ಟಿ.ಎ.ಶರವಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಮಾಡಿ ಹೇಳಲಿ ಎಂದು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದ್ದಾರೆ.
ಬೆಂಗಳೂರು (ನ.22): ಟಿ.ಎ.ಶರವಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಮಾಡಿ ಹೇಳಲಿ ಎಂದು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದ್ದಾರೆ. ಅಲ್ಲದೆ, ಧೈರ್ಯ ಇದ್ದರೆ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ಎಂದೂ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರವಣ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ ಅಂತ ಮಗನ ತಲೆ ಮೇಲೆ ಕೈ ಇಟ್ಟು ಆಣೆ ಮಾಡ್ತೀರಾ ಕುಮಾರಸ್ವಾಮಿ ಅವರೇ. ಧೈರ್ಯ ಇದೆಯಾ ನಿಮಗೆ ಆಣೆ ಮಾಡೋಕೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ. ಅಶೋಕ್ ಪ್ರತಿಪಕ್ಷದ ನಾಯಕ. ಅವರ ಮುಂದೆ ಹೋಗಿ ನಿಲ್ಲುತ್ತೀರಾ? ಎರಡು ಸೀಟಿಗೋಸ್ಕರ ಅಮಿತ್ ಶಾ ಮುಂದೆ ದೇವೇಗೌಡ ಹೋಗಿ ನಿಂತುಕೊಳ್ಳಬೇಕಿತ್ತಾ? ತೆನೆ ಹೊತ್ತ ಮಹಿಳೆಯನ್ನು ಯಾರ ಯಾರ ಹತ್ತಿರ ಕರೆದುಕೊಂಡು ಹೋಗ್ತೀರಿ? ಚನ್ನಪಟ್ಟಣದಲ್ಲಿ 20 ಸಾವಿರ ಮುಸ್ಲಿಂ ಮತ ಪಡೆದು ಗೆದ್ದಿರಲ್ಲ, ಅದು ಯಾರ ಮುಖ ನೋಡಿ ಬಂತು ಎಂದು ಹರಿಹಾಯ್ದರು. ದೇವೇಗೌಡರು ಒಪ್ಪದಿದ್ದರೆ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಮಾಡುತ್ತೇವೆ. ಶಾಸಕರ ಜೊತೆಗೂ ಮಾತಾಡುತ್ತಿದ್ದೇನೆ. ನಾನು ಅಮಾನತು ಒಪ್ಪುವುದಿಲ್ಲ. ತಾಳಿ ಕಟ್ಟಿರೋ ಹೆಂಡತಿ ಅಲ್ಲ ನಾನು ಹೋಗು ಅಂದ ಕೂಡಲೇ ಹೋಗೋಕೆ ಎಂದು ತಿಳಿಸಿದರು.
ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್‌ನಿಂದ ಇಬ್ರಾಹಿಂ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಾಜ್ಯದ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಸಂವಿಧಾನ ಹಾಗೂ ನಿಯಮಗಳ ಅಡಿಯಲ್ಲಿ ಶಿಸ್ತು ಉಲ್ಲಂಘನೆ ಮಾಡಿದ ಕಾರಣದಿಂದ ಇಬ್ರಾಹಿಂ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇಬ್ರಾಹಿಂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಸಂಪೂರ್ಣ ನಿಷ್ಕ್ರಿಯರಾಗಿದ್ದರು. ಸಂಘಟನೆ ಬಲವರ್ಧನೆಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ.
ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಂಡಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಪಕ್ಷದ ನಿರ್ಣಯವನ್ನು ಅವರು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುತ್ತಾರೆ ಎಂದು ಹೇಳಲಾಗಿದೆ. ನ.7ರಂದು ಇಬ್ರಾಹಿಂ ʼಚಿಂತನ ಮಂಥನʼ ಎನ್ನುವ ಹೆಸರಿನಲ್ಲಿ ಸಭೆ ಕರೆದು ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಸುಳ್ಳು ಆರೋಪಗಳನ್ನು ಮಾಡಿದ್ದರು.
ಒರಿಜಿನಲ್ ಜೆಡಿಎಸ್‌ಗೆ ನಾನೇ ಅಧ್ಯಕ್ಷ, ಇಂಡಿಯಾಕ್ಕೆ ನಮ್ಮ ಬೆಂಬಲ: ಇಬ್ರಾಹಿಂ
ಬಿಜೆಪಿ ಜತೆ ಮೈತ್ರಿಗೆ ಒಲವು ಇರುವವರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿದ್ದರು. ಅಲ್ಲದೇ, ನ.15ರಂದು ಕೇರಳದ ತಿರುವನಂತಪುರದಲ್ಲಿ ಸಿ.ಕೆ.ನಾನು ನೇತೃತ್ವದಲ್ಲಿ ಪಕ್ಷ ವಿರೋಧಿ ಸಭೆಯನ್ನು ನಡೆಸಿ, ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತಾರೆ. ಇವೆಲ್ಲಾ ನಡವಳಿಕೆ, ಹೇಳಿಕೆಗಳ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದನ್ನು ಗಮನಿಸಿ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.