ಬಹಿರಂಗ ಹೇಳಿಕೆ ನೀಡಿದರೆ ಹೈಕಮಾಂಡ್‌ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

Kannadaprabha News   | Kannada Prabha
Published : Jul 03, 2025, 06:37 AM IST
Karnataka Chief Minister Siddaramaiah (File Photo/ANI)

ಸಾರಾಂಶ

ಸರ್ಕಾರ, ಪಕ್ಷದ ಆಂತರಿಕ ವಿಚಾರ ಹಾಗೂ ಅಧಿಕಾರ ಬದಲಾವಣೆ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎಂದು ಹೈಕಮಾಂಡ್‌ ಸ್ಪಷ್ಟ ಸೂಚನೆ ನೀಡಿದೆ.

ನಂದಿಬೆಟ್ಟ (ಜು.03): ಸರ್ಕಾರ, ಪಕ್ಷದ ಆಂತರಿಕ ವಿಚಾರ ಹಾಗೂ ಅಧಿಕಾರ ಬದಲಾವಣೆ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎಂದು ಹೈಕಮಾಂಡ್‌ ಸ್ಪಷ್ಟ ಸೂಚನೆ ನೀಡಿದೆ. ಇದನ್ನು ಯಾರೇ ಉಲ್ಲಂಘಿಸಿದರೂ ಹೈಕಮಾಂಡ್‌ನ ಕ್ರಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾಯಕತ್ವ ಬದಲಾವಣೆ ಹಾಗೂ ಸರ್ಕಾರದ ಕುರಿತ ಶಾಸಕರು ಹಾಗೂ ಸಚಿವರ ಬಹಿರಂಗ ಹೇಳಿಕೆಗಳ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಬಾರಿ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಅನಗತ್ಯ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಿ ಸರ್ಕಾರದಲ್ಲಿ ಗೊಂದಲ ಮೂಡಿಸಬಾರದು. ಈ ಬಗ್ಗೆ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದ್ದು ಎಚ್ಚರ ತಪ್ಪಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದರು. ಸಭೆ ಮುಗಿದು ಹೊರಡುವಾಗಲೂ ಪುನಃ ನೆನಪಿಸಿ ಮರೆಯದಂತೆ ಎರಡನೇ ಬಾರಿಯೂ ಒತ್ತಿ ಹೇಳಿ ಎಚ್ಚರಿಕೆ ನೀಡಿದರು ಎಂದು ಹೇಳಲಾಗಿದೆ. ಶಾಸಕರ ಬಹಿರಂಗ ಹೇಳಿಕೆಗಳಿಗೆ ನೀವೇ ಕಡಿವಾಣ ಹಾಕಬೇಕು. ಅವರರನ್ನು ಕರೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ಅವರ ಬೇಡಿಕೆಗಳು ಈಡೇರಿಸಲು ಆಗುವುದಿಲ್ಲ ಎನ್ನುವುದಾದರೆ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಪಕ್ಷದವರು ಮೂಢಾತ್ಮರು: ಸಿದ್ದರಾಮಯ್ಯ ಅವರ ಕಾಲುಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ ಎಂದು ವಿರೋಧಪಕ್ಷಗಳು ಟೀಕಿಸಿದ್ದವು. ಈಗ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗುತ್ತಿದೆ. ವಿರೋಧಪಕ್ಷಗಳು ಮೂಢಾತ್ಮರು. ಈಗ ಏನು ಹೇಳುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ-ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ. ಬಿತ್ತನೆ ಬೀಜ ಕೇಳಿದವರ ಮೇಲೆ ಗೋಲಿಬಾರ್ ಮಾಡಿದ್ದೇವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಪ್ರಶ್ನಿಸಿದರು.

ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಲಿ: ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಶಾಸಕರಿಗೆ ೫೦ ಕೋಟಿ ರು. ಕೊಡಲಾಗಿದೆ. ಡಿ.ಕೆ.ಶಿವಕುಮಾರ್‌ಗೆ ಹೇಳಿ ನೀರಾವರಿಗೆ ಅಂತ ಕೊಡಿಸಿದ್ದೇನೆ. ಆದರೂ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿಗೆ ಕೆಲಸಗಳಿಗೆ ದುಡ್ಡಿಲ್ಲ ಎಂದು ವಿಪಕ್ಷದವರು ಟೀಕೆ ಮಾಡುತ್ತಾರೆ. ಯಾವ ಅಭಿವೃದ್ಧಿಗೆ, ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಲಿ. ಅಭಿವೃದ್ಧಿಗಾಗಿ ಗ್ಯಾರಂಟಿಗಳನ್ನು ನಿಲ್ಲಿಸಿಲ್ಲ. ಗ್ಯಾರಂಟಿಗಳನ್ನು ಕೊಟ್ಟರೆ ಆರ್ಥಿಕ ದಿವಾಳಿ ಆಗುತ್ತೆ ಎಂದಿದ್ದರು. ಆರ್ಥಿಕ ಶಿಸ್ತಿನ ಮೂಲಕ ಆಡಳಿತ ಮಾಡಿರೋದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಸಮರ್ಥನೆ ಮಾಡಿಕೊಂಡರು.

ಅಣೆಕಟ್ಟು ಭರ್ತಿ ದಾಖಲೆ ಸ್ಮಾರಕವಾಗಲಿ: ಇಡೀ ದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂಬರ್ ೨ ಸ್ಥಾನದಲ್ಲಿದೆ. ದಿವಾಳಿ ಆಗಿದ್ದರೆ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯವಾಗುತ್ತಿತ್ತಾ. ರಾಜ್ಯಾದ್ಯಂತ ನೀರಾವರಿಗೆ ೨೫ ಸಾವಿರ ಕೋಟಿ ರು. ಕೊಟ್ಟಿದ್ದೇವೆ. ಪ್ರಕೃತಿ ಕೃಪೆಯಿಂದ ಜೂನ್‌ನಲ್ಲೇ ಬಾಗಿನ ಅರ್ಪಿಸಿದ್ದೇವೆ. ಇದು ವಿಶೇಷವಾದ ದಾಖಲೆ. ಇದು ಜನರ ನೆನಪಿನಲ್ಲಿ ಉಳಿಯಬೇಕು. ಮುಂದಿನ ಜನಾಂಗಕ್ಕೂ ಗೊತ್ತಾಗಬೇಕು. ಹೀಗಾಗಿ ಇದರ ಜ್ಞಾಪಕಾರ್ಥವಾಗಿ ಆದಷ್ಟು ಬೇಗ ಇಲ್ಲೊಂದು ಸ್ಮಾರಕ ನಿರ್ಮಾಣ ಮಾಡುವಂತೆ ಸ್ಥಳೀಯ ಶಾಸಕರು ಮತ್ತು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು