
ನವದೆಹಲಿ : ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಬದಲಿಗೆ ವಿಬಿ ಜಿ- ರಾಮ್- ಜಿ ಕಾಯ್ದೆ ಜಾರಿ ಮಾಡಿರುವ ವಿರುದ್ಧ ಕಾಂಗ್ರೆಸ್ ಪಕ್ಷವು ಜ.10 ರಿಂದ ಫೆ.25ರ ತನಕ ರಾಷ್ಟ್ರವ್ಯಾಪಿ ‘ಮನರೇಗಾ ಬಚಾವೋ ಸಂಗ್ರಾಮ’ ಅಭಿಯಾನ ನಡೆಸುವುದಾಗಿ ಘೋಷಿಸಿದೆ.
ಈ ಮುನ್ನ ಜ.5ರಿಂದ ಆಂದೋಲನ ನಡೆಸುವುದಾಗಿ ಪಕ್ಷ ಹೇಳಿತ್ತು. ಆದರೆ ಈಗ ದಿನಾಂಕ ಬದಲಾಗಿದೆ.
ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಂ ರಮೇಶ್, ‘ ಜಿ ರಾಮ್ ಜಿ ಕಾಯ್ದೆಯ ಮೂಲಕ ಕೇಂದ್ರ ಸರ್ಕಾರವು ವಿಕೇಂದ್ರೀಕರಣದ ಬದಲು ಕೇಂದ್ರೀಕರಣ ಮಾಡಲು ಹೊರಟಿದೆ. ಹೊಸ ಕಾಯ್ದೆಯಡಿಯಲ್ಲಿ ಉದ್ಯೋಗವು ಇನ್ನು ಮುಂದೆ ಹಕ್ಕಾಗಿ ಉಳಿಯುವುದಿಲ್ಲ. ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ’ ಎಂದು ಹೇಳಿದರು.
ಇದೇ ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರವಿರುವ ರಾಜ್ಯಗಳಲ್ಲಿ ಹೊಸ ಕಾಯ್ದೆ ಜಾರಿಗೆ ವಿರೋಧ ಆಗುತ್ತಿರುವ ಬಗ್ಗೆ ಉತ್ತರಿಸಿದ ಅವರು, ‘ಈ ಬಗ್ಗೆ ಎಲ್ಲಾ ಮಿತ್ರ ಪಕ್ಷಗಳ ಬಳಿ ಸಮಾಲೋಚನೆ ನಡೆಸುತ್ತೇವೆ’ ಎಂದರು.
ಇತ್ತೀಚೆಗೆ ನರೇಗಾ ಯೋಜನೆ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಮಹಾತ್ಮಾ ಗಾಂಧಿ ಹೆಸರನ್ನೂ ತೆಗೆದು ಹಾಕಿತ್ತು ಹಾಗೂ ಕೂಲಿ ಅವಧಿಯನ್ನು 100ರಿಂದ 125 ದಿನಕ್ಕೆ ಹೆಚ್ಚಿಸಿತ್ತು. ಈ ಮುಂಚೆ ಕೂಲಿಯನ್ನು ಬಹುಪಾಲು ತಾನೇ ಕೊಡುತ್ತಿದ್ದ ಕೇಂದ್ರ, ಇನ್ನು ರಾಜ್ಯಗಳು ಶೇ.40 ಹಣ ನೀಡಬೇಕು ಎಂದು ನಿಯಮ ರೂಪಿಸಿತ್ತು. ಇದಕ್ಕೆ ಕಾಂಗ್ರೆಸ್ ವಿರೋಧವಿದೆ.
ಕೇಂದ್ರ ಸರ್ಕಾರ, ಆರ್‌ಎಸ್‌ಎಸ್ ಮಾರ್ಗದರ್ಶನದಂತೆ ನಡೆಯುತ್ತಿದೆ. ಮನುಸ್ಮೃತಿಯು ಮಹಿಳೆಯರು, ದಲಿತರ ಬಳಿ ಹಣ ಇರಬಾರದು ಎಂದು ಹೇಳುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ಮನರೇಗಾ ಯೋಜನೆ ರದ್ದು ಮಾಡಿದೆ. ಈ ಹಿಂದೆ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ತಂದಾಗಲೂ ಬಿಜೆಪಿ ವಿರೋಧಿಸಿತ್ತು. ಈಗ ಉದ್ಯೋಗ ಹಕ್ಕಿಗಾಗಿ ಜಾರಿ ಮಾಡಲಾದ ಯೋಜನೆಯನ್ನೇ ರದ್ದು ಮಾಡಿದೆ. ಈ ಮೂಲಕ ಗ್ರಾಮಗಳ ಅಧಿಕಾರ ಕಿತ್ತುಕೊಂಡಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಮ-ನರೇಗಾ ಯೋಜನೆ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿರುವುದರ ವಿರುದ್ಧ ಗ್ರಾಮ ಮಟ್ಟದಿಂದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರಗೆ ಹೋರಾಟ ಮಾಡಲಾಗುವುದು. ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆಸಿದಂತೆ, ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ಮನರೇಗಾ ಮರುಸ್ಥಾಪನೆಯಾಗುವವರೆಗೆ ಹೋರಾಟ ನಡೆಸಲಾಗುವುದು.
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಹೋರಾಟ ಏಕೆ?
ಮನರೇಗಾ ಯೋಜನೆ ರದ್ದು ಮಾಡಿ ಜಿ ರಾಮ್ ಜಿ ಬಿಲ್
ಯೋಜನೆಯಿಂದ ಗಾಂಧೀಜಿ ಹೆಸರು ರದ್ದತಿಗೆ ವಿಪಕ್ಷ ಕಿಡಿ
ಸ್ಕೀಂನಲ್ಲಿ ರಾಜ್ಯಗಳ ಪಾಲು ಶೇ.40ಕ್ಕೆ ಏರಿಕೆಗೂ ಆಕ್ಷೇಪ
ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯದೇ ನಿರ್ಧಾರ: ಟೀಕೆ
ಹೊಸ ಸ್ಕೀಂನಲ್ಲಿ ಉದ್ಯೋಗ ಹಕ್ಕಾಗಿ ಇರಲ್ಲ: ಆರೋಪ
ಯೋಜನೆಯಿಂದ ಗ್ರಾಮೀಣ ಆರ್ಥಿಕತೆಗೆ ಭಾರೀ ಪೆಟ್ಟು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.