
ಚಿಕ್ಕಬಳ್ಳಾಪುರ (ಜು.02): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಭಾರೀ ಜೋರಾಗಿದೆ. ಇತ್ತ ರಾಮನಗರ ಶಾಸಕ ಸಿಎಂ ಬದಲಾವಣೆ ಅಗತ್ಯವಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ ಆಗಿರ್ತೀನಿ. ನಿಮಗೇಕೆ ಅನುಮಾನ ಎಂದು ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ನೀವು 5 ವರ್ಷ ಸಿಎಂ ಆಗಿರ್ತೀರಾ? ಎಂಬ ಪ್ರಶ್ನೆಗೆ ಹೌದು ನಿನಗೇಕೆ ಅನುಮಾನ? ಎಂದು ಹೇಳುವ ಮೂಲಕ ತಾವೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ಖಚಿತಪಡಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ಬೇಟಿಯಾಗಿ ಬಂದ ಬೆನ್ನಲ್ಲಿಯೇ ರಾಜ್ಯದಲ್ಲಿ ಸೆಪ್ಟಂಬರ್ ಕ್ರಾಂತಿ ನಡೆಯಲಿದೆ. ಸಿಎಂ ಬದಲಾವಣೆ ಅಥವಾ ಸಚಿವರ ಬದಲಾವಣೆ ಆಗಲಿದೆ ಎಂಬ ಚರ್ಚೆ ನಡೆಯುತ್ತಿತ್ತು. ಇದೀಗ ಸಿದ್ದರಾಮಯ್ಯ ಅವರು ನಾನೇ ಸಿಎಂ ಎನ್ನುವ ಮೂಲಕ ಚರ್ಚೆಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತು ಮುಂದುವರೆಸಿದ ಸಿಎಂ ಸಿದ್ದರಾಮಯ್ಯ ಅವರು, 'ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸತ್ಯ ಹೇಳುವುದು ಗೊತ್ತೇ ಇಲ್ಲ ಅವರಿಗೆ. ಅವರು ನಂಬುತ್ತಾರಾ ಬಿಡುತ್ತಾರಾ ಗೊತ್ತಿಲ್ಲ. ನಾವು ಎಲ್ಲ ಒಟ್ಟಾಗಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಈಗಾಗಲೇ ಮೈಸೂರಲ್ಲಿ ಹೇಳಿದ್ದೀನಿ. 5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಕಲ್ಲುಬಂಡೆ ತರಹ ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ. ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ. ಯಾವುದಾದರೂ ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ನೊಟೀಸ್ ಜಾರಿ ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ನಾವು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದರೆ ಇಕ್ಬಾಲ್ ಹುಸೇನ್‌ಗೂ ನೋಟಿಸ್ ಕೊಡ್ತೀನಿ, ಬೇರೆಯವರಿಗೂ ನೊಟೀಸ್ ಕೊಡಬೇಕಾಗುತ್ತದೆ. ಪಕ್ಷದ ಶಿಸ್ತು ಯಾರು ಉಲ್ಲಂಘನೆ ಮಾಡಬಾರದು, ಪಕ್ಷದಲ್ಲಿ ಶಿಸ್ತು ಮುಖ್ಯ. ನಾನು ಯಾರಿಗೂ ನನ್ನ ಹೆಸರು ಹೇಳಿ, ಸಿಎಂ ಮಾಡಿ ಅಂತ ಹೇಳೋ ಅವೆಲ್ಲ ಅವಶ್ಯಕತೆ ಎನಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಬೇರೆ ಯಾರು ಅಪಸ್ವರ ಎತ್ತಬಾರದು. ಪಕ್ಷಕ್ಕೆ ಎಲ್ಲರೂ ಕಷ್ಟಪಟ್ಟಿದ್ದಾರೆ. ನನ್ನಂತ ನೂರಾರು ಕಾರ್ಯಕರ್ತರು ಕಷ್ಟ ಪಟ್ಟಿದ್ದಾರೆ, ನಾನು ಒಬ್ಬನೇ ಕಷ್ಟಪಟ್ಟಿದ್ದೀನಾ.? ಸಾವಿರಾರು ಜನ, ಲಕ್ಷಾಂತರ ಜನ ಕಷ್ಟಪಟ್ಟಿದ್ದಾರೆ. ಮೊದಲು ನಾವು ಅವರ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.
ಶಾಸಕರಿಂದ ಸುರ್ಜೇವಾಲ ಅಭಿಪ್ರಾಯ ಸಂಗ್ರಹ ವಿಚಾರದ ಬಗ್ಗೆ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ ಎಲ್ಲೂ ಅಸಮಾಧಾನ ಇರಲಿಲ್ಲ, ಯಾರಿಗೂ ಅಸಮಾಧಾನ ಇಲ್ಲ. ಶಾಸಕರಿಗೆ ಪಕ್ಷ ಮತ್ತು ಸಂಘಟನೆ ವಿಚಾರದಲ್ಲಿ ಜವಾಬ್ದಾರಿ ನಿಗದಿ ಮಾಡ್ತಿದ್ದಾರೆ. ಶಾಸಕರು ಏನ್ ಮಾಡಬೇಕು? ನಿಮ್ಮದು ಏನು, ಚುನಾವಣೆ ಗೆ ಈಗಿನಿಂದಲೇ ಹೇಗೆ ಸಿದ್ದತೆ ಮಾಡಬೇಕು ಅಂತ ಸುರ್ಜೇವಾಲ ಸೂಚನೆ ಕೊಟ್ಟಿದ್ದಾರೆ ಎಂದು ಮಾಹಿರಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.