
ಬೆಂಗಳೂರು (ಜು.24): ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವ ಸಂದರ್ಭದಲ್ಲೂ ವಿದ್ಯುತ್ ಕೊರತೆ ಆಗಬಾರದು. ಆ ನಿಟ್ಟಿನಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್)ದ 56ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಲ, ಉಷ್ಣ, ಸೌರ, ಪವನ, ಅನಿಲ ಮಾತ್ರವಲ್ಲ, ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದಿಸುವ ಮೂಲಕ ಕೆಪಿಸಿಎಲ್ ಅತ್ಯುತ್ತಮ ಸಾಧನೆ ಮಾಡಿದೆ.
ಆ ಮೂಲಕ ಅತಿ ಹೆಚ್ಚು ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿಯಲ್ಲಿ ನಿಲ್ಲಿಸಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಇನ್ನೂ ಹೆಚ್ಚು ಒತ್ತು ನೀಡಿ ಸ್ವಾವಲಂಬನೆ ಸಾಧಿಸಲಾಗುವುದು ಎಂದು ಹೇಳಿದರು. ನಾನು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ನಮ್ಮ ಊರಿನಲ್ಲಿ ವಿದ್ಯುತ್ ಇರಲಿಲ್ಲ. 7-8ನೇ ತರಗತಿಯಲ್ಲಿರುವಾಗ ನಮ್ಮ ಊರಿಗೆ ವಿದ್ಯುತ್ ಬಂತು. ಆದರೆ, ಇಂದು ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮವೇ ಇಲ್ಲ. ಈ ರೀತಿ ರಾಜ್ಯದ ಮೂಲೆ, ಮೂಲೆಗಳಿಗೆ, ಕೈಗಾರಿಕೆಗಳಿಗೆ ಸೇರಿದಂತೆ ಎಲ್ಲಾ ಕಡೆ ವಿದ್ಯುತ್ ಸರಬರಾಜಾಗುವಲ್ಲಿ ಕೆಪಿಸಿಎಲ್ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ, ರಾಜ್ಯದ ಪ್ರಗತಿಯಲ್ಲೂ ಕೆಪಿಸಿಎಲ್ ನ ಕೊಡುಗೆ ಮಹತ್ವದ್ದು ಎಂದು ಶ್ಲಾಘಿಸಿದರು.
ಕೆಪಿಸಿಎಲ್ ನಲ್ಲಿ ಹುದ್ದೆಗಳ ಭರ್ತಿ: ಕೆಪಿಸಿಎಲ್ ಅಧ್ಯಕ್ಷನಾಗಿ ನಾನೂ ಕೂಡ ಕೆಪಿಸಿಎಲ್ ನೌಕರರಲ್ಲಿ ಒಬ್ಬನಾಗಿದ್ದೀನಿ. ಕೆಪಿಸಿಎಲ್ ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ಕೆಲಸಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಮನವಿಗಳು ಬಂದಿವೆ. ಶೀಘ್ರದಲ್ಲೇ ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಸಂಗ್ರಹಣಾ ವ್ಯವಸ್ಥೆ ಇಲ್ಲ. ಹೀಗಾಗಿ, ಶರಾವತಿಯಲ್ಲಿ 2000 ಮೆಗಾವ್ಯಾಟ್ ಹಾಗೂ ವಾರಾಹಿಯಲ್ಲಿ 1500 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ ವಿದ್ಯುತ್ ಸಂಗ್ರಹಿಸಿ ಹೆಚ್ಚು ಬೇಡಿಕೆ ಸಂದರ್ಭದಲ್ಲಿ ಪೂರೈಸಲಾಗುವುದು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಜ್ಯ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳಿಂದ ಈಗಾಗಲೇ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.