
ಬೆಳಗಾವಿ (ಜೂ.22): ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ನಾಮವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆಡಿಯೋ ವೈರಲ್ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ರಾಯರೆಡ್ಡಿ ಸರ್ಕಾರದಲ್ಲಿ ದೊಡ್ಡ ಭ್ರಷ್ಟಾಚಾರ ಇದೆ ಎಂದು ಹೇಳಿದ್ದರು. ಬಿ.ಆರ್. ಪಾಟೀಲ್, ಜಮೀರ್ ಪಿಎ ಜೊತೆಗೆ ಮಾತನಾಡಿದ ಆಡಿಯೋ ಬಂದಿದೆ.
ಶಿಫಾರಸ್ಸು ಮಾಡಿದವರನ್ನು ಬಿಟ್ಟು ಹಣ ಕೊಟ್ಟವರಿಗೆ ಮನೆ ನೀಡಲಾಗುತ್ತಿದೆ. ಹಣ ಕೊಟ್ಟರೆ ಎಲ್ಲಾ ಕೆಲಸ ಆಗುತ್ತದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಆರೋಪಿಸಿದರು. ಕಾಂಗ್ರೆಸ್ಸಿನವರು ಸುಮ್ಮನೆ ಬಿಜೆಪಿಯ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದರು. ಈ ಸರ್ಕಾರದ ಭ್ರಷ್ಟಾಚಾರ ಈಗ ಫ್ರೂವ್ ಆಗಿದೆ. ಕಂದಾಯ ಮಂತ್ರಿ ಬೈರೇಗೌಡ ಅವರು ತಹಸೀಲ್ದಾರ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಹಣ ಕೊಟ್ಟವರ ಕೆಲಸ ಬೇಗ ಆಗುತ್ತೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ತಹಸೀಲ್ದಾರ್ ಕಚೇರಿಯ ಈ ಕೆಲಸಕ್ಕೆ ಇಷ್ಟು ಹಣ ಎಂದು ಬೋರ್ಡ್ ಹಾಕಿ ಎಂದು ಸ್ವತಃ ಕಂದಾಯ ಸಚಿವರೇ ಹೇಳಿದ್ದಾರೆ ಎಂದರು.
ಬಣಜಿಗ ಸಂಘದಿಂದ ರಚನಾತ್ಮಕ ಕಾರ್ಯವಾಗಲಿ: ಉಜ್ವಲ ಪರಂಪರೆ ಮತ್ತು ವಿಶಿಷ್ಟವಾದ ಇತಿಹಾಸವನ್ನು ಲಿಂಗಾಯತ ಬಣಜಿಗ ಸಮಾಜ ಹೊಂದಿದ್ದು, ಮಕ್ಕಳ ವಿದ್ಯಾಭ್ಯಾಸದ ಜತೆಗೆ ಸಮಾಜಕ್ಕೆ ಅವಶ್ಯಕತೆ ಇರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬಣಜಿಗ ಸಮಾಜ ಸಂಘಟಿತರಾಗಿರುವುದು ಸ್ವಾಗತಾರ್ಹ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು. ನಗರದ ರಜನಿ ಕನ್ವೆನ್ಶನ್ ಹಾಲ್‌ನಲ್ಲಿ ನಡೆದ ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಎಲ್ಲ ಜಾತಿಯ ಒಳಪಂಗಡಗಳು ತಮ್ಮ ಪಂಗಡದ ಸಂಘಗಳನ್ನು ರಚಿಸಿಕೊಂಡು ಅವರ ಒಳಿತಿಗಾಗಿ ಪ್ರಯತ್ನಿಸುತ್ತಿವೆ. ಬಣಜಿಗ ಸಮಾಜವು ಲಿಂಗಾಯತ ಇತರ ಒಳಪಂಗಡಗಳ ಹಾಗೂ ಇತರ ಜಾತಿ-ಧರ್ಮಗಳ ಜತೆಗೆ ಉತ್ತಮ ಹಾಗೂ ಸೌಹಾರ್ದಯುತ ಬಾಂಧವ್ಯವನ್ನು ಇರಿಸಿಕೊಂಡು ಸಾಮರಸ್ಯದಿಂದ ಬದುಕುವ ಸಮಾಜವಾಗಿದೆ. ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಸಮಾಜದ ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜದಲ್ಲಿ ಹಿಂದುಳಿದಿರುವ ಜನರಿಗೆ ಸಹಾಯಹಸ್ತ ನೀಡಬೇಕು. ಅಲ್ಲದೇ ಈ ಸಂಘದಿಂದ ಕಾಲಕಾಲಕ್ಕೆ ರಚನಾತ್ಮಕ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾವೇರಿ ಶಹರ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಅಜಿತ ಮಾಗಾವಿ ಮಾತನಾಡಿ, ಎಲ್ಲ ಜಾತಿ, ಧರ್ಮಗಳ ಒಳಪಂಗಡಗಳ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಜತೆಗೆ ಬಣಜಿಗ ಸಮಾಜ ಬಾಂಧವರನ್ನು ಸಂಘಟಿಸಿ ಅವಶ್ಯಕತೆ ಇರುವ ಬೇಡಿಕೆ ಈಡೇರಿಸಿಕೊಳ್ಳುವುದು ಸಂಘದ ಮೂಲ ಉದ್ದೇಶವಾಗಿದೆ. ಎಲ್ಲರ ಸಹಕಾರ, ಮಾರ್ಗದರ್ಶನ ಅವಶ್ಯಕ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.