ಈಗ ರಾಜ್ಯದಲ್ಲಿ ಉಪಚುನಾವಣೆ ಬಂದಿದೆ. ಇದರಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲೂ ನೆಲಕಚ್ಚುತ್ತದೆ. ಹೀಗಾಗಿ ಏನಾದರೂ ಒಂದು ಸೃಷ್ಟಿ ಮಾಡಬೇಕಲ್ವಾ. ಬಿಜೆಪಿಯ ರಾಜಕಾರಣ ಏನು ಅಂತ ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಬಿಡಿ ಅದು ಬಾಲ ಪಕ್ಷ, ಬಿಜೆಪಿಯದ್ದು ಸಮಾಜವನ್ನು ವಿಭಜನೆ ಮಾಡುವ ಕೆಲಸ. ಮತಗಳನ್ನು ಸೆಳೆದು ಚುನಾವಣೆ ಗೆಲ್ಲಬೇಕು ಎನ್ನುವುದಷ್ಟೇ ಇವರ ಉದ್ದೇಶ: ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಅ.30): ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಸಂಪೂರ್ಣ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಯಾವ ರೈತರ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಮಾಡಿಲ್ಲ. ವಕ್ಫ್ ಸಂಸ್ಥೆಗಳು ತಮ್ಮದೇ ಆದ ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತಿವೆ ಎಂದು ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು(ಬುಧವಾರ) ಜಿಲ್ಲೆಯ ಪೊನ್ನಪೇಟೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ರಾಜ್ಯಮಟ್ಟದ ಹಾಕಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಎ.ಎಸ್. ಪೊನ್ನಣ್ಣ ಮಾತನಾಡಿದರು.
ಕೊಡಗಿನಲ್ಲಿ ಪತ್ತೆಯಾದ ವ್ಯಕ್ತಿ ಶವಕ್ಕೆ ರೋಚಕ ಟ್ವಿಸ್ಟ್: ಪತ್ನಿಯಿಂದಲೇ ಹತ್ಯೆ, ಶವ ಎಸೆಯಲು 800 ಕಿ.ಮೀ ಸಂಚಾರ
ವಕ್ಫ್ ಆಸ್ತಿ ಆಗಬೇಕಾದರೆ ನೊಟಿಫಿಕೇಷನ್ ಆಗಿ ನಂತರ ಅದನ್ನು ವಶಕ್ಕೆ ಪಡೆಯುವ ಕೆಲಸ ಆಗಬೇಕಾಗುತ್ತದೆ. ಆದರೆ ರೈತರಿಗೆ ನೊಟೀಸ್ ಕೊಟ್ಟಿರುವುದು ಬಿಜೆಪಿಯ ಕಾಲದಲ್ಲಿ. ಅವಾಗ ಯಾಕೆ ಬಿಜೆಪಿಯವರು ಸುಮ್ಮನಿದ್ದರು. ಆ ನೊಟೀಸ್ ಅನ್ನು ತಡೆ ಹಿಡಿದು ರೈತರ ಹಿತ ಕಾದಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿಯವರು ಮಾಡುತ್ತಿರುವುದು ರೈತರ ಹಿತ ದೃಷ್ಟಿಯಿಂದ ಅಲ್ಲ. ಚುನಾವಣೆಗಾಗಿ ಮಾಡುತ್ತಿದ್ದಾರೆ. ಈ ಚುನಾವಣೆ ಮುಗಿದ ಬಳಿಕ ಅವರು ಸುಮ್ಮನಾಗುತ್ತಾರೆ. ಇನ್ನು ಏನಿದ್ದರೂ ಮುಂದಿನ ಚುನಾವಣೆ ಬರಬೇಕು, ಆಗ ಏನಾದರೂ ಒಂದು ಶುರು ಮಾಡುತ್ತಾರೆ. ಅವರಿಗೆ ನಿಜವಾಗಿಯೂ ರೈತ ಹಿತಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ರಾಜ್ಯದಲ್ಲಿ ಉಪಚುನಾವಣೆ ಬಂದಿದೆ. ಇದರಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲೂ ನೆಲಕಚ್ಚುತ್ತದೆ. ಹೀಗಾಗಿ ಏನಾದರೂ ಒಂದು ಸೃಷ್ಟಿ ಮಾಡಬೇಕಲ್ವಾ. ಬಿಜೆಪಿಯ ರಾಜಕಾರಣ ಏನು ಅಂತ ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಬಿಡಿ ಅದು ಬಾಲ ಪಕ್ಷ, ಬಿಜೆಪಿಯದ್ದು ಸಮಾಜವನ್ನು ವಿಭಜನೆ ಮಾಡುವ ಕೆಲಸ. ಮತಗಳನ್ನು ಸೆಳೆದು ಚುನಾವಣೆ ಗೆಲ್ಲಬೇಕು ಎನ್ನುವುದಷ್ಟೇ ಇವರ ಉದ್ದೇಶ. ಇದರ ಭಾಗವಾಗಿ ವಕ್ಫ್ ಸಮಸ್ಯೆಗಳನ್ನು ಸೃಷ್ಟಿಸಿ ಹರಡಲಾಗುತ್ತಿದೆ. ಇದು ವಿಭಜನೆ ರಾಜಕಾರಣದ ಪಿತೂರಿಯ ಒಂದು ಭಾಗವಾಗಿದ್ದು, ಇದಕ್ಕೆ ಯಾರು ಕಿವಿಗೊಡಬಾರದು ಎಂದು ಪೊನ್ನಣ್ಣ ಹೇಳಿದರು.
ಇನ್ನು ಮುಡಾ ವಿಚಾರದಲ್ಲಿ ಮೈಸೂರಿನಲ್ಲಿ ಇಡಿ ತನಿಖೆ ನಡೆಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು ಇಡಿ, ಐಟಿ, ಬಿಜೆಪಿ ಐಟಿ ಸೆಲ್ ಇವರದ್ದೆಲ್ಲಾ ಒಂದೇ ಕೆಲಸ. ವಿರೋಧ ಪಕ್ಷಗಳನ್ನು ಮುಗಿಸಬೇಕು ಎನ್ನುವುದು ಇವರ ಕೆಲಸ. ಯಾವುದೇ ವಿರೋಧ ಪಕ್ಷ ಇಲ್ಲದೆ ರಾಜಕಾರಣ ಮಾಡಬೇಕು ಎನ್ನುವುದು ಇವರ ಉದ್ದೇಶ. ಲೋಕಸಭಾ ಚುನಾವಣೆಯಲ್ಲಿ ಅವರ ನಿರೀಕ್ಷೆಯಂತೆ ಆಗಲಿಲ್ಲ. ಸೋತರು, ಸೋತ ತಕ್ಷಣ ಈ ರೀತಿ ಕೆಲಸ ಆರಂಭಿಸಿದ್ದಾರೆ. ಎಲ್ಲಿಯೋ ಮೂಲೆಗುಂಪಾಗಿದ್ದ ಜೆಡಿಎಸ್ ಜೊತೆ ಯಾಕೆ ಇವರು ಸೇರಿಕೊಂಡರು. ಅದರಲ್ಲೂ ಬಿಜೆಪಿಗೆ ಯಶಸ್ಸು ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ಮುಗಿಸಬೇಕೆಂಬ ದೃಷ್ಟಿಯಿಂದ ಹೀಗೆ ಮಾಡುತ್ತಿದ್ದಾರೆ. ಆದರೆ ಇದರಲ್ಲೂ ಅವರು ಯಶಸ್ಸು ಕಾಣಲ್ಲ. ರಾಜ್ಯದ ಜನತೆ ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.