ಸಿಎಂ ಬದಲಾವಣೆ ಇಲ್ಲವೇ ಇಲ್ಲ: ತನ್ನ ಒಡಕನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಕುತಂತ್ರ

By Kannadaprabha NewsFirst Published Aug 10, 2022, 4:25 AM IST
Highlights

ಮುಖ್ಯಮಂತ್ರಿ ಬದಲಾವಣೆ ವದಂತಿಯನ್ನು ಬಲವಾಗಿ ತಳ್ಳಿ ಹಾಕಿರುವ ಹಲವು ಬಿಜೆಪಿ ನಾಯಕರು ಇದೆಲ್ಲ ಕಾಂಗ್ರೆಸ್‌ನ ಕುತಂತ್ರ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಇಲ್ಲ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಆ.10) : ಟ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್‌.ಅಶೋಕ್‌, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಇಂಧನ ಸಚಿವ ವಿ.ಸುನೀಲ್‌ಕುಮಾರ್‌, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮತ್ತಿತರರು ಮುಖ್ಯಮಂತ್ರಿಗಳ ಬದಲಾವಣೆಯನ್ನು ಅಲ್ಲಗಳೆದಿದ್ದಾರೆ. ಜತೆಗೆ ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿರುವುದು ಹಾಸ್ಯಾಸ್ಪದ. ಸೋಲಿನ ಭೀತಿಯಿಂದ ಆ ಪಕ್ಷ ವದಂತಿ ಹಬ್ಬಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಸಿಎಂ ಬದಲಾವಣೆ: ಈ ಹಿಂದೆ ಮುಖ್ಯಮಂತ್ರಿ ಬದಲಿಸಿದ ಉದಾಹರಣೆ ಕೊಟ್ಟ ಬಿಜೆಪಿ ನಾಯಕ

ಕಟೀಲ್‌, ರವಿ, ಇತರರ ಆಕ್ರೋಶ:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಬಸವರಾಜ ಬೊಮ್ಮಾಯಿ(Basavaraj Bommai)ಯವರು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ. ಸಿದ್ದರಾಮಯ್ಯ ಉತ್ಸವದ ಬಳಿಕ ಕಾಂಗ್ರೆಸ್‌ನಲ್ಲಿ ಒಳ ಜಗಳ, ಬೀದಿ ಜಗಳ ಹೆಚ್ಚಾಗಿದೆ. ತನ್ನ ಆಂತರಿಕ ಕಚ್ಚಾಟವನ್ನು ಮುಚ್ಚಿಡಲು ಕಾಂಗ್ರೆಸ್‌(Congress) ಈ ರೀತಿ ಟ್ವೀಟ್‌ ಮಾಡಿದೆ. ತನ್ನ ಗೊಂದಲವನ್ನು ಮೊದಲು ಕಾಂಗ್ರೆಸ್‌ ಬಗೆಹರಿಸಿಕೊಳ್ಳಲಿ’ ಎಂದು ಮಂಗಳೂರಿನಲ್ಲಿ ಹೇಳಿದರು.

ಸಿ.ಟಿ.ರವಿ(C.T.Ravi) ಮಾತನಾಡಿ, :ಮುಖ್ಯಮಂತ್ರಿ ಬದಲಾವಣೆ ಇಲ್ಲ. ಇದೊಂದು ಕಲ್ಪಿತ ಸುದ್ದಿ. ನಾನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೇಳುತ್ತಿದ್ದೇನೆ. ಇಂಥ ಯಾವುದೇ ಚರ್ಚೆ ಅಥವಾ ಚಿಂತನೆ ಇಲ್ಲ’ ಎಂದು ಹೇಳಿದರು.

‘ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಇಂಥ ಆಧಾರವಿಲ್ಲದ ಸುದ್ದಿ ಕೇಳಿಬರುತ್ತಿದೆ. ವದಂತಿಯೇ ನಿಜವಾಗಿದ್ದರೆ ಇಷ್ಟುಹೊತ್ತಿಗೆ ಬೊಮ್ಮಾಯಿ ಅವರು ಹತ್ತು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಬೇಕಾಗಿತ್ತು’ ಎಂದರು.

