ಸಿದ್ದು, ಎಚ್‌ಡಿಕೆ ವಿರುದ್ಧ ಕೇಸ್‌ ದಾಖಲಿಸುವ ಕೆಲಸವಾಗುತ್ತಿದೆ : ಸಿಎಂ ಎಚ್ಚರಿಕೆ

By Kannadaprabha NewsFirst Published Nov 29, 2019, 7:28 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುವ ಕೆಲಸವಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. 

ಕಾರವಾರ [ನ.29]:  ಅನರ್ಹ ಶಾಸಕರನ್ನು ಯಡಿಯೂರಪ್ಪ ಕೊಂಡುಕೊಂಡಿದ್ದಾರೆ ಎಂದು ಮೇಲಿಂದ ಮೇಲೆ ಆಪಾದನೆ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಿಡಿಕಾರಿದ್ದಾರೆ. ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಿದರೆ ಮಾನನಷ್ಟಮೊಕದ್ದಮೆ ಹೂಡುವುದಾಗಿ ಮಾಜಿ ಸಿಎಂಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಮುಂಡಗೋಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮೇಲಿಂದ ಮೇಲೆ ಈ ರೀತಿ ಆಪಾದನೆ ಮಾಡುತ್ತಿದ್ದು, ಹಗುರವಾಗಿ ಮಾತನಾಡುತ್ತಿದ್ದಾರೆ. ಇವರಿಬ್ಬರ ಮೇಲೆ ಮಾನನಷ್ಟಮೊಕದ್ದಮೆ ದಾಖಲಿಸುವ ಕೆಲಸ ಪಕ್ಷದ ವತಿಯಿಂದ ನಡೆಯುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾನಹಾನಿ ಕೇಸ್‌ ಹಾಕ್ತೀವಿ- ಕಟೀಲ್‌: 

ಈ ನಡುವೆ ಬಿಜೆಪಿಯವರು ಕೆಟ್ಟರೀತಿಯಲ್ಲಿ ಸಂಪಾದನೆ ಮಾಡಿದ ದುಡ್ಡನ್ನು ಹಂಚುತ್ತಿದ್ದು, ಇದೇ ದುಡ್ಡಿನಿಂದಲೇ ಶಾಸಕರನ್ನು ಖರೀದಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರೇಕೆರೂರಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ. ಅವರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ಕೆಟ್ಟ ಪದ ಬಳಕೆ: 'ಕಟೀಲ್'ರಿಂದ ಸಿದ್ದುಗೆ ಮಾನನಷ್ಟ ಮೊಕದ್ದಮೆಯ ಕುಣಿಕೆ!...

ಹೊಸಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಬಳಸುವ ಅತ್ಯಂತ ಕೆಟ್ಟಪದವನ್ನು ಸಿದ್ದರಾಮಯ್ಯ ಬಳಸಿದ್ದಾರೆ. ಇಂತಹ ಅವಾಚ್ಯ ಶಬ್ದವನ್ನು ಬಳಸಿ ತಮ್ಮ ವ್ಯಕ್ತಿತ್ವವನ್ನು ತಾವೇ ಕುಗ್ಗಿಸಿಕೊಂಡಿದ್ದಾರೆ. ಅಸಂವಿಧಾನಿಕ ಪದ ಬಳಸಿ ರಾಜ್ಯದ ಮಹಿಳೆಯರನ್ನು ಅವಮಾನ ಮಾಡಿದ್ದಾರೆ. ಕೆಟ್ಟಪದ ಬಳಕೆ ಮೂಲಕ ಸಿದ್ದರಾಮಯ್ಯ ತಮ್ಮ ಸಂಸ್ಕೃತಿಯನ್ನು ತೋರಿಸಿಕೊಟ್ಟಿದ್ದು, ಸಿದ್ದರಾಮಯ್ಯ ವಿರುದ್ಧ ಮಾನನಷ್ಟಮೊಕದ್ದಮೆ ದಾಖಲು ಮಾಡಲಾಗುವುದು ಎಂದರು.

click me!