
ಮಂಡ್ಯ (ಡಿ.06): ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಹೇಗೆ ಕಲ್ಪಿಸಬಹುದು ಎಂಬುದರ ಕುರಿತಂತೆ ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲು ಗಂಭೀರ ಚಿಂತನೆ ನಡೆಸಲಾಗುವುದು. ಸಾಧ್ಯವಾದರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋರ್ಸ್ ಆರಂಭಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ತಾಲೂಕಿನ ವಿ.ಸಿ.ಫಾರಂನಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ 3 ದಿನಗಳ ಕೃಷಿಮೇಳ ಉದ್ಘಾಟಿಸಿ ಅವರು ಮಾತನಾಡಿದರು. ರೈತಪರ ಹೋರಾಟಗಾರರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಹೆಸರಿನಲ್ಲಿ ಅಧ್ಯಯನ ಕೇಂದ್ರವೊಂದನ್ನು ತೆರೆಯಲಾಗುವುದು.
ಮೈಷುಗರ್ ಕಾರ್ಖಾನೆಯಲ್ಲಿ ಹೊಸ ಬಾಯ್ಲರ್ ಹೌಸ್ ಸ್ಥಾಪನೆಗೆ ಅನುದಾನ ದೊರಕಿಸಿಕೊಡುವುದಕ್ಕೆ ಬದ್ಧನಿದ್ದೇನೆ. ಆದರೆ, ಕಬ್ಬಿನ ಇಳುವರಿಯನ್ನು ಹೆಚ್ಚಿಸುವುದರ ಕಡೆಗೆ ಹೆಚ್ಚು ಗಮನ ಹರಿಸಬೇಕು. ಉತ್ತರ ಕರ್ನಾಟಕ-ಮಹಾರಾಷ್ಟ್ರ ಭಾಗದಲ್ಲಿ ಪ್ರತಿ ಟನ್‌ಗೆ ಶೇ.13ರವರೆಗೆ ಇಳುವರಿ ಬರುತ್ತಿದ್ದರೆ, ಈ ಭಾಗದಲ್ಲಿ ಕೇವಲ ಶೇ.7 -8.5ರವರೆಗೆ ಮಾತ್ರ ಇಳುವರಿ ಬರುತ್ತಿದೆ. ಇದಕ್ಕೆ ಕಾರಣವೇನೆಂಬ ಬಗ್ಗೆ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು. ಈ ಭಾಗದ ಮಣ್ಣಿನ ಪರೀಕ್ಷೆಯನ್ನು ಸತತ ನಡೆಸುವಂತೆ ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಅವರಿಗೆ ಸೂಚಿಸಿದರು.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ರೈತರನ್ನು ತಲುಪಿದಾಗ ಮಾತ್ರ ಸಾರ್ಥಕತೆಯನ್ನು ಪಡೆದುಕೊಳ್ಳಲು ಸಾಧ್ಯ. ಹೀಗಾಗಿ, ಕೃಷಿ ವಿಜ್ಞಾನಿಗಳು ಲ್ಯಾಬ್ ಟು ಲ್ಯಾಂಡ್ ಪರಿಕಲ್ಪನೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಶೇ.65ರಷ್ಟು ಜನರು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಉಳಿದ 35 ರಷ್ಟು ಜನರು ಕೃಷಿಯಿಂದ ವಿಮುಖರಾಗಿದ್ದಾರೆ. ಅದರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳಬಹುದೆಂಬ ಬಗ್ಗೆ ರೈತರಿಗೆ ಮನದಟ್ಟು ಮಾಡಿಕೊಟ್ಟು ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಹೇಳಿದರು.
ಆಹಾರ ಬೆಳೆಗಳನ್ನು ನೇರವಾಗಿ ಮಾರಾಟ ಮಾಡುವುದರಿಂದ ರೈತರಿಗೆ ಲಾಭ ಸಿಗುವುದಿಲ್ಲ. ಬೆಳೆದ ಬೆಳೆಗಳನ್ನು ಸಂಸ್ಕರಣೆ ಮಾಡಿ, ಮೌಲ್ಯವರ್ಧನೆಗೊಳಿಸಬೇಕು. ಅದಕ್ಕೊಂದು ಬ್ರ್ಯಾಂಡ್ ರೂಪ ಕೊಟ್ಟು ಮಾರುಕಟ್ಟೆಗೆ ತಂದಾಗ ಲಾಭ ಕಾಣಬಹುದು. ರೈತರು ಹೆಚ್ಚು ಇಳುವರಿ ನೀಡುವಂತಹ ತಳಿಗಳನ್ನು ಉಪಯೋಗಿಸಬೇಕು. ಕೃಷಿ ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ೦ತಹ ಇಂದಿನ ದಿನಗಳಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಹೆಚ್ಚಿಸಬೇಕು. ಇದರಿಂದ ಸಮಯ ಹಾಗೂ ಹಣ ಎರಡೂ ಉಳಿತಾಯವಾಗಲಿದೆ ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿಯ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು. ಪ್ರಗತಿಪರ ರೈತರು ಹೇಗೆ ಕೃಷಿಯನ್ನು ಲಾಭದಾಯಕ ಮಾಡಿಕೊಂಡಿರುವರೋ ಅದನ್ನು ನೋಡಿ ಯುವಕರು ಅನುಸರಿಸಬೇಕು. ಸಮಗ್ರ ಕೃಷಿ ಹಾಗೂ ಮೌಲ್ಯವರ್ಧನೆಯತ್ತ ಗಮನ ಹರಿಸಿದಾಗ ಯುವಕರು ಕೃಷಿಯಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು. ಪ್ರಸ್ತುತ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲೂ ವಿಜ್ಞಾನ- ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಸಾಧಿಸಿವೆ. ಹೆಚ್ಚು ಇಳುವರಿ ನೀಡುವಂತಹ ತಳಿಗಳು ರೈತರ ಕೈಯ್ಯಲ್ಲಿವೆ. ಸವಲತ್ತುಗಳು ತಲುಪುತ್ತಿವೆ. ಅವುಗಳನ್ನು ಉಪಯೋಗಿಸಿಕೊಂಡು ಪ್ರಗತಿ ಸಾಧಿಸುವಂತಹ ಮನಸ್ಥಿತಿಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.