
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಡಿ.14): ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಮತ ಕಳವು ಕೃತ್ಯದಲ್ಲಿ ಆರೋಪಿಗಳಿಗೆ ಅನುಕೂಲವಾದ ಕೇಂದ್ರ ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್‌ನ ಆರು ಲೋಪದೋಷಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ಈ ಲೋಪಗಳನ್ನು ದುರ್ಬಳಕೆ ಮಾಡಿ ಮತ ಕಳವಿಗೆ ಮಾಜಿ ಶಾಸಕ, ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್ ತಂಡ ಯತ್ನಿಸಿದೆ. ಇನ್ನು ಕೃತ್ಯ ಎಸಗುವ ಮುನ್ನ ಕಾಲ್ ಸೆಂಟರ್ ಮುಖ್ಯಸ್ಥ ಅಕ್ರಂ ಪಾಷ ಜತೆ ನಡೆದ ಒಳಸಂಚಿನ ಸಭೆಗಳಲ್ಲಿ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ ಗುತ್ತೇದಾರ್ ಪಾಲ್ಗೊಂಡಿದ್ದರು ಎಂದು ಎಸ್‌ಐಟಿ ಹೇಳಿದೆ.
ಎ-1 ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಎ-2 ಹರ್ಷಾನಂದ ಗುತ್ತೇದಾರ್, ಮಾಜಿ ಶಾಸಕರ ಆಪ್ತ ಸಹಾಯಕ ತಿಪ್ಪೇರುದ್ರ, ಕಾಲ್ ಸೆಂಟರ್ ಮುಖ್ಯಸ್ಥ ಕಲಬುರಗಿ ನಗರದ ಅಕ್ರಂ ಪಾಷ, ಆತನ ಸೋದರ ಅಸ್ಲಂ ಪಾಷ ಹಾಗೂ ಮಹಮದ್ ಅಶ್ಪಾಕ್ ಅಹಮದ್ ಸೇರಿಕೊಂಡು ಮತ ಕಳವು ಕೃತ್ಯದ ಸಂಚು ರೂಪಿಸಿದ್ದರು ಎಂದು ತಿಳಿಸಿದೆ. ಚುನಾವಣೆಯಲ್ಲಿ ಗುತ್ತೇದಾರ್ ಅವರಿಗೆ ಮತಹಾಕದ ಮತದಾರರನ್ನು ಗುರುತಿಸಿ ಅನಧಿಕೃತವಾಗಿ ಮತದಾರರ ಪಟ್ಟಿಯಿಂದ ಅವರ ಹೆಸರು ತೆಗೆದುಹಾಕಲು ಷಡ್ಯಂತ್ರ ರೂಪಿಸಿದ್ದರು. ಮತದಾರರ ಮಾಹಿತಿ ಸಂಗ್ರಹಿಸಿ ಮೂಲ ಮತದಾರರೇ ಸ್ವಯಂ ಆಗಿ ತಮ್ಮ ಹೆಸರನ್ನು ಮತಪಟ್ಟಿಯಿಂದ ಕೈ ಬಿಡುವ ರೀತಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಬಯಲಾಗುವವರೆಗೆ ಈ ಕುರಿತು ಮೂಲ ಮತದಾರರಿಗೆ ಸಣ್ಣ ಸುಳಿವೂ ಇರಲಿಲ್ಲ.
ಚುನಾವಣಾ ಆಯೋಗದ ಎನ್‌ಪಿಎಸ್‌ಪಿ (https://voters.eci.gov.in/) ಪೋರ್ಟಲ್ ಮೂಲಕ ನಮೂನೆ 7ರ ರೀತ್ಯಾ ಮತ ಪಟ್ಟಿಯಿಂದ ಹೆಸರು ಕೈಬಿಡುವಂತೆ (Deletion) ಅರ್ಜಿ ಸಲ್ಲಿಸಲು ಆರೋಪಿಗಳು ಯೋಜಿಸಿದ್ದರು. ಇದಕ್ಕೆ ಸುಳ್ಳು ಮಾಹಿತಿಯನ್ನೊಳಗೊಂಡ ವಿದ್ಯುನ್ಮಾನ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ನೈಜ ದಾಖಲೆಗಳಂತೆ ಸಲ್ಲಿಸುವ ಸಂಚು ಇದಾಗಿತ್ತು. ಸಲ್ಲಿಸಿದ ಈ ಅರ್ಜಿಗಳಲ್ಲಿನ ಮಾಹಿತಿಯನ್ನು ಚುನಾವಣಾ ಆಯೋಗದ ಪರ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ನೈಜ ಮಾಹಿತಿಯೆಂದು ನಂಬುವಂತೆ ಬಿಂಬಿಸಿದ್ದರು ಎಂದು ಎಸ್‌ಐಟಿ ವಿವರಿಸಿದೆ.
