ದಲಿತ ಸಿಎಂ ವಿಚಾರ ಅಪ್ರಸ್ತುತ, ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ: ಸಚಿವ ಚಲುವರಾಯಸ್ವಾಮಿ

By Kannadaprabha NewsFirst Published Mar 8, 2024, 12:28 PM IST
Highlights

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹಾಗಾಗಿ ದಲಿತ ಮುಖ್ಯಮಂತ್ರಿ ಎಂಬ ವಿಚಾರವೇ ಅಪ್ರಸ್ತುತ. ಮುಖ್ಯಮಂತ್ರಿ ಆಯ್ಕೆ ಸಂದರ್ಭ ಬಂದಾಗ ನೋಡೋಣ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.

ಮಂಡ್ಯ (ಮಾ.08): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹಾಗಾಗಿ ದಲಿತ ಮುಖ್ಯಮಂತ್ರಿ ಎಂಬ ವಿಚಾರವೇ ಅಪ್ರಸ್ತುತ. ಮುಖ್ಯಮಂತ್ರಿ ಆಯ್ಕೆ ಸಂದರ್ಭ ಬಂದಾಗ ನೋಡೋಣ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು. ನಮ್ಮದು ಜಾತ್ಯತೀತ ಪಕ್ಷ. ಯಾವ ಸಮಾಜಕ್ಕೆ ಬೇಕಾದರೂ ಅವಕಾಶ ಸಿಗಲಿದೆ. ಎಐಸಿಸಿ ಅಧ್ಯಕ್ಷರೇ ದಲಿತರಿದ್ದಾರೆ. ಅವರೇ ಸೂಕ್ತವಾದ ನಿರ್ಧಾರ ಮಾಡುತ್ತಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರವನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ದುಡ್ಡು ಇದ್ದವರಿಗೆ ಟಿಕೆಟ್ ಸಿಗಲಿದೆ ಎಂಬ ಡಾ.ಎಚ್‌.ಎನ್‌.ರವೀಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿ, ಟಿಕೆಟ್ ಕೊಡುವ ವಿಚಾರ ನನ್ನ ವ್ಯಾಪ್ತಿಯಲ್ಲಿ ಇಲ್ಲ. ಪಕ್ಷದ ಎಐಸಿಸಿ ಅಧ್ಯಕ್ಷರು, ಪಕ್ಷದ ಹಿರಿಯ ನಾಯಕರು ಕೊಡುತ್ತಾರೆ. ಡಾ ರವೀಂದ್ರ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಅಂಗೀಕರಿಸೋದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು. ರವೀಂದ್ರ ಅವರು ತಮ್ಮನನ್ನು ವರ್ಗಾವಣೆ ಮಾಡುವಂತೆ ಕೇಳಿದ್ದರು. ಎರಡೇ ದಿನದಲ್ಲಿ ವರ್ಗಾವಣೆ ಮಾಡಿಸಿ ಅದನ್ನು ನಾನು ವ್ಯಾಟ್ಸಾಪ್ ಕೂಡ ಮಾಡಿದ್ದೆ. ಅವರೊಬ್ಬಸ್ನೇಹಿತ. ಪಕ್ಷದಲ್ಲಿ ಮುಂದುವರಿಯೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದಷ್ಟೇ ಹೇಳಿದರು.

ಸಿಎಂ ಸಿದ್ದರಾಮಯ್ಯ ನಂ.1 ಸುಳ್ಳುಗಾರ: ಬಿಜೆಪಿ ಎಂಎಲ್‌ಸಿ ರವಿಕುಮಾರ್

ಸಮಸ್ಯೆಗಳ ಪರಿಹಾರಕ್ಕೆ ಜನತಾ ದರ್ಶನ ಆಯೋಜನೆ: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮಮಟ್ಟದಲ್ಲಿ ಜನತಾದರ್ಶನ ಆಯೋಜಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌಡ್ಲೆ, ಹೊಸಗಾವಿ, ಆಬಲವಾಡಿ, ಬಿದರಕೋಟೆ ಗ್ರಾಮಗಳಲ್ಲಿ ನಡೆದ ಜನತಾ ದರ್ಶನದಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿ ‌ಮಾತನಾಡಿದ ಅವರು, ಜಿಲ್ಲೆಯಲ್ಲಿ‌ ಶಕ್ತಿ ಯೋಜನೆಯಡಿ 4 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಾರಿಗೆ ಬಸ್ ಗಳಲ್ಲಿ ಸಂಚರಿಸಿದ್ದಾರೆ. 116 ಕೋಟಿ ರು. ಹಣವನ್ನು ಸರ್ಕಾರ ಭರಿಸಲಿದೆ ಎಂದರು.

ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗೆ ಸರ್ಕಾರ 36,000 ಕೋಟಿ ರು. ವೆಚ್ಚ ಮಾಡಿದೆ. ಈ ಯೋಜನೆಗಳಡಿ ಹಣವನ್ನು ಸರ್ಕಾರ ಭರಿಸುತ್ತಿದೆ. ಡಿಸಿಸಿ ಬ್ಯಾಂಕ್ ವತಿಯಿಂದ 136 ಕೋಟಿ ರು. ಹಣವನ್ನು ಬಡ್ಡಿರಹಿತವಾಗಿ ನೀಡಲಾಗಿದೆ ಎಂದರು‌. ಕೌಡ್ಲೆ ಪಂಚಾಯಿತಿ ಒಂದರಲ್ಲೇ ರೈತರಿಗೆ ಬಡ್ಡಿ ರಹಿತವಾಗಿ 3 ಕೋಟಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ 1.5 ಕೋಟಿ ರು. ಸಾಲ ನೀಡಲಾಗಿದೆ. ವ್ಯಾಪ್ತಿಯಲ್ಲಿ 4000 ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯುತ್ತಿದೆ‌ ಎಂದು ತಿಳಿಸಿದರು.

ಖಜಾನೆ ಖಾಲಿ ಆಗಿಲ್ಲ, ರಾಜ್ಯ ದಿವಾಳಿಯು ಸಹ ಆಗಿಲ್ಲ: ಯತೀಂದ್ರ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಾರದಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮೊದಲ ಹಂತದಲ್ಲಿ 35 ಲಕ್ಷ ರೈತರಿಗೆ ರು. 2000 ದಂತೆ 600 ಕೋಟಿ ರು. ಅನುದಾನ ವೆಚ್ಚ ಮಾಡಲಾಗಿದೆ. ಬೆಳೆ ವಿಮೆ 1400 ಕೋಟಿ ರು. ಒದಗಿಸಲಾಗಿದೆ ಎಂದರು. ಕಂದಾಯ ಇಲಾಖೆಯಲ್ಲಿ 9000 ಪ್ರಕರಣಗಳು ಬಾಕಿ ಇದ್ದವು. 8000 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಶ್ರಮಿಸಲಾಗುತ್ತಿದೆ. ಜನತಾ ದರ್ಶನದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸಲಾಗುವುದು. ದಾಖಲೆ ಕೊರತೆ ಅಥವಾ ಕಾನೂನು ಬಾಹಿರವಾಗಿದ್ದರೆ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

click me!