* ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ನಾಯಕ ಜೆಡಿಎಸ್ ಸೇರ್ಪಡೆ ಫಿಕ್ಸ್
* ದೇವೇಗೌಡ ಹಾಗೂ ಕುಮಾರಸ್ವಾಮಿ ಜೊತೆ ಸುದೀರ್ಘ ಚರ್ಚೆ
* ಸ್ವಾಮೀಜಿಗಳ ಜತೆ ಚರ್ಚಿಸಿ JDS ಸೇರ್ಪಡೆ ದಿನಾಂಕ ಫಿಕ್ಸ್
ಬೆಂಗಳೂರು, (ಮಾ.12): ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಹಾಗೂ ವಿಧಾನಪರಿಷತ್ ಸ್ಥಾನಕ್ಕೂ ಸಿಎಂ ಇಬ್ರಾಹಿಂ (CM Ibrahim) ಅವರು ಇಂದು(ಶನಿವಾರ) ಅಧಿಕೃತವಾಗಿ ರಾಜೀನಾಮೆ ನೀಡಿದರು.
ರಾಜೀನಾಮೆ ಬಳಿಕ ಮೊದಲೇ ಹೇಳಿದಂತೆ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ (HD Devegowda)ಅವರನ್ನ ಭೇಟಿ ಮಾಡಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದರು.
ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾಲಿ MLC, ಜೆಡಿಎಸ್ ಸೇರ್ಪಡೆಯಾಗುವುದಾಗಿ ಘೋಷಣೆ
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಜೊತೆ ಸುದೀರ್ಘವಾಗಿ ಸಮಾಲೋಚನೆ ಮಾಡಿದ್ದು, ಫಲಪ್ರದ ಚರ್ಚೆಯಾಗಿದೆ ಎಂದು ಸ್ವತಃ ಇಬ್ರಾಹಿಂ ತಿಳಿಸಿದ್ದಾರೆ.
ಇನ್ನು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಮಾಜಿ ಪ್ರಧಾನಿ, ಜೆಡಿಎಸ್ (JDS) ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಜೊತೆ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಜೊತೆ ಫಲಪ್ರದ ಚರ್ಚೆ ಮಾಡಿದ್ದೇನೆ. ಮಾತುಕತೆಯಿಂದ ನಾನು ಸಂತೋಷವಾಗಿದ್ದೇನೆ ಎಂದು ಹೇಳಿದರು.
ನಾಳೆ (ಭಾನುವಾರ) ನಮ್ಮ ಸಮಾಜದ ಗುರುಗಳು ಮತ್ತು ಕೆಲವು ಪೀಠಾಧಿಪತಿಗಳ ಜೊತೆ ಚರ್ಚೆ ಮಾಡುವುದು ಇದೆ. ಅವರ ಜೊತೆ ಚರ್ಚೆ ಮಾಡಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಸಮಾಜದ ಗುರುಗಳ ಅಪ್ಪಣೆ ಪಡೆಯಬೇಕಾಗುತ್ತದೆ. ಯಾವಾಗ ಜಾತ್ಯಾತೀತ ಜನತಾದಳ ಸೇರ್ಪಡೆ ಎಂಬ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ. ಸುತ್ತೂರು ಶ್ರೀ ಮತ್ತು ಇತರ ಕೆಲವು ಸ್ವಾಮೀಜಿಗಳ ಜೊತೆ ಚರ್ಚೆ ಮಾಡುತ್ತೇನೆ. ಅವರ ಜೊತೆ ಎಲ್ಲಾ ಚರ್ಚೆ ಮಾಡಿದ ಬಳಿಕ ಸೇರ್ಪಡೆ ದಿನಾಂಕ ನಿಗದಿ ಮಾಡುತ್ತೇನೆ ಎಂದು ತಿಳಿಸಿದರು.
ಮಧ್ಯಾಹ್ನವಷ್ಟೇ ಕಾಂಗ್ರೆಸ್ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರವಾಗಿ ದೇವೇಗೌಡರ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದರು.
ನನ್ನ ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯಗೆ ಕೊಡುತ್ತಿರುವೆ. ಅಂಗೀಕಾರ ಮಾಡುವುದು, ಬಿಡುವುದು ಅವರಿಷ್ಟ. ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೂ ತಲುಪಿಸುತ್ತಿದ್ದೇನೆ. ಅನೇಕರು ರಾಜೀನಾಮೆ ನೀಡಿ ನನ್ನ ಜತೆ ಬರ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಹೇಳಿದ್ದರು.
ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ನಮ್ಮನ್ನು ಬಳಸಿಕೊಳ್ಳುತ್ತಿದೆ, ಆದರೆ ಅಧಿಕಾರ ಕೊಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯಲು, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ. 1995ನೇ ಇಸವಿಯಲ್ಲಿ ಆಗಿದ್ದ ಬೆಳವಣಿಗೆಯೇ ಈಗಲೂ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎನ್ನುವುದನ್ನು ನಾನು ಹಲವು ದಿನಗಳಿಂದ ಹೇಳುತ್ತಲೇ ಇದ್ದೇನೆ ಎಂದು ಗುಡುಗಿದ್ದರು.