ಆಯೋಗದ ಅಧಿಕಾರಿಗಳು ನೈಜ ದಾಖಲೆಗಳೆಂದು ನಂಬಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಲ್ಲಿ ಸಂವಿಧಾನಬದ್ಧವಾಗಿ ನೀಡಲಾದ ಮತದಾನದ ಹಕ್ಕನ್ನು ಅಕ್ರಮವಾಗಿ ಕಸಿದುಕೊಂಡಂತಾಗುತ್ತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆ ಮೇಲೆ ಮತದಾರರು ಇಟ್ಟಿರುವ ನಂಬಿಕೆಗೆ ದಕ್ಕೆ, ದ್ರೋಹ ಹಾಗೂ ಸಂಶಯ ಮೂಡಿಸುವ ದುರುದ್ದೇಶದಿಂದ ಸುಭಾಷ್ ಗುತ್ತೇದಾರ್ ಅವರ ರಾಜಕೀಯ, ವೈಯಕ್ತಿಕ ಲಾಭ ಹಾಗೂ ಇತರೆ ಆರೋಪಿಗಳು ಲಾಭಕ್ಕೋಸ್ಕರ ಹೂಡಿದ ಸಂಚು ಇದಾಗಿತ್ತು ಎಂದು ತನಿಖಾ ತಂಡ ಹೇಳಿದೆ.
ಲೋಪದೋಷಗಳೇನು?
1. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ( National Voter Service Portal-NVSP)ನಲ್ಲಿ ಮೊಬೈಲ್ ನಂಬರ್‌ಗೆ ಸ್ವೀಕೃತವಾಗುವ ಒಟಿಪಿ ಬಳಸಿ ಲಾಗಿನ್/ನೊಂದಣಿಯಾಗುವ ಸೌಲಭ್ಯ ಇದೆ.
2. ಒಂದು ಬಾರಿ ಲಾಗಿನ್ ಆದ ನಂತರ ಲಾಗಿನ್ ಐಡಿ ಬಳಸಲು ಅಳವಡಿಸಿಕೊಂಡ ಪಾಸ್‌ವರ್ಡ್‌ನ ಅಗತ್ಯ ಮಾತ್ರ ಇರುತ್ತದೆ.
3.ಒಂದು ಬಾರಿ ಲಾಗಿನ್ ಐಡಿ ಕ್ರಿಯೇಟ್ ಮಾಡಿ ಲಾಗಿನ್ ಆದ ನಂತರ ಲಾಗ್ ಔಟ್ ಸಮಯದ ಮಿತಿಯೇ ಇಲ್ಲ.
4. ಒಂದು ಬಾರಿ ಕ್ರಿಯೇಟ್ ಮಾಡಿದ ಲಾಗಿನ್ ಐಡಿ ಬಳಸಿ ಅನಿಯಮಿತ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿತ್ತು.
5. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಬಳಕೆ ಮಾಡಲಾದ ಮೊಬೈಲ್ ನಂಬರ್ ಮತದಾರರ ಬದಲು ಬೇರೆ ಯಾವುದೇ ವ್ಯಕ್ತಿಯದ್ದು ಆಗಿರಬಹುದಿತ್ತು.
6.ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಅರ್ಜಿ ಸಲ್ಲಿಕೆಯಾಗಿದ್ದರೂ, ಮೂಲ ಮತದಾರರಿಗೆ ಅರ್ಜಿ ಸಲ್ಲಿಕೆಯಾದ ಬಗ್ಗೆ, ಅರ್ಜಿ ಸಲ್ಲಿಸಿದವರ ಬಗ್ಗೆ ಯಾವುದೇ ವಿದ್ಯುನ್ಮಾನ ಸ್ವರೂಪದ ಸಂದೇಶ ರವಾನೆಯಾಗುವ ವ್ಯವಸ್ಥೆ ಇರಲಿಲ್ಲ. ಈ ಪ್ರಮುಖ ಆರು ಅಂಶಗಳನ್ನು ಆಧರಿಸಿಕೊಂಡು ಅಕ್ರಂ ಪಾಷ ತಂಡ ಲಾಗಿನ್ ಐಡಿ ಕ್ರಿಯೇಟ್ ಮಾಡಲು ಅಗತ್ಯವಿರುವ ಮೊಬೈಲ್ ಸಂಖ್ಯೆ ಮತ್ತು ಒಟಿಪಿಯನ್ನು ಅನಧಿಕೃತವಾಗಿ ಪಡೆಯುವ ಸಂಚು ರೂಪಿಸಿದ್ದರು. ಅಂತೆಯೇ ಪಶ್ಚಿಮ ಬಂಗಾಳದ ಬಾಪಿ ಆದ್ಯಾನಿಗೆ ಹಣ ಕೊಟ್ಟು ಆತ ನಿರ್ವಹಿಸುತ್ತಿದ್ದ https://otpbazar.online ವೆಬ್‌ಸೈಟ್ ಮೂಲಕ ಅನ್ಯವ್ಯಕ್ತಿಗಳ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಪಡೆದಿದ್ದರು ಎಂದು ಎಸ್‌ಐಟಿ ಆರೋಪ ಪಟ್ಟಿಯಲ್ಲಿ ತಿಳಿಸಿದೆ.
