ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡದಂತೆ ಹೈಕಮಾಂಡ್ ಕಟು ಎಚ್ಚರಿಕೆ ನೀಡಿದ್ದರೂ ಕಾಂಗ್ರೆಸ್ ನಾಯಕರು ಹಾಗೂ ಸಚಿವರು ಅಧಿಕಾರ ಹಂಚಿಕೆ ವಿಚಾರದಲ್ಲಿ ಬಹಿರಂಗವಾಗಿ ಪರ -ವಿರೋಧ ಹೇಳಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ವರಿಷ್ಠರ ಸೂಚನೆಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ.
ಬೆಂಗಳೂರು (ನ.04): ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡದಂತೆ ಹೈಕಮಾಂಡ್ ಕಟು ಎಚ್ಚರಿಕೆ ನೀಡಿದ್ದರೂ ಕಾಂಗ್ರೆಸ್ ನಾಯಕರು ಹಾಗೂ ಸಚಿವರು ಅಧಿಕಾರ ಹಂಚಿಕೆ ವಿಚಾರದಲ್ಲಿ ಬಹಿರಂಗವಾಗಿ ಪರ -ವಿರೋಧ ಹೇಳಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ವರಿಷ್ಠರ ಸೂಚನೆಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಯಾವುದೇ ನಾಯಕರು ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಖಡಕ್ ಎಚ್ಚರಿಕೆ ನೀಡಿದ್ದರು.
ಇಷ್ಟಾದರೂ ರಾಜ್ಯದಲ್ಲಿ ಅಧಿಕಾರ ಬದಲಾವಣೆ ಕುರಿತ ಕಾಂಗ್ರೆಸ್ ಮುಖಂಡರ ಪರ-ವಿರೋಧದ ಹೇಳಿಕೆ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಈಗ ನಾನೇ ಮುಖ್ಯಮಂತ್ರಿ, ಮುಂದೆಯೂ ನಾನೇ ಮುಂದುವರೆಯುತ್ತೇನೆ’ ಎಂದು ಗುರುವಾರ ನೀಡಿದ ಹೇಳಿಕೆ ಅಧಿಕಾರ ಹಂಚಿಕೆ ಕುರಿತು ಮತ್ತೊಂದು ಸುತ್ತಿನ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಸಿಎಂ ಹೇಳಿಕೆ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ತೇಲಿಬಿಡುವ ಮೂಲಕ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದರು.
ಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ನಿರ್ಧಾರ ಫೈನಲ್: ಸಿದ್ದು ಸ್ಪಷ್ಟನೆ
ಇದೀಗ ಸಚಿವರಾದ ಬಿ.ಆರ್.ತಿಮ್ಮಾಪುರ, ಸಂತೋಷ್ ಲಾಡ್, ಚಲುವರಾಯಸ್ವಾಮಿ ಅವರು ಅಧಿಕಾರ ಬದಲಾವಣೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳುತ್ತಲೇ ತಮ್ಮ ತಮ್ಮ ಅಭಿಪ್ರಾಯ ಹೊರಹಾಕಿದ್ದು, ಪ್ರಿಯಾಂಕ್ ಖರ್ಗೆ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಾನೂ ಮುಖ್ಯಮಂತ್ರಿ ಆಗಲು ಸಿದ್ಧ ಎಂದಿದ್ದಾರೆ.ಇದರ ನಡುವೆ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾದರೆ ತಮ್ಮ ಬೆಂಬಲವಿದೆ ಎಂದಿದ್ದಾರೆ.
