
ಮೈಸೂರು: ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ದೀರ್ಘಾವಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರೊಂದಿಗೆ ಹೋಲಿಕೆ, ತಮ್ಮ ರಾಜಕೀಯ ಜೀವನದ ಪಯಣ, ಬಳ್ಳಾರಿ ಗಲಾಟೆ ಪ್ರಕರಣ, ಮನ್‌ರೇಗಾ ಯೋಜನೆಯ ಹೆಸರು ಬದಲಾವಣೆ, ಮೈಸೂರು ಭಾಗದಲ್ಲಿ ಹೆಚ್ಚುತ್ತಿರುವ ಹುಲಿ ಸಮಸ್ಯೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ವಿಸ್ತೃತವಾಗಿ ಪ್ರತಿಕ್ರಿಯಿಸಿದರು.
ದೀರ್ಘಾವಧಿ ಮುಖ್ಯಮಂತ್ರಿ ಸ್ಥಾನ ಪೂರೈಸುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಜನರ ಅರ್ಶಿವಾದದಿಂದ ನಾಳೆಗೆ ದೇವರಾಜು ಅರಸು ಅವರ ದೀರ್ಘವಾದಿ ಅಡಳಿತ ದಾಖಲೆ ಬ್ರೇಕ್ ಅಗುತ್ತಿದೆ. ನನಗೆ ಖುಷಿ ಏನೆಂದರೆ ದೇವರಾಜ ಅರಸು ಹಾಗೂ ನಾನು ಒಂದೇ ಜಿಲ್ಲೆಯವರು. ನನಗೂ ದೇವರಾಜ ಅರಸ್ ಅವರಿಗೂ ಹೋಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, “ಅರಸು ಅವರು ಸಾಮಾಜಿಕವಾಗಿ ಹಿಂದುಳಿದವರಲ್ಲ. ಜನಸಂಖ್ಯೆಯಲ್ಲಿ ಅವರು ಸಣ್ಣ ಸಮುದಾಯಕ್ಕೆ ಸೇರಿದವರಾಗಿದ್ದರು. ಅವರ ಕಾಲದ ರಾಜಕೀಯ ಪರಿಸ್ಥಿತಿಯೇ ಬೇರೆ, ಇಂದಿನ ಪರಿಸ್ಥಿತಿ ಸಂಪೂರ್ಣ ಬೇರೆ” ಎಂದರು. ಅರಸು ಅವರ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಜನರೇ ಹಣ ಹಾಕಿ ಚುನಾವಣೆ ನಡೆಸುತ್ತಿದ್ದರು ಎಂದು ನೆನಪಿಸಿಕೊಂಡ ಸಿಎಂ, ಇಂದಿನ ರಾಜಕೀಯ ಸ್ಥಿತಿಗತಿಗಳು ಸಂಪೂರ್ಣ ಬದಲಾಗಿವೆ ಎಂದು ಹೇಳಿದರು.
ಯಾವುದೇ ದಾಖಲೆ ಶಾಶ್ವತವಲ್ಲ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, “ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೋಹ್ಲಿ ಮುರಿದಿಲ್ಲವೇ? ಮುಂದೆ ಯಾರಾದರೂ ನನ್ನ ದಾಖಲೆಯನ್ನು ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸುವವರು ಕೂಡ ಬರಬಹುದು. ಹೀಗಾಗಿ ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ನಾನು ಹೇಳುವುದಿಲ್ಲ” ಎಂದು ಹೇಳಿದರು.
ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಸಿಎಂ, ನಾನು ಯಾವತ್ತೂ ಮುಖ್ಯಮಂತ್ರಿ ಅಥವಾ ಸಚಿವನಾಗಬೇಕು ಎಂದು ಕನಸು ಕಂಡವನಲ್ಲ. ಶಾಸಕನಾಗಬೇಕು ಎಂಬುದು ಮಾತ್ರ ನನ್ನ ಆಸೆಯಾಗಿತ್ತು. ಜನರು ಆ ದಿನವೇ ತಮ್ಮ ಮೇಲೆ ನಂಬಿಕೆ ಇಟ್ಟು ಹಣ ಹಾಕಿ ಶಾಸಕನನ್ನಾಗಿ ಮಾಡಿದರು ಎಂದು ತಿಳಿಸಿದ ಅವರು, ಅದೇ ಜನರ ಆಶೀರ್ವಾದದಿಂದ ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳಿದರು. ರೆಕಾರ್ಡ್, ದಾಖಲೆಗಳ ವಿಚಾರ ಬಿಡಿ. ಜನರ ಆಶೀರ್ವಾದದಿಂದಲೇ ಇಲ್ಲಿವರೆಗೂ ಬಂದಿದ್ದೇನೆ. ಇದೆಲ್ಲವೂ ಜನರ ಕೃಪೆ ಎಂದು ಸಿಎಂ ಹೇಳಿದರು.
ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶ ವಿಚಾರವಾಗಿ ಮಾತನಾಡಿದ ಸಿಎಂ, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು. ಕೃಷ್ಣ ಭೈರೇಗೌಡ ಅವರು ಸಮಾವೇಶ ಆಯೋಜಿಸುವ ಬಗ್ಗೆ ಹೇಳಿದ್ದಾರಂತೆ. ಆ ಸಮಾವೇಶದ ಜವಾಬ್ದಾರಿಯನ್ನು ಕೃಷ್ಣ ಭೈರೇಗೌಡರೇ ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸಂಪುಟ ಪುನರ್‌ರಚನೆ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು. “ಅವರು ಯಾವಾಗ ಬರಲು ಹೇಳುತ್ತಾರೋ, ಆಗ ನಾನು ಅವರನ್ನು ಭೇಟಿ ಮಾಡುತ್ತೇನೆ” ಎಂದು ಹೇಳಿದರು.
ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿಎಂ, ರಾಜಶೇಖರ್ ಮೃತದೇಹದ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆದಿರುವ ವಿಚಾರ ನನಗೆ ತಿಳಿದಿಲ್ಲ ಎಂದು ಹೇಳಿದರು. ಈ ವಿಷಯವನ್ನು ಪೊಲೀಸರು ನೋಡಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂಬ ಒತ್ತಾಯದ ಕುರಿತು ಮಾತನಾಡಿದ ಸಿಎಂ, “ನಮ್ಮ ಪೊಲೀಸರೇ ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಅವರ ಕಾರ್ಯಕ್ಷಮತೆ ಬಗ್ಗೆ ನಮಗೆ ಯಾವುದೇ ಅನುಮಾನಗಳಿಲ್ಲ. ತನಿಖೆ ವರದಿ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಹೇಳಿದರು. ಸಿಒಡಿ ತನಿಖೆ ವಹಿಸುವ ವಿಚಾರವಾಗಿ ನಾಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಮನ್‌ರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ವಿಚಾರವನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದರು. ಇದು ಸಂವಿಧಾನಕ್ಕೆ ವಿರುದ್ಧವಾದ ಕ್ರಮ ಎಂದು ಅವರು ಹೇಳಿದರು. ಹೆಸರು ಬದಲಾವಣೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು ₹3,000 ಕೋಟಿ ನಷ್ಟವಾಗಲಿದೆ ಎಂದು ಎಚ್ಚರಿಸಿದರು. ಜಿ ರಾಮ್ ಜಿ ಎಂಬ ಹೆಸರಿನ ಮೂಲಕ ಬಡ ಕೂಲಿ ಕಾರ್ಮಿಕರ ಕೆಲಸವನ್ನು ಕಿತ್ತುಕೊಳ್ಳಲಾಗುತ್ತಿದೆ. ಜಿ ರಾಮ್ ಜಿ ಎಂದರೆ ರಾಮನ ಹೆಸರಲ್ಲ” ಎಂದು ವ್ಯಂಗ್ಯವಾಡಿದ ಸಿಎಂ, ಕೇಂದ್ರ ಸರ್ಕಾರ ಬಡವರ ವಿರುದ್ಧ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಮೈಸೂರು ಭಾಗದಲ್ಲಿ ಹುಲಿ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಸಿಎಂ ತಿಳಿಸಿದರು. ಹುಲಿ ಸಂತತಿ ಹೆಚ್ಚಾಗಿದ್ದು, ಕಾಡಿನಿಂದ ನಾಡಿನ ಕಡೆಗೆ ಹುಲಿಗಳು ಬರುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಹುಲಿಗಳನ್ನು ಸೆರೆ ಹಿಡಿದು, ಬೇರೆ ಕಾಡು ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿರುವುದಾಗಿ ಸಿಎಂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.