ಆಪ್ತ ಸಹಾಯಕ ಪ್ರಮುಖ ಪಾತ್ರ?: ಮತ ಕಳವು ಯತ್ನ ಕೃತ್ಯದಲ್ಲಿ ಮಾಜಿ ಶಾಸಕ ಗುತ್ತೇದಾರ್ ಹಾಗೂ ಕಾಲ್ ಸೆಂಟರ್ ಮುಖ್ಯಸ್ಥ ಅಕ್ರಂ ಪಾಷ ಮಧ್ಯೆ ಕೊಂಡಿಯಾಗಿ ಮಾಜಿ ಶಾಸಕರ ಆಪ್ತ ಸಹಾಯಕ ತಿಪ್ಪೇರುದ್ರ ಕೆಲಸ ಮಾಡಿದ್ದ ಎಂದು ಹೇಳಲಾಗಿದೆ. ಆಳಂದ ಕ್ಷೇತ್ರದಲ್ಲಿ ನಾಲ್ಕು ಬಾರಿ ಸುಭಾಷ್ ಗುತ್ತೇದಾರ್ ಶಾಸಕರಾಗಿದ್ದರೆ, ಅವರ ಪುತ್ರ ಹರ್ಷಾನಂದ ಗುತ್ತೇದಾರ್ ಮೂರು ಬಾರಿ ಜಿಪಂ ಸದಸ್ಯರಾಗಿದ್ದರು. ಅಲ್ಲದೆ ಕಲಬುರಗಿ ಜಿಪಂಗೆ ಒಂದು ಅವಧಿಗೆ ಉಪಾಧ್ಯಕ್ಷರಾಗಿ ಸಹ ಕೆಲಸ ಮಾಡಿದ್ದರು. ಈ ತಂದೆ-ಮಗನಿಗೆ ತಿಪ್ಪೇರುದ್ರ ಆಪ್ತ ಸಹಾಯಕರಾಗಿದ್ದರು. ಹೀಗಾಗಿ ರಾಜಕೀಯ ವ್ಯವಹಾರಗಳ ಬಗ್ಗೆ ತಂದೆ-ಮಗನ ಪರವಾಗಿ ಆತನೇ ನಿರ್ವಹಿಸುತ್ತಿದ್ದ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಚುನಾವಣಾ ಆಯೋಗಕ್ಕೆ ಮತ ರದ್ದತಿಗೆ ಅರ್ಜಿ ಸಲ್ಲಿಸುವ ಮುನ್ನ ಆಯೋಗದ ವೆಬ್‌ಸೈಟ್‌ನಲ್ಲಿ ಮೊಬೈಲ್ ಸಂಖ್ಯೆ ಕೊಟ್ಟು ನೋಂದಣಿ ಮಾಡಿಸಬೇಕಿತ್ತು. ಹೀಗೆ ಅರ್ಜಿ ಸಲ್ಲಿಸಿದರೆ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತಿತ್ತು. ಈ ಓಟಿಪಿ ಬಳಸಿದರೆ ವೆಬ್‌ಸೈಟ್‌ನಲಲಿ ಮುಂದಿನ ಹಂತದ ಪ್ರಕ್ರಿಯೆ ನಡೆಸಲು ಪಾಸ್‌ವರ್ಡ್ ಸಿಗುತ್ತಿತ್ತು. ನಂತರ ಮತದಾರ ಪಟ್ಟಿಯಿಂದ ಹೆಸರು ಅಳಿಸುವ ಕುರಿತು ಅರ್ಜಿದಾರರು ಮಾಹಿತಿ ದಾಖಲು ಮಾಡಬೇಕಿತ್ತು. ಒಮ್ಮೆ ನೋಂದಣಿಯಾದರೆ ಪಾಸ್ ವರ್ಡ್ ಬಳಸಿ ಹಲವು ಬಾರಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶವಿತ್ತು. ಆದರೆ ಮತ ಕಳವು ಆರೋಪ ಬಳಿಕ ಈ ವ್ಯವಸ್ಥೆಯನ್ನು ಚುನಾವಣಾ ಆಯೋಗ ಬದಲಾಯಿಸಿದೆ. ಈಗ ಮತ ರದ್ದತಿಗೆ ಪ್ರತಿ ಬಾರಿ ಅರ್ಜಿ ಸಲ್ಲಿಸುವಾಗಲು ಹೊಸದಾಗಿ ನೋಂದಣಿ ಮಾಡಬೇಕಿದೆ. ಆಳಂದ ಮತ ಕಳವು ಪ್ರಕರಣದಲ್ಲಿ 72 ಜನರ ಹೆಸರಿನಲ್ಲಿ 6 ಸಾವಿರ ಮತಗಳ ರದ್ದತಿಗೆ ಅರ್ಜಿ ಸಲ್ಲಿಕೆಯಾಗಿದ್ದವು ಎಂದು ಎಸ್‌ಐಟಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.