ಎಚ್‌ಡಿಕೆ ಸೇರಿದಂತೆ ಪ್ರತಿಪಕ್ಷ ನಾಯಕರ ಪ್ರಾಸಿಕ್ಯೂಷನ್‌ಗಾಗಿ ಆ.31ಕ್ಕೆ ಸಿಎಂ, ಡಿಸಿಎಂ ರಾಜಭವನ ಯಾತ್ರೆ!

Published : Aug 28, 2024, 09:54 AM IST
ಎಚ್‌ಡಿಕೆ ಸೇರಿದಂತೆ ಪ್ರತಿಪಕ್ಷ ನಾಯಕರ ಪ್ರಾಸಿಕ್ಯೂಷನ್‌ಗಾಗಿ ಆ.31ಕ್ಕೆ ಸಿಎಂ, ಡಿಸಿಎಂ ರಾಜಭವನ ಯಾತ್ರೆ!

ಸಾರಾಂಶ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಮನವಿಗೆ ರಾಜ್ಯಪಾಲರು ಅನುಮತಿ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ನಿಂದ ಆ.31ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. 

ಬೆಂಗಳೂರು (ಆ.28): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಮನವಿಗೆ ರಾಜ್ಯಪಾಲರು ಅನುಮತಿ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ನಿಂದ ಆ.31ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಾಮಾಣಿಕ ರಾಜಕಾರಣಿ ಎಚ್. ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಮನವಿ ರಾಜ್ಯಪಾಲರ ಮುಂದಿದೆ. 

ಆದರೆ, ರಾಜ್ಯಪಾಲರು ಈವರೆಗೆ ಆ ಅರ್ಜಿಗಳ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ಆ.31ರಂದು ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಕಾಲ್ನಡಿಗೆ ಮೂಲಕ ತೆರಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಬಾಕಿ ಇರುವ ಅರ್ಜಿಗಳಿಗೆ ಕೂಡಲೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಈ ಆಂದೋಲನ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಪಕದ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಚನ್ನಪಟ್ಟಣ ಉಪಚುನಾವಣೆ: ಸಿ.ಪಿ.ಯೋಗೇಶ್ವರ್ ಪರ ಇಂದು ಅಂತಿಮ ಕಸರತ್ತು

ಕೇಂದ್ರ ಸಚಿವ ಕುಮಾರಸ್ವಾಮಿ ಮಾತ್ರವಲ್ಲದೆ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖಾ ಸಂಸ್ಥೆಗಳು ಪ್ರಾಸಿಕ್ಯೂ ಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ.  ಆದರೆ, ಅದಕ್ಕೆ ರಾಜ್ಯಪಾ ಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಯಾವುದೇ ತನಿಖೆ ನಡೆಯದಿದ್ದರೂ ತರಾತುರಿ ಯಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಲಾಗಿದೆ. ಇದು ತಾರತಮ್ಯವಲ್ಲದೆ ಮತ್ತೇನೂ ಅಲ್ಲ. ಪ್ರಾಸಿಕ್ಯೂಷನ್‌ಗೆ ನೀಡುವುದಾದರೆ ತಮ್ಮ ಮುಂದಿರುವ ಎಲ್ಲ ಪ್ರಕರಣಗಳಿಗೂ ಅನುಮತಿಸಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಲಾಗುವ ಮನವಿಯಲ್ಲಿ ಕೋರಲಾಗುವುದು ಎಂದರು. 

ಬಿಗ್ ಬ್ರದರ್, ಪ್ರಾಮಾಣಿಕ ಕುಮಾರಸ್ವಾಮಿ: ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಶಿವಕುಮಾರ್, ನನ್ನ ಬಿಗ್‌ಬ್ರದರ್, ಪ್ರಾಮಾಣಿಕ ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆಗೆ ಭೂಮಿ ಮಂಜೂರು ಮಾಡಿದ ಪ್ರಕರಣದ ಕುರಿತು ಲೋಕಾಯುಕ್ತ ಎಸ್‌ಐಟಿ 10 ವರ್ಷಗಳ ಸುದೀರ್ಘ ತನಿಖೆ ನಡೆಸಿತ್ತು. ಅದಕ್ಕೆ ಸಂಬಂಧಿಸಿದಂತೆ218 ಪುಟಗಳ ತನಿಖಾ ವರದಿ ಸಮೇತ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಗೆ ಅನುಮತಿ ಕೋರಿದ್ದಾರೆ. ಆದರೂ, ವಿಚಾರಣೆಗೆ ಅನುಮತಿ ನೀಡಿಲ್ಲ. ಕುಮಾರಸ್ವಾಮಿ ಅವರು ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ. ಅವರು ಕೇವಲ ಅಸಲಿ ಕೆಲಸವನ್ನಷ್ಟೇ ಮಾಡುವುದು ಎಂದು ಲೇವಡಿ ಮಾಡಿದರು. 

