ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಕನಿಷ್ಠ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಮಾಡಿರುವ ಟೀಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬೆಂಗಳೂರು (ನ.01): ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಕನಿಷ್ಠ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಮಾಡಿರುವ ಟೀಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ನೀವು ಮತ್ತು ನಿಮ್ಮ ಸರ್ಕಾರ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಸುದೀರ್ಘ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಅವರು, ‘ಮಾನ್ಯ ಗಜೇಂದ್ರ ಸಿಂಗ್ ಶೆಖಾವತ್ ಅವರೇ, ನರೇಂದ್ರ ಮೋದಿ ನೇತೃತ್ವದ ನಿಮ್ಮ ಸರ್ಕಾರಕ್ಕೆ ಮುಖಭಂಗ ತಪ್ಪಿಸಲು ತಾವು ವ್ಯರ್ಥ ಕಸರತ್ತು ಮಾಡುತ್ತಿದ್ದೀರಿ. ಜನತೆಯ ಬಾಯಾರಿಕೆ ತಣಿಸಬೇಕಾದ ಕೇಂದ್ರ ಸರ್ಕಾರ ಬದಲಿಗೆ ತನ್ನ ಸುಳ್ಳುಗಳ ದಾಹ ತಣಿಸಿಕೊಳ್ಳಲು ಮುಂದಾಗಿ ನೀರಿನ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ನಡೆಸಿರುವುದು ಬೇಸರದ ಸಂಗತಿ. ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ನೀವು ಮತ್ತು ನಿಮ್ಮ ಸರ್ಕಾರ..’ ಎಂದು ಹೇಳಿದ್ದಾರೆ.
ನಾನೂ ರೈತನ ಮಗ, ಕಷ್ಟ ಏನೆಂದು ನನಗೂ ಗೊತ್ತಿದೆ: ಸಿದ್ದರಾಮಯ್ಯ
ಕೃಷ್ಣಾ ಮತ್ತು ಕಾವೇರಿ ಎಂಬ ಎರಡು ಜೀವನದಿಗಳು ಕರ್ನಾಟಕದ ಎರಡು ಕಣ್ಣುಗಳು. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕಾಗಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರು ಬಳಕೆಗೆ ಆಲಮಟ್ಟಿ ಜಲಾಶಯವನ್ನು ಪ್ರಸಕ್ತ ಇರುವ 519.60 ಅಡಿಯಿಂದ 524.256 ಅಡಿಗಳಿಗೆ ಏರಿಸಬೇಕಾಗಿದೆ. ವಿಪರ್ಯಾಸವೆಂದರೆ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ - 2 ತೀರ್ಪು ಘೋಷಿಸಿ ಒಂದು ದಶಕವೇ ಕಳೆದರೂ ತೀರ್ಪಿನ ಗೆಜೆಟ್ ಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿಲ್ಲ. ಇದು ಯೋಜನೆಯ ಜಾರಿಗೆ ತೊಡಕಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಕಳಸಾ ಮತ್ತು ಬಂಡೂರಿ ಯೋಜನೆ ವಿಚಾರದಲ್ಲಿಯೂ ಕೂಡ ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ವಿವಿಧ ಅನುಮತಿಗಳನ್ನು ದೊರಕಿಸಿಕೊಡುವಲ್ಲಿ ಕೇಂದ್ರ ಸರ್ಕಾರ ಸೋತಿದೆ. ಭದ್ರಾ ಮೇಲ್ದಂಡೆ ಮಧ್ಯ ಕರ್ನಾಟಕದ ಪ್ರಮುಖ ಏತ ನೀರಾವರಿ ಯೋಜನೆಯಾಗಿದ್ದು 29.90 ಟಿಎಂಸಿ ನೀರಿನ ಬಳಕೆಯೊಂದಿಗೆ ಸೂಕ್ಷ್ಮ ನೀರಾವರಿ ಯೋಜನೆ ಮೂಲಕ 2,25,515 ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಯೋಜನೆಗೆ ಅಗತ್ಯವಾದ ಎಲ್ಲ ಸಕ್ಷಮ ಪ್ರಾಧಿಕಾರಿಗಳ ಅನುಮತಿ, ಅನುಮೋದನೆಗಳ ಹೊರತಾಗಿಯೂ ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಕೇಂದ್ರ ಆಯವ್ಯಯದಲ್ಲಿ ರೂ.5,300 ಕೋಟಿ ಸಹಾಯಧನ ಘೋಷಿಸಿರುವುದರ ಹೊರತಾಗಿಯೂ ಈವರೆಗೆ ಯಾವುದೇ ಸಹಾಯಧನವನ್ನು ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ.
ಇನ್ನು, ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷದ ಬಗೆಗಿನ ನಮ್ಮ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಆ ಯೋಜನೆಯ ಪ್ರಸ್ತಾವವನ್ನು ಸಭೆಯ ಅಜೆಂಡಾದಲ್ಲಿ ಸೇರಿಸಲಾಗಿತ್ತು ಎಂದು ಉತ್ತರಿಸಿದ್ದಾರೆ. ಸಭೆಯ ಅಜೆಂಡಾದಲ್ಲಿ ಸೇರಿಸುವುದಷ್ಟೇ ಪ್ರಧಾನ ಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರ ಕೆಲಸವೇ? ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದು ಕೂಡಾ ಪ್ರಧಾನಿ ಮತ್ತು ಸಚಿವರ ಕರ್ತವ್ಯ ಅಲ್ಲವೇ? ಈ ಕೆಲಸದಲ್ಲಿ ಇಬ್ಬರೂ ವಿಫಲವಾಗಿದ್ದಾರೆ ಎಂದು ಕನ್ನಡಿಗರಿಗೆ ಅನಿಸಿದರೆ ತಪ್ಪಾದೀತೇ? ಎಂದಿದ್ದಾರೆ.
ಬರ ಪ್ರವಾಸದ ಬದಲು ಮೋದಿ ಕಾಲಿಗೆ ಬೀಳಿ: ಬಿಜೆಪಿಗರಿಗೆ ಸಿದ್ದು ಟಾಂಗ್
ಕಾವೇರಿ ಜಲಾನಯನ ಪ್ರದೇಶದಲ್ಲಿನ ಸಂಕಷ್ಟ ಪರಿಸ್ಥಿತಿಯ ನಿವಾರಣೆಗೆ ಮೇಕೆದಾಟು ಯೋಜನೆಯು ದೀರ್ಘಕಾಲೀನ ಶಾಶ್ವತ ಪರಿಹಾರ ಯೋಜನೆಯಾಗಿರುತ್ತದೆ. ಈ ಯೋಜನೆಯನ್ನು ಸಿಡ್ಲ್ಯುಎಂಎ/ಸಿಡ್ಲ್ಯುಸಿ ಪರಿಗಣಿಸಿ ಅಗತ್ಯ ಅನುಮತಿ ಹಾಗೂ ಸಮ್ಮತಿಗಳನ್ನು ನೀಡುವ ಮೂಲಕ ಬೆಂಗಳೂರು ಮತ್ತು ಸುತ್ತಮುತ್ತಲಿನ ಊರುಗಳ ಕುಡಿಯುವ ನೀರಿನ ಸಮಸ್ಯೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರಿಹರಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.