ಟ್ವೀಟ್‌ ಹಾಸ್ಯಾಸ್ಪದ- ಅಶೋಕ್‌:

ಸಚಿವ ಅಶೋಕ್‌ ಮಾತನಾಡಿ, ‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿರುವುದು ಹಾಸ್ಯಾಸ್ಪದ. ಬೊಮ್ಮಾಯಿ ಅವರು ಈಗಲೂ ಮುಖ್ಯಮಂತ್ರಿ. ಮುಂದೆಯೂ ಮುಖ್ಯಮಂತ್ರಿ. ಚುನಾವಣೆ ಬಳಿಕವೂ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ವೇ ಇಲ್ಲ Arun Singh

‘ಕಳೆದ ವಾರ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯ ಸರ್ಕಾರದ ಬಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಾರಾದರೂ ಬದಲಾವಣೆ ಆಗಲಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರೆ ಅಂಥವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಕಾಂಗ್ರೆಸ್‌ ಪಕ್ಷ ಭ್ರಮಾಲೋಕದಿಂದ ಹೊರಗೆ ಬರಬೇಕು. ಸೋಲಿನ ಭೀತಿಯಿಂದ ಕಾಂಗ್ರೆಸ್‌ ಪಕ್ಷ ಇಂಥ ವದಂತಿ ಹಬ್ಬಿಸುತ್ತಿದೆ’ ಎಂದು ತೀಕ್ಷ$್ಣವಾಗಿ ಹೇಳಿದರು.

ಖಾಲಿ ಇಲ್ಲ- ಕತ್ತಿ, ಸುನೀಲ್‌: ಸಚಿವ ಉಮೇಶ್‌ ಕತ್ತಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಆಗಸ್ಟ್‌ 15ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದು, ಫಲಿತಾಂಶದ ಬಳಿಕ ತಮಗೆ ಎಲ್ಲವೂ ಗೊತ್ತಾಗಲಿದೆ ಎಂದರು.

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುವುದಾಗಿ ಬಿಜೆಪಿ ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ. ಆದರೆ, ಕಾಂಗ್ರೆಸ್‌ ಮನೆಯೇ ಕೆಟ್ಟು ಹೋಗಿದೆ. ಹೀಗಾಗಿ, ಈಗ ಉಳಿದವರ ಮನೆ ಕೆಡಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದೆ. ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಮಾತನಾಡಲು ಸಾಧ್ಯವಾಗದೆ ಊಹಾಪೋಹಗಳ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಸುನೀಲ್‌ಕುಮಾರ್‌ ಪ್ರಕಟಣೆ ಮೂಲಕ ವಾಗ್ದಾಳಿ ಮಾಡಿದ್ದಾರೆ.

ಸುಧಾಕರ್‌, ಸಿಸಿಪಾ ಕಿಡಿ: ಸಚಿವ ಸಿ.ಸಿ.ಪಾಟೀಲ್‌, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಕಾಂಗ್ರೆಸ್‌ ನಾಯಕರು ಮೊದಲು ತಮ್ಮ ಪಕ್ಷದಲ್ಲಿನ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಲಿ ಎಂದು ಹರಿಹಾಯ್ದಿದ್ದಾರೆ.

ಆರೋಗ್ಯ ಸಚಿವ ಸುಧಾಕರ್‌ ಅವರು, ‘ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಎಂಬುದು ಕಾಂಗ್ರೆಸ್‌ ಕಾಣುತ್ತಿರುವ ಕನಸು. ಬೊಮ್ಮಾಯಿ ಅವರ ದಕ್ಷ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಗಾಜಿನ ಮನೆಯಲ್ಲಿ ನಿಂತು ಅನ್ಯರತ್ತ ಕಲ್ಲು ತೂರುತ್ತಿರುವ ಕಾಂಗ್ರೆಸ್ಸಿಗರ ಮನಸ್ಥಿತಿ ಬಗ್ಗೆ ಅಯ್ಯೋ ಎನ್ನಿಸುತ್ತಿದೆ. ದೆಹಲಿ ಮಾಲೀಕರು ಕಳುಹಿಸಿದ ಚೀಟಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಘನ ಉದಾಹರಣೆ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಇದೆ’ ಎಂದಿದ್ದಾರೆ.

click me!