
ಬೆಂಗಳೂರು (ನ.01): ‘ಬಿಜೆಪಿ ನಾಯಕರೇ ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸಕ್ಕೆ ಮುಂದಾಗಿದ್ದೀರಲ್ಲ, ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಕಳುಹಿಸಿದ್ದ ತಜ್ಞರ ತಂಡ ಈಗಾಗಲೇ ಅಧ್ಯಯನ ನಡೆಸಿ ಹೋಗಿದೆ, ನಿಮಗೆ ಆ ತಂಡದ ಮೇಲೆ ನಂಬಿಕೆ ಇಲ್ಲವೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲದೆ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ. ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ.
ಬರಗಾಲದ ನಷ್ಟ - ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದ ಇರಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು, ‘ದೊರೆಯ ತನಕ ದೂರು ಕೊಂಡೊಯ್ಯಲಾಗದವರು ಹೊಳೆಯ ತನಕ ಓಡಿದರಂತೆ’ ಎಂಬ ಗಾದೆ ಮಾತಿನಂತೆ ರಾಜ್ಯ ಬಿಜೆಪಿ ನಾಯಕರದ್ದು ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ. ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಕನ್ನಡದ ಕನಸು ಮುಗಿಲಗಲಕ್ಕೂ ಹಬ್ಬಿಸೋಣ: ರಾಜ್ಯೋತ್ಸವಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ
ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರುಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರು. ಪರಿಹಾರ. ಆದರೆ, ಕೇಂದ್ರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನಿಮಗೆ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಂದಿದ್ದಾರೆ.
25 ಸಂಸದರು ಕಳ್ಳೆಕಾಯಿ ತಿನ್ನುತ್ತಿದ್ದಾರಾ?: ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಅವರೇನು ಮಾಡುತ್ತಿದ್ದಾರೆ? ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರೆಂದಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಬಾಯಿ ಬಿಟ್ಟಿದ್ದಾರಾ? ಎಂದು ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರೇ ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ.
ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಒಪ್ಪಿಗೆ ನೀಡಿ: ಹೈಕೋರ್ಟ್
ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ. ನೆಲ-ಜಲ-ಭಾಷೆಯ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಾಲು ಸಾಲು ಅನ್ಯಾಯ ಮಾಡಿ ಯಾವ ಮುಖ ಹೊತ್ತು ರಾಜ್ಯ ಪ್ರವಾಸ ಹೊರಟಿದ್ದೀರಿ? ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಪರಿಹಾರ. ಬರಗಾಲದ ನಷ್ಟ - ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದ ಇರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.