
ಬೆಂಗಳೂರು, (ಜು.17): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿ ಪ್ರವಾಸ ಮುಗಿಸಿ ವಾಪಸ್ ಬೆಂಗಳೂರು ವಿಮಾನ ಹತ್ತಿದ್ದಾರೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಿಎಂ ಬಿಎಸ್‌ವೈ ಭೇಟಿಯಾಗಿದ್ದು, ರಾಜ್ಯದ ವಿಚಾರವಾಗಿ ಹಲವು ಮಹತ್ವದ ಚರ್ಚೆಗಳನ್ನ ಮಾಡಿದ್ದಾರೆ.
ಕೇಂದ್ರ ನಾಯಕರ ಜೊತೆಗಿನ ಮಾತುಕತೆ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಅವರು ದಿಢೀರ್ ಶಾಸಕಾಂಗ ಸಭೆ ಕರೆದಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ನಾನು ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ, ದೆಹಲಿಯಿಂದ ಬಿಎಸ್‌ವೈ ಸಂದೇಶ!
ಎಲ್ಲಾ ನಾಯಕರೊಂದಿಗೆ ನಗುಮುಖದಿಂದಲೇ ಮಾತನಾಡಿ ಬಂದಿರುವ ಬಿಎಸ್ ವೈ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇದುವರೆಗೆ ಯಾವುದೇ ಬದಲಾವಣೆ ಚರ್ಚೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಹೇಳಿದ್ದಾರೆ. ಕೆಲವರು ಒಬ್ಬಿಬ್ಬರು ನನ್ನ ವಿರುದ್ಧ ಮಾತಾಡ್ತಾರೆ. ಅದರ ಬಗ್ಗೆ ನಾನು ಕೇಂದ್ರ ನಾಯಕರ ಜೊತೆ ಚರ್ಚೆ ಮಾಡಿಲ್ಲ. ಕೇಂದ್ರ ನಾಯಕರು ಆ ಬಗ್ಗೆ ಕೇಳಿಲ್ಲ. ನನ್ನ ವಿರುದ್ಧ ಮಾತಾಡೋರು ಸುಧಾರಣೆ ಮಾಡಿಕೊಳ್ಳೋದು ಅವರಿಗೆ ಬಿಟ್ಟ ವಿಚಾರ. ಜುಲೈ 26ಕ್ಕೆ ಶಾಸಕಾಂಗ ಪಕ್ಷ ಸಭೆ ಕರೆದಿದ್ದೇನೆ. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಅಂದಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಮೋದಿ ಅವರ ಜೊತೆ ಅರ್ಧ ಗಂಟೆ ದೇಶದ ರಾಜ್ಯದ ವಿಚಾರ ಚರ್ಚೆ ಮಾಡಿದೆ. ಇದು ಬಹಳ ಯಶಸ್ವಿ ಭೇಟಿಯಾಗಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು, ಸಂಘಟನೆ ಬಲ ಪಡಿಸಬೇಕು ಎನ್ನೋದು ಅವರ ಅಪೇಕ್ಷೆ. ಆ ಕೆಲಸವವನ್ನು ಒಟ್ಟಾಗಿ ಮಾಡ್ತೇವೆ ಎಂದರು.
ನಮ್ಮಲ್ಲಿ ಪರ್ಯಾಯ ನಾಯಕರಿಗೆ ಎರಡು ವರ್ಷ ನೀವೇ ಸಿಎಂ ಆಗಿ ಇರ್ತಿರಾ ಎನ್ನುವ ಪ್ರಶ್ನೆಗೆ ಸ್ವಲ್ಪ ಯೋಚಿಸಿ ಉತ್ತರ ನೀಡಿದ ಸಿಎಂ, ಇಲ್ಲಿ ತನಕ ಯಾವುದೆ ಗೊಂದಲ ಇಲ್ಲ. ರಾಷ್ಟ್ರೀಯ ನಾಯಕರು ನೀವೇ ಮುಖ್ಯಮಂತ್ರಿ ಆಗಿ ಮುಂದುವರಿದು ಪಕ್ಷ ಬಲಪಡಿಸಲು ಹೇಳಿದ್ದಾರೆ. ಯಾವ ಸಂದರ್ಭದಲ್ಲಿ ಏನ್ ಹೇಳ್ತಾರೆ ಆ ಪ್ರಕಾರ ನಡೆದುಕೊಳ್ಳಬೇಕಾಗಿರೋದು ನಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.