
ಚಿತ್ರದುರ್ಗ (ನ.04): ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ದಶಕಗಳಿಂದ ರೈತರ ಪರವಾಗಿ ಧ್ವನಿ ಎತ್ತುತ್ತಿರುವ ಧೀಮಂತ ನಾಯಕ. ಬಿಎಸ್‌ವೈ ಪಕ್ಷ ಕಟ್ಟದಿದ್ದರೆ ಕೆಲವರಿಗೆ ವೇದಿಕೆ ಹತ್ತುವ ಯೋಗ್ಯತೆ ಎಲ್ಲಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಯತ್ನಾಳ್‌ಗೆ ಕುಟುಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಎಸ್‌ವೈ ಬಿಜೆಪಿ ವೇದಿಕೆ ಹತ್ತಬಾರದು ಎಂಬ ಯತ್ನಾಳ್ ಹೇಳಿಕೆಗೆ ಕಿಡಿ ಕಾರಿದ ವಿಜಯೇಂದ್ರ, ಯತ್ನಾಳ್ ಯಾವಾಗ ಏನು ಮಾತಾಡುತ್ತಾರೆ ಎಂಬುದನ್ನು ಆ ಭಗವಂತನೇ ಬಲ್ಲ.
ಬಿಎಸ್‌ವೈ, ಅನಂತಕುಮಾರ್ ಪಕ್ಷ ಕಟ್ಟಿದ್ದಾರೆ. ಅವರು ಪಕ್ಷ ಕಟ್ಟದಿದ್ದರೆ ವೇದಿಕೆ ಹತ್ತುವ ಯೋಗ್ಯತೆಯೂ ಕೆಲವರಿಗಿರುತ್ತಿರಲಿಲ್ಲ. ಬಿಎಸ್‌ವೈ ಕೊಡುಗೆ ಮರೆತಿದ್ದರೆ ಯತ್ನಾಳ್ ನೆನಪಿಸಿಕೊಳ್ಳಲಿ. ಯತ್ನಾಳ್ ಮನಬಂದಂತೆ ಮಾತಾಡುವುದನ್ನು ಬಿಡಲಿ. ಹಗುರವಾಗಿ ಮಾತಾಡಿದರೆ ಮುಂದೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿ.ಪಿ.ಯೋಗೇಶ್ವರ್‌ಗೆ ಅವರದ್ಧೇ ಆದ ಮತ ಬ್ಯಾಂಕ್ ಇದೆ: ಸಚಿವ ರಾಮಲಿಂಗಾರೆಡ್ಡಿ
ರೈತರ ಒಂದಿಂಚೂ ಭೂಮಿ ಕಸಿಯಲು ಬಿಡಲ್ಲ: ತಲೆತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ನಮ್ಮ ರೈತರಿಂದ ಒಂದೇ ಒಂದು ಇಂಚು ಭೂಮಿ ಕಸಿಯಲು ಬಿಡುವುದಿಲ್ಲ ಎಂದು ಗುಡುಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದಕ್ಕಾಗಿ ಎಂಥ ಹೋರಾಟಕ್ಕೂ ಪಕ್ಷ ಕಟಿಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಲೆತಲಾಂತರದಿಂದ ಇದ್ದ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಆಸ್ತಿ ಎಂಬುದಾಗಿ ಘೋಷಿಸಿದರೆ ರೈತರು ಬೀದಿಗೆ ಬಂದು ಏನು ಮಾಡಬೇಕು ಎಂದು ಖಾರವಾಗಿ ಪ್ರಶ್ನಿಸಿದರು.
ಈ ರೀತಿ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ, ಈ ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಮಾಡುತ್ತಾ ಬರುತ್ತಿದೆ. ಅದೇ ನಿಟ್ಟಿನಲ್ಲಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ಇವತ್ತು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆದಿದೆ. ಅವರ ನೇತೃತ್ವದಲ್ಲೇ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ. ಜಮೀರ್ ಅಹಮದ್ ಮುಖ್ಯಮಂತ್ರಿಗಳ ಬಲಗೈ ಬಂಟ ಎಂದು ಬಿಂಬಿತವಾಗಿರುವುದರಿಂದ ಈ ವಕ್ಫ್ ಆಸ್ತಿ ವಿವಾದ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ ಸೃಷ್ಟಿಯಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಕುಮಾರಸ್ವಾಮಿಯಿಂದ ನಯಾಪೈಸೆ ಉಪಯೋಗವಾಗಲಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್
ಸಚಿವರು 120 ಜನ ರೈತರಿಗೆ ನೋಟಿಸ್ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬಿಜೆಪಿ ಹೊಣೆಗಾರವೇ? ಅದಕ್ಕೆ ಬಿಜೆಪಿ ಕಾರಣವೇ? ಇದನ್ನು ಬಿಜೆಪಿ ಗಟ್ಟಿಯಾಗಿ ತೆಗೆದುಕೊಳ್ಳದೆ ಇದ್ದರೆ ರಾಜ್ಯ ಸರ್ಕಾರದ ಕ್ರಮದಿಂದ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರು ಬೀದಿಗೆ ಬರಬೇಕಾಗುತ್ತಿತ್ತು ಎಂದು ವಿಜಯೇಂದ್ರ ವಿಶ್ಲೇಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.