿ ನಿರಾಕರಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿರುವ ಅಲ್ಪಸಂಖ್ಯಾತರಿಗೆ ಗುತ್ತಿಗೆ ಹಾಗೂ ಖರೀದಿಯಲ್ಲಿ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ತಿದ್ದುಪಡಿ ಕಾಯಿದೆ (ಕೆಟಿಪಿಪಿ)- 2025 ಕಾಯಿದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ ಹಾಗೂ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಕರ್ನಾಟಕ ತಿದ್ದುಪಡಿ) -2015,

ಕರ್ನಾಟಕ ನೋಂದಣಿ ತಿದ್ದುಪಡಿ ಕಾಯಿದೆ-2025 ಹಾಗೂ ನೋಟರಿ ಕರ್ನಾಟಕ ತಿದ್ದುಪಡಿ ಕಾಯದೆ- 2025 ಸೇರಿ ಐದು ವಿಧೇಯಕಗಳ ಬಗ್ಗೆ ವಿವರಣೆ ನೀಡಿ ಅಂಗೀಕರಿಸಲು ಮನವೊಲಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಸಂಬಂಧದ ವಿಧೇಯಕವನ್ನು ರಾಜ್ಯಪಾಲರು ಎರಡು ಬಾರಿ ವಾಪಸ್‌ ಕಳುಹಿಸಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಿ ಸ್ಪಷ್ಟನೆ ನೀಡಿದರೂ ತಿರಸ್ಕರಿಸಿ ಮೂರನೇ ಬಾರಿಗೆ ರಾಷ್ಟ್ರಪತಿಗಳಿಗೆ ಕಳುಹಿಸಲು ಮೇ ಕೊನೆಯ ವಾರ ನೋಟ್‌ ಕಳುಹಿಸಿದ್ದರು.

ದೇಗುಲಗಳ ಆದಾಯ ಹಂಚಿಕೆ ವಿವಾದ: ರಾಜ್ಯದ ಮುಜರಾಯಿ ಇಲಾಖಾ ವ್ಯಾಪ್ತಿಯ ಶ್ರೀಮಂತ ದೇವಾಲಯಗಳು ಅಂದರೆ ‘ಎ’ ವರ್ಗದ ದೇವಾಲಯಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯ ಶೇ.5ರಿಂದ ಶೇ.10ರಷ್ಟು ಆದಾಯವನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’ಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ತಿರಸ್ಕರಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಈ ಬಗ್ಗೆಯೂ ಸಿದ್ದರಾಮಯ್ಯ ವಿವರಣೆ ನೀಡಿ ಅಂಗೀಕಾರ ಪಡೆಯಲು ಪ್ರಯತ್ನಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೆ ಚರ್ಚೆಗೆ ಬಂದ ಕನ್ನಡ ಕಡ್ಡಾಯ?: 2009ರ ಆರ್‌ಟಿಇ ಕಾಯಿದೆಗೆ 2015ರಲ್ಲಿ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಕರ್ನಾಟಕ ತಿದ್ದುಪಡಿ) -2015’ ಅಡಿ ರಾಜ್ಯದ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ಸಾಧ್ಯವಾದಷ್ಟು ಮಾತೃ ಭಾಷೆಯ ಮಾಧ್ಯಮದಲ್ಲೇ ಬೋಧಿಸಬೇಕು ಎಂಬ ನಿಯಮದಲ್ಲಿ ‘ಸಾಧ್ಯವಾದಷ್ಟು’ ಎಂಬ ಪದವನ್ನು ತೆಗೆದಿತ್ತು. ಜತೆಗೆ ಇದಕ್ಕೆ ಪೂರಕವಾಗಿ ಕನ್ನಡ ಕಲಿಕೆ ಕಡ್ಡಾಯ ಕಾಯಿದೆ-2015 ಜಾರಿಗೆ ತಂದು 1 ರಿಂದ 10ನೇ ತರಗತಿವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿತ್ತು. ಆರ್‌ಟಿಇ ಕಾಯಿದೆ ಕೇಂದ್ರದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ತಿದ್ದುಪಡಿಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದರು.

ಹತ್ತು ವರ್ಷಗಳಿಂದ ನೆನೆಗುದಿಗೆಗೆ ಬಿದ್ದಿದ್ದ ಈ ವಿಧೇಯಕಕ್ಕೆ ಅನುಮೋದನೆ ಕೋರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತಿದ್ದು, ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಅವರು ಸಹ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಸಂಜೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಈ ವೇಳೆ 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಕ್ರಮ ವಹಿಸುವಂತೆ ಮನವಿ ಮಾಡಲಿದ್ದಾರೆ. ಬುಧವಾರ ಪ್ರಧಾನಿ ಮೋದಿ ಅವರ ಭೇಟಿಗೂ ಅನುಮತಿ ಕೋರಿದ್ದು, ಅವಕಾಶ ದೊರೆತರೆ ರಾಜ್ಯದ ವಿವಿಧ ಬೇಡಿಕೆಗಳು ಹಾಗೂ ಅನುದಾನ ತಾರತಮ್ಯದ ಬಗ್ಗೆ ಅವರ ಜತೆಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!