
ಮೈಸೂರು (ಸೆ.03): ‘ಧರ್ಮಸ್ಥಳ ಚಲೋ ಎಂದು ಹೋಗಿ ಸಮಾವೇಶ ಮಾಡಿದ ಬಿಜೆಪಿಗರು, ಮೊದಲು ಧರ್ಮಾಧಿಕಾರಿ ಡಾ। ವಿರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸುತ್ತಾರೆ. ನಂತರ ಹೆಗ್ಗಡೆ ಕುಟುಂಬದ ಮೇಲೆಯೇ ಆರೋಪ ಇರುವ ಹ*ತ್ಯೆಯಾದ ಸೌಜನ್ಯಾಳ ಮನೆಗೂ ಹೋಗುತ್ತಾರೆ. ಹಾಗಾದರೆ ಬಿಜೆಪಿಯವರು ಯಾರ ಪರ ಇದ್ದಾರೆ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಮೂಲಕ ಸೌಜನ್ಯ ಮನೆಗೆ ಮೊನ್ನೆ ತೆರಳಿ ಕಾನೂನು ಹೋರಾಟಕ್ಕೆ ನೆರವು ನೀಡುವುದಾಗಿ ಆಕೆಯ ಕುಟುಂಬಕ್ಕೆ ಭರವಸೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹ*ತ್ಯೆಯಾದ ಸೌಜನ್ಯ ಪ್ರಕರಣವನ್ನು ಮತ್ತೆ ಸಿಬಿಐಗೆ ಕೊಡಬೇಕು ಎಂದು ಬಿಜೆಪಿ ಹೇಳುತ್ತಿದೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅವರೇ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸುಪ್ರೀಂಕೋರ್ಟ್‌ಗೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆಯೇ ಆರೋಪವಿದೆ. ಹಾಗಾದರೆ, ಬಿಜೆಪಿಯವರು ಯಾರ ಪರ ಇದ್ದಾರೆ?’ ಎಂದು ಪ್ರಶ್ನಿಸಿದರು. ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಬಿಜೆಪಿಯದು ರಾಜಕೀಯ ಯಾತ್ರೆ: ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮಯಾತ್ರೆಯಲ್ಲ, ರಾಜಕೀಯ ಯಾತ್ರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಈಗ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ, ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ? ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ, ಮೃತದೇಹಗಳು ಸಿಗದೇ ಹೋದಾಗ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ತಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕು ಎಂದಿದ್ದಾರೆ. ಎಸ್ಐಟಿ, ತನಿಖೆಯನ್ನು ಸ್ವತಂತ್ರವಾಗಿ ಮಾಡುತ್ತಿದೆ. ನಾವ್ಯಾರೂ ಅದರಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಏನೇ ಇದ್ದರೂ, ಸತ್ಯ ಹೊರಬರಲಿ’ ಎಂದು ಹೇಳಿದರು. ಹೊರದೇಶಗಳಿಂದ ಇದಕ್ಕಾಗಿ ಹಣ ಬಂದಿದೆ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿ, ‘ಈ ಆರೋಪದಲ್ಲಿ ಸತ್ಯವಿಲ್ಲ’ ಎಂದರು. ‘ವಿರೋಧ, ಟೀಕೆಯನ್ನು ಸ್ವಾಗತಿಸುತ್ತೇವೆ. ಆದರೆ, ಎಲ್ಲಾ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು’ ಎಂದರು.
ಅಶೋಕ್ ಸದನದಲ್ಲಿ ಚರ್ಚೆ ಮಾಡಿದ್ದೇ ಬೇರೆ: ಚಿನ್ನಯ್ಯ ಎಂಬ ವ್ಯಕ್ತಿಯನ್ನು ಕರೆತಂದಿರುವುದೇ ಕಾಂಗ್ರೆಸ್ ಎಂಬ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿ, ಸದನದಲ್ಲಿ ಈ ಬಗ್ಗೆ ಚರ್ಚೆಯಾದಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್ ಮಾತನಾಡಿದ್ದೇ ಬೇರೆ. ಈಗ ಅವರು ಮಾತನಾಡುತ್ತಿರುವುದೇ ಬೇರೆ. ಯಾರೇ ಆಗಲಿ, ದಿನಕ್ಕೊಂದು ಹೇಳಿಕೆ ಕೊಡಬಾರದು. ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೆಯೇ ಆಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.