
ಬೆಂಗಳೂರು(ಆ.20): ‘ನನ್ನ ವಿರುದ್ಧದ ಪಿತೂರಿಯ ವಿರುದ್ಧ ಕಾನೂನು ಹಾಗೂ ರಾಜಕೀಯವಾಗಿ ಹೋರಾಟ ಮಾಡುತ್ತೇನೆ. ಇಂತಹ ಷಡ್ಯಂತ್ರಗಳಿಂದ ನನ್ನನ್ನು ಮುಗಿಸಬಹುದು ಎಂಬುದು ಪ್ರತಿಪಕ್ಷಗಳ ಭ್ರಮೆ ಮಾತ್ರ. ಹಿಂದೆಂದಿಗಿಂತಲೂ ಹೆಚ್ಚು ಸ್ಫೂರ್ತಿಯೊಂದಿಗೆ ಹೋರಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದಿಂದ ಮಾನಸಿಕವಾಗಿ ಕುಗ್ಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಬಳಿ ಸೋಮವಾರ ಅವರು ಉತ್ತರ ನೀಡಿದರು.
ನಾನೇಕೆ ಕುಗ್ಗಲಿ? ರಾಜಕೀಯ ಹೋರಾಟ ಮಾಡುವಾಗೆಲ್ಲ ನನಗೆ ಹೆಚ್ಚಿನ ಜೋಶ್ ಬರುತ್ತದೆ. ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದವನು ನಾನು. ನನ್ನನ್ನು ಷಡ್ಯಂತ್ರಗಳಿಂದ ಮುಗಿಸಬಹುದು ಎಂಬುದು ಪ್ರತಿಪಕ್ಷಗಳ ಭ್ರಮೆ. ರಾಜಕೀಯ ಸವಾಲುಗಳು ನನಗೆ ಹೊಸದಲ್ಲ. ಈಗ ಇನ್ನೂ ಹೆಚ್ಚಿನ ಸ್ಫೂರ್ತಿಯೊಂದಿಗೆ ಹೋರಾಡುತ್ತೇನೆ ಎಂದು ಹೇಳಿದರು.
ನಮ್ಮ ತಂದೆ ತಪ್ಪು ಮಾಡಿಲ್ಲ ಎಂದು ನಮ್ಮ ತಾಯಿಗೂ ಗೊತ್ತು: ಯತೀಂದ್ರ ಸಿದ್ದರಾಮಯ್ಯ
ನನ್ನ ಆತ್ಮಸಾಕ್ಷಿ ಸ್ಪಷ್ಟವಾಗಿದ್ದು, ನಾನು ಯಾವ ತಪ್ಪನ್ನೂ ಮಾಡಿಲ್ಲ. ಜನರ ಆಶೀರ್ವಾದದಿಂದ ಅವರ ಸೇವೆಯಲ್ಲಿ ನಿರತನಾಗಿದ್ದೇನೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಯಾವುದೇ ತಪ್ಪು ಮಾಡಿಲ್ಲವೆಂದು ರಾಜ್ಯದ ಜನರಿಗೂ ತಿಳಿದಿದೆ. ಈಗ ನ್ಯಾಯಾಲಯದಿಂದಲೂ ಅದು ಸ್ಪಷ್ಟವಾಗಲಿದೆ ಎಂದರು.
ನನ್ನ ಮೇಲಿನ ಭಯದಿಂದ ಪಿತೂರಿ:
ನಾನು ಬಡವರ ಪರವಾಗಿರುವುದರಿಂದ ಪ್ರತಿಪಕ್ಷಗಳಿಗೆ ಭಯವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವುದು ಅವರನ್ನು ಕಾಡುತ್ತಿದೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿದರೆ, ಕಾಂಗ್ರೆಸ್ ಪಕ್ಷವನ್ನು ಮುಗಿಸಬಹುದು ಎಂಬ ಭ್ರಮೆಯಲ್ಲಿ ಪ್ರತಿಪಕ್ಷಗಳಿವೆ. ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಸಚಿವನಾಗಿಯೇ 40 ವರ್ಷ ಕಳೆದಿದೆ. ನನ್ನ ಮೇಲೆ ಈವರೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲ. ರಾಜಭವನವನ್ನು ಬಳಸಿಕೊಂಡು ಬಿಜೆಪಿ, ಜೆಡಿಎಸ್ ಹಾಗೂ ಕೇಂದ್ರ ಸರ್ಕಾರ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಬಿಜೆಪಿಯವರ ಪಿತೂರಿಯ ವಿರುದ್ಧ ಕಾನೂನು ಹಾಗೂ ರಾಜಕೀಯ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೇರುವ ಬಿಜೆಪಿ ಕನಸು ಈಡೇರದು: ಐವನ್ ಡಿಸೋಜ
ಹೈಕೋರ್ಟ್ ಆದೇಶಕ್ಕೆ ಧನ್ಯವಾದ, ಅಂತಿಮ ಗೆಲುವು ಸತ್ಯದ್ದೇ: ಸಿಎಂ
ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ರದ್ದುಪಡಿಸಲು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯವರೆಗೆ ವಿಶೇಷ ನ್ಯಾಯಾಲಯಗಳು ವಿಚಾರಣೆ ಮುಂದೂಡಬೇಕು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶ ನೀಡಿದ್ದು, ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾನು ಅಪಾರ ನಂಬಿಕೆಯಿಟ್ಟಿದ್ದೇನೆ. ಸುಳ್ಳು ಪ್ರಕರಣದಲ್ಲಿ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ರಾಜಕೀಯ ಪ್ರೇರಿತ ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಆಲಿಸಿ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತ ನನ್ನ ಧನ್ಯವಾದ ಸಲ್ಲಿಸುತ್ತೇನೆ. ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.