
ಬೆಂಗಳೂರು (ಸೆ.01): ಎಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹೆಸರು ಬಂದುಬಿಡುತ್ತದೆಯೋ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಭವನದಲ್ಲಿ ನಡೆದ ನುಲಿಯ ಚಂದಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, ನಾವು ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಆರಂಭದಲ್ಲಿ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾಗಿ ಒಪ್ಪಿತ್ತು.
ಆದರೆ, ಬಳಿಕ ಹಣ ನೀಡುತ್ತೇವೆ ಅಕ್ಕಿ ಕೊಡಿ ಎಂದೂ ಕೊಡಲು ಒಪ್ಪಲಿಲ್ಲ. ಆದರೂ ನಾವೀಗ ಜನತೆಗೆ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕಾಗ ಅಕ್ಕಿಯನ್ನೇ ಜನತೆಗೆ ನೀಡಲಾಗುವುದು ಎಂದರು. ಕೆಲವರೆಲ್ಲ ಪಡಿತರ ಅಕ್ಕಿಯನ್ನು ಜನ ಮಾರಿಕೊಂಡು ಬಿಡುತ್ತಾರೆ ಎಂದು ಲಘುವಾಗಿ ಮಾತನಾಡುತ್ತಾರೆ. ಮಾರಿಕೊಂಡರೆ ಮಾರಿಕೊಳ್ಳಲಿ, ನಮ್ಮ ಉದ್ದೇಶ ಬಡಜನ ಹೊಟ್ಟೆಹಸಿವಿನಿಂದ ಇರಬಾರದು ಎಂಬುದಷ್ಟೇ ಆಗಿದೆ ಎಂದರು.
ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ: ಶೋಭಾ ಕರಂದ್ಲಾಜೆ
ಮತ್ತೆ ಮಾರ್ಧನಿಸಿತು ಹೌದೋ ಹುಲಿಯಾ!: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ನಡುವೆ ‘ಹೌದೋ ಹುಲಿಯಾ’ ಘೋಷಣೆ ಮಾರ್ಧನಿಸಿತು. ಐದು ಗ್ಯಾರಂಟಿಗಳ ಕುರಿತು ಮಾತನಾಡುತ್ತ ನಾನು ಮುಖ್ಯಮಂತ್ರಿಯಾದ ಬಳಿಕ ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ ಎಂದಾಗ ಸಭಾಂಗಣದಲ್ಲಿದ್ದವರು ಹುಲಿಯಾ ಘೋಷಣೆ ಕೂಗುತ್ತಿದ್ದಂತೆ ಸಭಾಸದರು ಚಪ್ಪಾಳೆ ತಟ್ಟಿಹರ್ಷ ವ್ಯಕ್ತಪಡಿಸಿದರು.
ಇನ್ನು, ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಸರ್ಕಾರ ಬಡವರ, ಮಹಿಳೆಯರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೇ ಯೋಜನೆ ಯೋಜನೆಗಳಿಂದ ಜನ ಸಂತುಷ್ಟಗೊಂಡಿದ್ದಾರೆ ಎಂದರು. ದಿನಕ್ಕೆ 50ಲಕ್ಷದಂತೆ ಈವರೆಗೆ 48ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕುಳುವ ಸಮಾಜ ಎಸ್‌ಸಿಯಿಂದ ಕೈಬಿಡಲ್ಲ: ಪರಿಶಿಷ್ಟಜಾತಿ ಪಟ್ಟಿಯಿಂದ ಕುಳುವರನ್ನು ಕೈಬಿಡಲು ಸಾಧ್ಯವಿಲ್ಲ, ಸಮುದಾಯದವರು ಅಂತಹ ಆತಂಕ ಪಡುವುದು ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಅವರು ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ನುಲಿಯ ಚಂದಯ್ಯ ಜಯಂತಿ’ ಉದ್ಘಾಟಿಸಿ ಮಾತನಾಡಿದರು. ಕುಳುವ ಸಮಾಜದ ಹಲವರಲ್ಲಿ ತಮ್ಮನ್ನು ಪರಿಶಿಷ್ಟಜಾತಿ ಪಟ್ಟಿಯಿಂದ ಹೊರಗೆ ಇಡಬಹುದು ಎನ್ನುವ ಆತಂಕವಿರುವ ವಿಚಾರ ಗಮನದಲ್ಲಿದೆ.
ಆದರೆ, ಆ ಆತಂಕ ಬೇಡವೆಂದು ಮುಖ್ಯಮಂತ್ರಿಯಾಗಿ ನಾನೇ ಹೇಳುತ್ತೇನೆ ಎಂದು ಅಭಯ ನೀಡಿದರು. ಜೊತೆಗೆ ನುಲಿಯ ಚಂದಯ್ಯ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಮತ್ತು ಅನುದಾನ ನೀಡಬೇಕು ಎನ್ನುವ ಸಮುದಾಯದ ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು. ಜಾತಿ ವ್ಯವಸ್ಥೆ, ತಾರತಮ್ಯದ ವಿರುದ್ಧ ಕ್ರಾಂತಿ ಮಾಡಿದ್ದ ಶರಣರಲ್ಲಿ ನುಲಿಯ ಚಂದಯ್ಯ ಪ್ರಮುಖರು. ಹಾಗಾಗಿ ಬಸವಣ್ಣನವರಿಗೆ ನುಲಿಯ ಚಂದಯ್ಯರ ಬಗ್ಗೆ ಬಹಳ ಅಭಿಮಾನ ಪ್ರೀತಿಯಿತ್ತು. ಕುಳುವ ಸಮಾಜದ ಸನಾದಿ ಅಪ್ಪಣ್ಣ ಕುರಿತ ಡಾ.ರಾಜಕುಮಾರ್ ಅವರ ಅಭಿನಯದ ಸಿನಿಮಾವನ್ನು ಹಲವು ಬಾರಿ ನೋಡಿ ಇಷ್ಟಪಟ್ಟಿದ್ದೇನೆ ಎಂದರು.
ಸುಪ್ರೀಂಕೋರ್ಟ್ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ!
ಯಾರು ಯಾವ್ಯಾವ ಕಸುದು ಮಾಡುತ್ತಿದ್ದರೋ ಅದನ್ನೇ ಮಾಡುತ್ತಿರಲಿ, ಹೆಚ್ಚಿನ ಪ್ರಗತಿ ಕಾಣಬಾರದು ಎನ್ನುವ ಸ್ವಾರ್ಥ ಜಾತಿ ವ್ಯವಸ್ಥೆಗೆ ಕಾರಣವಾಯಿತು. ಧರ್ಮವನ್ನು ಅರ್ಥ ಮಾಡಿಕೊಳ್ಳಲು ದೊಡ್ಡ ಗ್ರಂಥಗಳನ್ನು ಓದುವ ಅಗತ್ಯವಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಜಾತಿ-ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದೇ ಅಧರ್ಮ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.