ರಾಜಕೀಯ ಪುಡಾರಿಯ ರೀತಿ ಪ್ರಧಾನಿ ಮೋದಿ ಸುಳ್ಳು ಆರೋಪ: ಬಹಿರಂಗ ಚರ್ಚೆಗೆ ಬನ್ನಿ ಎಂದ ಸಿದ್ದರಾಮಯ್ಯ

By Kannadaprabha News  |  First Published Nov 4, 2024, 5:39 AM IST

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.


ಬೆಂಗಳೂರು (ನ.04): ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೊತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಅವರೇ, ಕರ್ನಾಟಕ, ಭಾರತಕ್ಕೆ ತಾಯಿಯ ಸ್ಥಾನವನ್ನು ನೀಡಿದೆ. ಇದೇ ಪ್ರೀತಿ ಮತ್ತು ಬದ್ಧತೆಯಿಂದ ಪ್ರಾಮಾಣಿಕವಾಗಿ ತಮ್ಮ ಬೆವರಗಳಿಕೆಯನ್ನು ತೆರಿಗೆಯಾಗಿ ನೀಡಿ ದೇಶದ ಬೊಕ್ಕಸವನ್ನು ತುಂಬಿದವರು ಕನ್ನಡಿಗರು. ದೇಶದಲ್ಲಿ ಮಹಾರಾಷ್ಟ್ರದ ನಂತರ ಅತ್ಯಂತ ಹೆಚ್ಚು ನೇರ ತೆರಿಗೆ (11.9%) ಪಾವತಿಯಾಗಿರುವುದು ಕರ್ನಾಟಕ ರಾಜ್ಯದಲ್ಲಿ ಎನ್ನುವುದನ್ನು ಭಾರತೀಯ ಸ್ಟೇಟ್ ಬ್ಯಾಂಕ್ ವರದಿ ಒಪ್ಪಿಕೊಂಡಿರುವುದನ್ನು ನೀವು ಗಮನಿಸಿರಬಹುದೆಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ವಕ್ಫ್ ನೋಟಿಸ್‌ ವಾಪಸ್‌ಗೆ ಸೂಚಿಸಿದ ಮೇಲೂ ಬಿಜೆಪಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ

ಎಲ್ಲವನ್ನೂ ಪಕ್ಷ, ರಾಜಕೀಯದ ಹಳದಿ ಕನ್ನಡಕದಿಂದ ನೋಡುವ ಅಭ್ಯಾಸವನ್ನು ಬಿಟ್ಟು ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ ಕರ್ನಾಟಕದ ಅಭಿವೃದ್ದಿ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಬಡವರ ಕೈಗೆ ದುಡ್ಡು ಸಿಕ್ಕಿ ಅದು ಮಾರುಕಟ್ಟೆಗೆ ಹರಿದುಬಂದು ಅದರಿಂದ ತೆರಿಗೆ ಸಂಗ್ರಹವೂ ಹೆಚ್ಚಾಗಿ, ರಾಜ್ಯದ ಆರ್ಥಿಕತೆಗೆ ಬಲ ಬರಲಿದೆ ಎಂದು ಪ್ರಾರಂಭದಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ. ಅದು ಇಂದು ನಿಜವಾಗಿದೆ. ಇದಕ್ಕಾಗಿ ಕರ್ನಾಟಕಕ್ಕೆ ನೀವು ಶಹಾಬಾಸ್ ಗಿರಿ ಕೊಡಬೇಕಿತ್ತು, ಆದರೆ ನೀವು ಸುಳ್ಳಿನ ಬಾಣಗಳ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದ್ದೀರಿ. ಇದು ಖಂಡನೀಯ, ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಸನ್ಮಾನ್ಯ ಮೋದಿ ಅವರೇ, ನಮ್ಮ ಸರ್ಕಾರದ ಕಡೆಗೆ ಬೆರಳು ಮಾಡುವ ಮುನ್ನ ಕರ್ನಾಟಕದ ಬಿಜೆಪಿ ಪಕ್ಷದ ವಿನಾಶಕಾರಿ ಇತಿಹಾಸದ ಮೇಲೊಮ್ಮೆ ಕಣ್ಣಾಯಿಸಿ. ನಾವು ಜನರಿಗೆ ನೀಡಿದ್ದ ಪ್ರತಿ ಭರವಸೆಯನ್ನು ಈಡೇರಿಸಿದ್ದೇವೆ - ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ₹52,000 ಕೋಟಿಗೂ ಅಧಿಕ ಅನುದಾನದಲ್ಲಿ ಅನುಷ್ಠಾನಕ್ಕೆ ಕೊಟ್ಟಿದ್ದೇವೆ, ಇದರ ಜೊತೆಗೆ ನಾಡಿನ ಭವಿಷ್ಯ ರೂಪಿಸಲು ₹52,903 ಕೋಟಿ ಅನುದಾನ ಬಳಸಲಾಗುತ್ತಿದೆ.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಿಮ್ಮ ಪಕ್ಷದ ಸಾಧನೆ ಏನು? ಏಳು ಕೋಟಿ ಕನ್ನಡಿಗರ ಅಭಿವೃದ್ದಿಗಾಗಿ ವ್ಯಯವಾಗಬೇಕಾಗಿದ್ದ ಜನರ ಬೆವರ ಗಳಿಕೆಯ ತೆರಿಗೆ ಹಣವನ್ನು 40% ಕಮಿಷನ್ ರೂಪದಲ್ಲಿ ತಿಂದು ತೇಗಿದ್ದೇ? ಆದಾಯದ ಮೂಲಗಳನ್ನೆಲ್ಲ ಬರಿದು ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಳ‍್ಳಿದ್ದೇ? ಈ ರೀತಿ ಲೂಟಿ ಮಾಡಿದ್ದ ಹಣದಲ್ಲಿ ನಿಮಗೂ ಪಾಲು ಸಂದಾಯವಾಗಿದೆ ಎಂದು ನಿಮ್ಮ ಪಕ್ಷದ ನಾಯಕರೇ ಮಾಡಿರುವ ಆರೋಪ ನಿಮ್ಮ ಗಮನಕ್ಕೂ ಬಂದಿರಬಹುದಲ್ಲವೇ?ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ನಾಯಕರು ಲೂಟಿ ಮಾಡುತ್ತಿದ್ದ 40% ಕಮಿಷನ್ ಹಣವನ್ನು ನಾವು ನೇರವಾಗಿ ಜನರಿಗೆ ತಲುಪಿಸುತ್ತಿದ್ದೇವೆ.

