ಕೊಡಗಿನಲ್ಲಿ ಪತ್ತೆಯಾದ ವ್ಯಕ್ತಿ ಶವಕ್ಕೆ ರೋಚಕ ಟ್ವಿಸ್ಟ್‌: ಪತ್ನಿಯಿಂದಲೇ ಹತ್ಯೆ, ಶವ ಎಸೆಯಲು 800 ಕಿ.ಮೀ ಸಂಚಾರ

ಕೊಡಗಿನಲ್ಲಿ ಪತ್ತೆಯಾದ ತೆಲಂಗಾಣ ಮೂಲದ ರಮೇಶ್ ಶವ ಪ್ರಕರಣದಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ. 8 ಕೋಟಿ ಆಸ್ತಿಗಾಗಿ ಪತ್ನಿ ನಿಹಾರಿಕಾ ಪತಿಯನ್ನು ಕೊಲೆಗೈದು, ಕಾರಿನಲ್ಲಿ ಶವವನ್ನು ಕೊಡಗಿಗೆ ತಂದು ಎಸೆದಿದ್ದಾಳೆ. ಪರಿಚಿತ ಮತ್ತು ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದು, ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.

Telangana wife drive 800 km to dispose murderd husband body in kodagu

ಹೈದರಾಬಾದ್: ಕೊಡಗಿನಲ್ಲಿ ಇತ್ತೀಚೆಗೆ ಪತ್ತೆಯಾದ ತೆಲಂಗಾಣ ಮೂಲದ ರಮೇಶ್ ಎಂಬಾತನ ಶವದ ಹಿಂದೆ, ಪತ್ನಿಯ 8 ಕೋಟಿ ಆಸ್ತಿ ಲಪಟಾಯಿಸುವ ಸಂಚು ಅಡಗಿತ್ತು ಎಂಬ ಸ್ಫೋಟಕ ಅಂಶ ಬಯಲಾಗಿದೆ. ಹಣಕ್ಕಾಗಿ ಪತಿ ರಮೇಶ್‌ನನ್ನು ಹತ್ಯೆಗೈದ ಪತ್ನಿ ನಿಹಾರಿಕಾ ಬಳಿಕ ಕಾರಿನಲ್ಲಿ ಶವ ಇಟ್ಟುಕೊಂಡು ತೆಲಂಗಾಣದಿಂದ 800 ಕಿ.ಮೀ ದೂರದ ಕೊಡಗಿಗೆ ಬಂದು ಶವ ಎಸೆದು ಹೋಗಿದ್ದಳು. 8 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಪತಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಿಹಾರಿಕಾ ಈ ಕೃತ್ಯ ಎಸಗಿದ್ದಳು ಎಂಬ ಆಘಾತಕಾರಿ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪರಿಚಿತ, ಪ್ರಿಯಕರನೊಂದಿಗೆ ಸೇರಿ ಪತ್ನಿ ನಿಹಾರಿಕಾ ಪತಿಯ ಹತ್ಯೆ ಮಾಡಿದ್ದಾಳೆ. ಪ್ರಕರಣ ಸಂಬಂಧ ಮೃತ ರಮೇಶ್ ಪತ್ನಿ ನಿಹಾರಿಕಾ, ಆಕೆಯ ಪ್ರಿಯತಮ ನಿಖಿಲ್ ಹಾಗೂ ಇನ್ನೋರ್ವ ಆರೋಪಿ ಅಂಕುರ್‌ನನ್ನು ಬಂಧಿಸಲಾಗಿದೆ.

ಆರೋಪಿಗಳ ಪತ್ತೆ ಹೇಗೆ?: ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಶವವೊಂದು ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಕೆಂಪು ಬಣ್ಣದ ಕಾರೊಂದು ಪತ್ತೆಯಾಗಿದೆ. ಆ ಕಾರು ರಮೇಶ್ ಹೆಸರಲ್ಲಿ ನೋಂದಣಿಯಾಗಿತ್ತು. ಅವರ ಪತ್ನಿ ನಿಹಾರಿಕಾ ತಮ್ಮ ಪತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದು ತಿಳಿಯುತ್ತಿದ್ದಂತೆ ತೆಲಂಗಾಣ ಪೊಲೀಸರನ್ನು ಸಂಪರ್ಕಿಸಲಾಯಿತು.

ಈ ವೇಳೆ ಕೊಲೆಯಲ್ಲಿ ನಿಹಾರಿಕಾ ಪಾತ್ರ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ವಿಚಾರಣೆ ವೇಳೆ ಆಕೆಯೇ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಂತೆಯೇ ಕೃತ್ಯದಲ್ಲಿ ಭಾಗಿಯಾದ ಇತರರ ಹೆಸರನ್ನೂ ಬಾಯ್ದಿಟ್ಟಿದ್ದಾಳೆ.

ಯಾರು ಈ ನಿಹಾರಿಕಾ?
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಈಕೆಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದು, ಮಗುವಾದ ನಂತರ ವಿಚ್ಛೇದನ ಪಡೆದಿದ್ದಳು. ಹರ್ಯಾಣದಲ್ಲಿ ಹಣಕಾಸು ವಂಚನೆ ಆರೋಪದಲ್ಲಿ ಜೈಲು ಸೇರಿದ್ದ ಈಕೆಗೆ ಅಂಕುರ್‌ನ ಪರಿಚಯವಾಗಿತ್ತು. ಅಲ್ಲಿಂದ ಬಿಡುಗಡೆ ಬಳಿಕ ರಮೇಶ್ ಜೊತೆ 2ನೇ ಮದುವೆಯಾದ ನಿಹಾರಿಕಾ, ನಿಖಿಲ್ ಎಂಬುವವನ ಜತೆಗೂ ಸಂಬಂಧವಿರಿಸಿಕೊಂಡಿದ್ದಳು.

Latest Videos
Follow Us:
Download App:
  • android
  • ios