ರಾಜ್ಯದ ಸಚಿವರು ಮತ್ತು ಶಾಸಕರು ರಾಜ್ಯಪಾಲರಿಗೆ ಬೆದರಿಕೆ, ರಾಜ್ಯಕ್ಕೆ ಬೆಂಕಿ ಹಚ್ಚುವ ಅವಹೇಳನಕಾರಿಯಾಗಿ, ದ್ವೇಷಪೂರಿತ ಭಾಷಣದಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಐವಾನ್ ಡಿಸೋಜ ರಾಜ್ಯದಲ್ಲಿ ಬೆಂಕಿ ಹಚ್ಚುವ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೋಜಾ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ ಎನ್.ರವಿಕುಮಾರ್
ಬೆಂಗಳೂರು(ಆ.20): ಸಂವಿಧಾನಾತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರ ಕುರಿತು ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರ ಅವಹೇಳನಕಾರಿ ಮಾತುಗಳು ಖಂಡನೀಯವಾಗಿದ್ದು, ದ್ವೇಷಪೂರಿತ ಭಾಷಣದಿಂದ ಕಾನೂನು-ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರ್ಕಾರವೇ ಹೊಣೆ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಕೃಷ್ಣಬೈರೇಗೌಡ ರಾಜ್ಯಪಾಲರನ್ನು ಬಿಜೆಪಿ ಏಜೆಂಟ್, ನಾಲಾಯಕ್ ರಾಜ್ಯಪಾಲ ಎಂದಿದ್ದರೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದಲ್ಲಿ ಏನಾದರೂ ಆದ್ರೆ ರಾಜ್ಯಪಾಲರೇ ಹೊಣೆ ಎಂಬ ಹೇಳಿಕೆ ನೀಡಿದ್ದಾರೆ. ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್ ಸೇರಿ ಇತರೆ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಮಂಗಳೂರಿನಲ್ಲಿ ಮೇಲ್ಮನೆ ಸದಸ್ಯ ಐವಾನ್ ಡಿಸೋಜಾ, ಬಾಂಗ್ಲಾದೇಶದಲ್ಲಿ ಪ್ರಧಾನಿ ಮನೆಗೆ ನುಗ್ಗಿ ಪ್ರತಿಭಟಿಸಿದಂತೆ, ನಾವು ರಾಜಭವನಕ್ಕೆ ನುಗ್ಗಿ ಪ್ರತಿಭಟಿಸಿ ರಾಜ್ಯದಿಂದ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದಿದ್ದಾರೆ. ಇಂತಹ ಉದ್ರೇಕಕಾರಿ ಹೇಳಿಕೆಗಳು ಖಂಡನೀಯ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ದೊಡ್ಡ ಷಡ್ಯಂತ್ರ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ಸಚಿವರು ಮತ್ತು ಶಾಸಕರು ರಾಜ್ಯಪಾಲರಿಗೆ ಬೆದರಿಕೆ, ರಾಜ್ಯಕ್ಕೆ ಬೆಂಕಿ ಹಚ್ಚುವ ಅವಹೇಳನಕಾರಿಯಾಗಿ, ದ್ವೇಷಪೂರಿತ ಭಾಷಣದಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಐವಾನ್ ಡಿಸೋಜ ರಾಜ್ಯದಲ್ಲಿ ಬೆಂಕಿ ಹಚ್ಚುವ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೋಜಾ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ದಲಿತ ಸಮುದಾಯದವರೇ ಆದ ರಾಜ್ಯಪಾಲರ ಬಗ್ಗೆ ಕೀಳುಮಟ್ಟದ ಪದ ಪ್ರಯೋಗಿಸಿ, ರಾಜ್ಯಪಾಲರಿಗೆ ಬೆದರಿಸುವ, ರಾಜ್ಯಕ್ಕೆ ಬೆಂಕಿ ಹಚ್ಚುವ ಹೇಳಿಕೆಗಳನ್ನು ಕಾಂಗ್ರೆಸ್ ಪಕ್ಷದವರು ತಕ್ಷಣವೇ ನಿಲ್ಲಿಸಬೇಕು. ದಲಿತ ಕುಟುಂಬಕ್ಕೆ ಸೇರಿದ ಜಾಗವನ್ನೇ ಅಕ್ರಮವಾಗಿ ಕಬಳಿಸಿ, ಸೂರು ರಹಿತ ಬಡವರಿಗೆ ಅನ್ಯಾಯವೆಸಗಿ ಸಿಕ್ಕಿಬಿದ್ದಿರುವ ಮುಖ್ಯಮಂತ್ರಿಗಳ ವಿರುದ್ಧ ಹಲವಾರು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡೇ ಸಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯದ ರಾಜ್ಯಪಾಲರು ಅಭಿಯೋಜನೆಗೆ ಆದೇಶಿಸಿದ್ದಾರೆ. ಇದನ್ನು ಕಾಂಗ್ರೆಸ್ಸಿಗರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.