ನಾವು ನುಡಿದಂತೆ ನಡೆದಿದ್ದೇವೆ, ನಿಮ್ಮ ಭರವಸೆಗಳೇನಾಯಿತು? ಪ್ರತಿಯೊಬ್ಬನ ಖಾತೆಗೆ ಹದಿನೈದು ಲಕ್ಷ ರೂಪಾಯಿ ಜಮೆ ಆಯಿತೇ? ಕಪ್ಪು ಹಣ ಮಾಯವಾಯಿತೇ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಯಿತೇ? ರೈತರ ಆದಾಯ ದುಪ್ಪಟ್ಟಾಯಿತೇ? ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ? ಎಲ್ಲಿದೆ ನಿಮ್ಮ ಮೇಕ್ ಇನ್ ಇಂಡಿಯಾ? ನಿಮ್ಮ ಸಾಧನೆಗಳಾದರೂ ಏನು? ನಾಡನ್ನು ಸಾಲದ ಕೂಪಕ್ಕೆ ತಳ್ಳಿದ್ದೆ? ಸುಳ್ಳು ಮತ್ತು ಅಪಪ್ರಚಾರದ ಮೂಲಕ ನಿಮ್ಮ ವೈಫಲ್ಯಗಳನ್ನು ಮುಚ್ಚಿಹಾಕಿದ್ದೇ? ನಿಮ್ಮ ಅತ್ಯಂತ ಪ್ರಮುಖ ಸಾಧನೆ ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಿದ್ದು. ನಿಮ್ಮ ಆಡಳಿತದಲ್ಲಿ 2024-25ರ ಆರ್ಥಿಕ ವರ್ಷದ ಅಂತ್ಯಕ್ಕೆ ದೇಶದ ಸಾಲ ₹185.27 ಲಕ್ಷ ಕೋಟಿಯ ಗಡಿ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಇದು ಜಿಡಿಪಿ 56.8% ಆಗಲಿದೆ. ಇದು ನಿಮ್ಮ ದುರಾಡಳಿತ ಮಾತ್ರವಲ್ಲ, ನೀವು ಪ್ರತಿಯೊಬ್ಬ ಭಾರತೀಯನ ಮೇಲೆ ಹೊರಿಸುತ್ತಿರುವ ಸಾಲದ ಹೊರೆಯೂ ಹೌದು.

ಸಿ.ಪಿ.ಯೋಗೇಶ್ವರ್‌ಗೆ ಅವರದ್ಧೇ ಆದ ಮತ ಬ್ಯಾಂಕ್ ಇದೆ: ಸಚಿವ ರಾಮಲಿಂಗಾರೆಡ್ಡಿ

ಪ್ರಧಾನಿ ನರೇಂದ್ರ ಮೋದಿ ಅವರೇ, ಆಗಾಗ ನೀವು ಸುಳ್ಳು ಸಂಗತಿಗಳನ್ನು ಪೋಣಿಸಿಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಬಂದಿದ್ದೀರಿ. ಈ  ತೂ ತೂ ಮೈ ಮೈ.. ಚರ್ಚೆಗೆ ತಾರ್ಕಿಕವಾದ ಅಂತ್ಯ ಹಾಡಿ ಬಿಡೋಣ. ಕಳೆದ ಎರಡು ಲೋಕಸಭಾ ಚುನಾವಣೆಯ ಮುನ್ನ ನಿಮ್ಮ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದು ಸಾರ್ವಜನಿಕ ಚರ್ಚೆಯನ್ನು ಹಮ್ಮಿಕೊಳ್ಳೋಣ. ಪ್ರಣಾಳಿಕೆಯಲ್ಲಿ ನೀವು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟನ್ನು ನೀವು ಈಡೇರಿಸಿದ್ದೀರಿ? ಎನ್ನುವುದನ್ನು ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ. ದೇಶದ ಪ್ರಜ್ಞಾವಂತ ಜನರೇ ಯಾರದ್ದು ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನುವುದನ್ನು ತೀರ್ಮಾನಿಸಲಿ ಎಂದು ಹೇಳಿದ್ದಾರೆ.

click me!