ನಕಲಿ ಸಹಿಯಿಂದ ಅಮಾಯಕ ಕುಮಾರಸ್ವಾಮಿಗೆ ಸಮಸ್ಯೆ: ಸತ್ಯಕ್ಕೆ ಹೆಸರಾದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇತ್ತೀಚೆಗೆ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ ಪತ್ರಕ್ಕೆ ತಾವು ಸಹಿ ಹಾಕಿಲ್ಲ, ಅದು ನಕಲಿ ಸಹಿ ಎಂದು ಹೇಳಿಕೆ ನೀಡಿದ್ದರು. ಹಾಗಾದರೆ, ಅವರು ಈವರೆಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲವೇಕೆ ಎಂದ ಡಿ.ಕೆ.ಶಿವಕುಮಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯಲ್ಲಿ ಗಣಿಗಾರಿಕೆಗೆ ನೀಡಿರುವ ಆದೇಶ ತಮ್ಮದೇ ಎಂದು ಒಪ್ಪಿಕೊಂಡಿರುವುದೇಕೆ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ತಮ್ಮ ಸಹಿ ನಕಲು ಮಾಡಲಾಗಿದೆ ಎಂದು ಹೇಳಿದ್ದಾರೆ. 

ಹಾಗಾದರೆ, ಅವರು ಈಗಲಾದರೂ ದೂರು ನೀಡಲಿ. ಅದರ ಬಗ್ಗೆ ತನಿಖೆ ನಡೆಸುತ್ತೇವೆ. ನಕಲಿ ಸಹಿಯಿಂದ ಅಮಾಯಕ ಕುಮಾರಸ್ವಾಮಿ ನ್ಯಾಯಾಲಯದ ಮೆಟ್ಟಿಲೇರುವಂತಾಯಿತು. ಅವರಿಗೆ ಕಿರುಕುಳವಾಗುವಂತಾಗಿದ್ದು, ಈಗಾಗಲಾದರೂ ಅವರು ದೂರು ನೀಡಲಿ. ಮುಖ್ಯಮಂತ್ರಿಗಳ ಬಳಿ ದೂರು ನೀಡಲು ಸಾಧ್ಯವಾಗಲಿಲ್ಲವೆಂದರೆ, ಯಾವುದಾದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿ. ಮುಖ್ಯಮಂತ್ರಿ ಸ್ಥಾನದಲ್ಲಿದ್ದವರ ಸಹಿ ನಕಲಿ ಮಾಡಿದವರನ್ನು ಹಾಗೂ ಅದರ ಆಧಾರದಲ್ಲಿ ಗಣಿಗಾರಿಕೆಗೆ ಆದೇಶಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮಾಧ್ಯಮಗಳಿಂದಲೂ ಸಿಎ ನಿವೇಶನಕ್ಕೆ ಅರ್ಜಿ: ಜಿಂದಾಲ್ ಸಂಸ್ಥೆಗೆ ಕಡಿಮೆ ದರಕ್ಕೆ ಜಮೀನು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧಿಸಿದ ಟ್ರಸ್ಟ್‌ಗೆ ಕೆಐಎಡಿಬಿ ಜಮೀನು ಮಂಜೂರು ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಯಾವುದೇ ಟ್ರಸ್ಟ್‌ ಜಮೀನಿಗೆ ಅರ್ಜಿ ಸಲ್ಲಿಸಿದರೆ ಸಿಎ ನಿವೇಶನ ನೀಡುತ್ತೇವೆ. ಅದಕ್ಕೂ ಮುನ್ನ ಅದರ ಬಗ್ಗೆ ಪರಿಶೀಲಿಸುತ್ತೇವೆ. ಸ್ವಂತಕ್ಕೆ ಯಾರಿಗೂ ಜಮೀನನ್ನು ನೀಡುವುದಿಲ್ಲ. ಕೆಲ ಮಾಧ್ಯಮ ಸಂಸ್ಥೆಗಳೂ ಜಾಗಕ್ಕಾಗಿ ಅರ್ಜಿ ಸಲ್ಲಿಸಿವೆ. ಅವುಗಳನ್ನೂ ಪರಿಶೀಲಿಸಿ, ಭೂಮಿ ನೀಡುತ್ತೇವೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸೌಮ್ಯಾ ರೆಡ್ಡಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಇತರರಿದ್ದರು. 

ಸಿದ್ದರಾಮಯ್ಯ ಕೆಳಗಿಳಿಸಿದರೆ ಬಾಂಗ್ಲಾ ರೀತಿ ಜನರು ಮೋದಿ ಮನೆಗೆ ನುಗ್ಗುತ್ತಾರೆ: ಕಾಂಗ್ರೆಸ್ ಶಾಸಕ

ರೆಡ್ಡಿ, ನಿರಾಣಿ, ಜೊಲ್ಲೆ ತನಿಖೆಗೂ ಒಪ್ಪಿಗೆ ನೀಡಿ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ತನಿಖಾ ಸಂಸ್ಥೆಗಳು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿವೆ. ಆದರೆ, ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಗಳ ವಿರುದ್ಧ ಮಾತ್ರ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಹೀಗೆ ತಾರತಮ್ಯ ಮಾಡದೆ, ಎಲ್ಲಾ ಮನವಿಗೂ ಅನುಮತಿ ನೀಡುವಂತೆ ಕೋರುತ್ತೇವೆ. 
• ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