ಇದಕ್ಕೆ ಡಾ.ಪರಮೇಶ್ವರ್ ಕೂಡ ಅಂಥ ಅದೃಷ್ಟ ಕೂಡಿಬರಲಿ ಎಂದು ಕಾಯುತ್ತಿದ್ದೇನೆ ಎಂದಿರುವುದು ಕುತೂಹಲ ಮೂಡಿಸಿದೆ. ನಾನು ಸಿಎಂ ಆಗಲು ಸಿದ್ಧ-ಪ್ರಿಯಾಂಕ್: ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವೈಯಕ್ತಿಕ ಎಂದು ಕರೆದಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವುದು ಹೈಕಮಾಂಡ್. ಒಂದು ವೇಳೆ ಹೈಕಮಾಂಡ್ ನೀನೇ ಸಿಎಂ ಆಗು ಅಂದರೆ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಾಲ್ಕು ಮಂದಿ ಕೂತು ಅಧಿಕಾರ ಹಂಚಿಕೆ ಕುರಿತು ಮಾತನಾಡಿದ್ದಾರೆ. ಹೀಗಾಗಿ ಯಾರು ಮಾತನಾಡಿದ್ದಾರೋ ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ. ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂಬುದು ಸಿದ್ದರಾಮಯ್ಯ ಅವರ ವೈಯಕ್ತಿಕ ಅಭಿಪ್ರಾಯ. ಜಿಪಂ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಆದರೆ ಅವರವರ ಹೇಳಿಕೆ ಕಲ್ಲಿಗೆ ಕೆತ್ತಿದ ಶಾಸನವಲ್ಲ.
ಅಂತಿಮವಾಗಿ ಎಲ್ಲವೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೇ ವೇಳೆ ಈಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಮುಂದೆಯೂ ಅವರೇ ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರೆ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಮತ್ತು ಶಾಸಕರು ತೀರ್ಮಾನಿಸುತ್ತಾರೆ. ಎಲ್ಲರೂ ಅವರವರ ಅಭಿಪ್ರಾಯ ಹೇಳುತ್ತಾರೆ ಅಷ್ಟೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.
ಪರಂ ಸಿಎಂ ಆಗ್ತಾರೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸಹಕಾರ ಸಚಿವ ರಾಜಣ್ಣ ಮುಂದಿನ ದಿನಗಳಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಮುಖ್ಯಮಂತ್ರಿ ಆಗುತ್ತಾರೆ ಎಂದಿರುವುದು ಅಚ್ಚರಿ ಮೂಡಿಸಿದೆ. ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಭವಿಷ್ಯದಲ್ಲಿ ಪರಮೇಶ್ವರ್‌ಅವರಿಗೆ ಅದೃಷ್ಟವಿದೆ. ಸಿದ್ದರಾಮಯ್ಯ ಅವರಿಗೆ ಸಾಕು ಅನಿಸಿದ ದಿನ ರಾಜ್ಯದಲ್ಲಿ ಡಾ.ಜಿ.ಪರಮೇಶ್ವರ ಮುಖ್ಯ ಮಂತ್ರಿ ಆಗಬೇಕು ಎಂದು ರಾಜಣ್ಣ ತಿಳಿಸಿದ್ದಾರೆ. ಜತೆಗೆ, ನಾನು ಹೇಳಿದ ಯಾವವಿಚಾರವೂ ಅಸತ್ಯವಾಗಿಲ್ಲ ಎಂದಿದ್ದಾರೆ.
ಸಿದ್ದು 5 ವರ್ಷ ನಾನೇ ಸಿಎಂ ಎನ್ನುವುದು ಸರಿಯಲ್ಲ: ಎಸ್.ಎಂ.ಕೃಷ್ಣ
ರಾಜಣ್ಣ ಹೇಳಿಕೆಗೆ ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದು, ನಾನು ಮುಖ್ಯಮಂತ್ರಿ ಆಗಬೇಕು ಎಂಬ ರಾಜಣ್ಣ ಹೇಳಿಕೆಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಯಾಗುವ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆ ಪಡುತ್ತೇನೆ ಎಂದ ಅವರು, ಆ ಅದೃಷ್ಟ ಯಾವಾಗ ಕೂಡಿಬರುತ್ತೆ ಅಂತ ಹೇಳೋಕೆ ಆಗುವುದಿಲ್ಲ ಎಂದರು.ಇನ್ನು ರಾಜಣ್ಣ ಅವರದು ವೈಯಕ್ತಿಕ ಹೇಳಿಕೆ ಎಂದಿರುವ ಚಲುವರಾಯಸ್ವಾಮಿ, ಸಿಎಂ ಆಯ್ಕೆ ಹೈಕಮಾಂಡ್ ನಿರ್ಧಾರ. ನಾನು ಯಾವುದೇ ಸಮುದಾಯದ ವಿರೋಧಿ ಅಲ್ಲ. ಈ ವಿಚಾರದಲ್ಲಿ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದಿದ್ದಾರೆ.