
ಬೆಂಗಳೂರು (ಜೂ.21): ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದೂ ಇಲ್ಲ, ಅವರ ಜನತಾದಳ ಪಕ್ಷ ಗೆಲ್ಲುವುದೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಬಳಿ ಬಟ್ಟೆ ಹೊಲಿಸಿಕೊಳ್ಳುವಷ್ಟು ದಾರಿದ್ರ್ಯ ನನಗಿಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಕುಮಾರಸ್ವಾಮಿ ಹೇಳಿದ್ದಕ್ಕೆ ನಾನು ಉಡುಗೊರೆ ನೀಡುತ್ತೇನೆ ಎಂದು ಹೇಳಿದ್ದೆ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದಿದ್ದರು. ಜತೆಗೆ ಎಲ್ಲರೂ ತಯಾರಾಗಿ ಎಂದೂ ಉಲ್ಲೇಖಿಸಿದ್ದರು. ಅದಕ್ಕೆ ನಾನು ಪ್ರತಿಕ್ರಿಯಿಸಿದ್ದೆ ಎಂದು ಹೇಳಿದರು.
ಕೇಂದ್ರದ ಜಾತಿ ಗಣತಿಗೆ ರಾಹುಲ್ ಗಾಂಧಿ ಐಡಿಯಾ ಕಾಪಿ: ಜಾತಿಗಣತಿಗೆ ಮುಂದಾಗಿರುವ ಕೇಂದ್ರ ಸರ್ಕಾರದವರು ರಾಹುಲ್ ಗಾಂಧಿ ಅವರನ್ನು ಕಾಪಿ ಮಾಡುತ್ತಿದ್ದಾರೆ. ಅವರೇನು ಮಾಡುತ್ತಾರೋ ಮಾಡಲಿ. ನಮ್ಮದು ಅಭ್ಯಂತರವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಗೆ ಮುಂದಾಗುವ ಮೂಲಕ ಕೇಂದ್ರ ಸರ್ಕಾರದವರು ರಾಹುಲ್ ಗಾಂಧಿ ಅವರನ್ನು ಕಾಪಿ ಮಾಡುತ್ತಿದ್ದಾರೆ ಎಂದರು.
ದುರ್ಬಲ ವರ್ಗದವರಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬಲು ನಾವು ಮರುಸಮೀಕ್ಷೆ ಮಾಡುತ್ತಿದ್ದೇವೆ. ನಿಯಮಾನುಸಾರ ಮರುಸಮೀಕ್ಷೆ ಕೈಗೊಳ್ಳಲು ನಮ್ಮ ಸರ್ಕಾರ ಮುಂದಾಗಿದೆ. ಕಾಂತರಾಜು ಆಯೋಗದ ವರದಿ ಜಾರಿಯಾಗಿದ್ದರೆ ಹಿಂದುಳಿದ ವರ್ಗಕ್ಕೆ ಶಕ್ತಿ ಬರುತ್ತಿತ್ತು ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ವಿಮಾನ ದುರಂತ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ: ಅಹಮದಾಬಾದ್ ವಿಮಾನ ದುರಂತದ ಕುರಿತು ನಾವು ಯಾವುದೇ ರಾಜಕೀಯ ಮಾಡುವುದಿಲ್ಲ. ಹೆಣದ ಮೇಲೆ ರಾಜಕೀಯ ಮಾಡುವುದೇನಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಕೆಲಸ. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ವಿಮಾನ ಅಪಘಾತದಂಥ ದುರ್ಘಟನೆ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಿ ಎಲ್ಲೂ ಸಂಭವಿಸಬಾರದು. ವಿಮಾನ ಅಪಘಾತಕ್ಕೀಡಾದ ಸ್ಥಳ ನೋಡಿದರೆ ಅಘಾತವಾಗುತ್ತದೆ. ವಿಮಾನ 500 ಮೀಟರ್ ಮುಂದೆ ಹೋಗಿ ಅಪ್ಪಳಿಸಿದ್ದರೆ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೆವು. ವಿಮಾನ ಅಪಘಾತದಿಂದ ಗಾಯಗೊಂಡಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಮಾತನಾಡಿಸಿ, ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.