ಕಟೀಲ್‌ ಭವಿಷ್ಯ ಏನು? ವಿಜಯೇಂದ್ರ ಮಂತ್ರಿ ಆಗ್ತಾರಾ? ದಿಲ್ಲಿಯಲ್ಲಿ ಈ ಬಾರಿ ಬೊಮ್ಮಾಯಿ ಗಟ್ಟಿದನಿ

By Prashant Natu  |  First Published Apr 9, 2022, 11:46 AM IST

ಬಿಜೆಪಿಯಲ್ಲಿ ರಾಷ್ಟ್ರ ಇರಲಿ, ಮಂಡಲ ಇರಲಿ ಅಧ್ಯಕ್ಷ ಸ್ಥಾನದ ಅವಧಿ ಸರಿಯಾಗಿ ಮೂರು ವರ್ಷ. 2019 ಆಗಸ್ಟ್‌ನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹೀಗಾಗಿ ಈ ವರ್ಷದ ಆಗಸ್ಟ್‌ನಲ್ಲಿ ಕಟೀಲ್‌ ಅವಧಿ ಮುಕ್ತಾಯಗೊಳ್ಳುತ್ತದೆ. 


ಮೋದಿ ಕಾಲದಲ್ಲಿ ಯಾವುದೇ ರಾಜ್ಯದ ಬಿಜೆಪಿ ನಾಯಕರು ದಿಲ್ಲಿ ನಾಯಕರ ಎದುರು ಗಟ್ಟಿಧ್ವನಿಯಲ್ಲಿ ಮಾತನಾಡುವುದೇ ಅಪರೂಪ. ಆದರೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಈ ಬಾರಿ ದಿಲ್ಲಿಗೆ ಹೋದಾಗ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಶೆಖಾವತ್‌ ಎದುರು ನೀರಿನ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಗಟ್ಟಿದನಿಯಲ್ಲಿ ಹೇಳಿದ್ದಾರೆ.

‘ದಿಲ್ಲಿಯಲ್ಲೂ, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಆದರೆ ನೀವು ತಮಿಳುನಾಡು ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತೀರಿ. ಮೇಕೆದಾಟು ಬಗ್ಗೆ ಕಾವೇರಿ ಮ್ಯಾನೇಜ್ಮೆಂಟ್‌ ಬೋರ್ಡ್‌ನಲ್ಲಿ ನಮ್ಮ ಅರ್ಜಿ ವಿಲೇವಾರಿ ಕೂಡ ಮಾಡುತ್ತಿಲ್ಲ. ಹೀಗಾದರೆ ಹೇಗೆ? ರಾಜ್ಯದಲ್ಲಿ ನಾವು ಉತ್ತರ ಕೊಡಬೇಕಾಗುತ್ತದೆ’ ಎಂದಿದ್ದಾರೆ. ಆಗ ಶೆಖಾವತ್‌, ‘ಇಲ್ಲ, ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದಾಗ ಇನ್ನಷ್ಟುವ್ಯಗ್ರರಾದ ಬೊಮ್ಮಾಯಿ, ‘ಯಾವಾಗ ನಿರ್ಧಾರ ತೆಗೆದುಕೊಳ್ಳುವುದು ನೀವು? ತಮಿಳುನಾಡು ಅಕ್ರಮವಾಗಿ ನಿರ್ಮಾಣ ನಡೆಸಿದಾಗ ಸುಮ್ಮನಿರುತ್ತೀರಿ. ನಮ್ಮ ಪಾಲಿನ ನೀರು ಬಳಕೆಗೆ ಅನುಮತಿ ಕೊಡಲು ಹಿಂದೇಟು ಹಾಕುತ್ತಿದ್ದೀರಿ. ನಿರ್ವಹಣಾ ಮಂಡಳಿಯಲ್ಲಿ ನಿರ್ಧಾರ ತೆಗೆದುಕೊಳ್ಳಿ, ಮುಂದೆ ಕೋರ್ಚ್‌ ದಾರಿ ಇದ್ದೇ ಇದೆ’ ಎಂದು ಜೋರಾಗಿ ಹೇಳಿದ್ದಾರೆ.

Tap to resize

Latest Videos

1990 ರಲ್ಲಿ ಕಾಶ್ಮೀರದ ನೆಲದಿಂದ ಪಂಡಿತನ್ನು ಹೆದರಿಸಿ ಓಡಿಸಿದ ಘಟನೆಗೆ ಕಾರಣವೇನು?

ಇದಕ್ಕೆ ದನಿಗೂಡಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ‘ಮಹಾದಾಯಿ ಹೋರಾಟಗಾರರು ನಮ್ಮ ಮನೆ ಮುಂದೆ ಬಂದು ಕುಳಿತಿದ್ದರು. ಆದರೂ 2019ರಲ್ಲಿ ನಾವು ಗೆದ್ದು ಬಂದಿದ್ದೇವೆ. ರಾಜ್ಯದ ಯಾವುದೇ ನೀರಿನ ನಿರ್ಣಯ ಶೀಘ್ರಗತಿಯಲ್ಲಿ ತೆಗೆದುಕೊಳ್ಳಿ; ಚುನಾವಣೆ ಬರುತ್ತಿವೆ ವಿಪಕ್ಷಗಳಿಗೆ ಅವಕಾಶ ಕೊಡಬಾರದು’ ಎಂದರಂತೆ. ಉಳಿದ ರಾಜಕೀಯ ವಿಷಯಗಳು ಬಂದಾಗ ಸ್ವಲ್ಪ ಮೃದುವಾಗಿ ಮಾತನಾಡುವ ಬೊಮ್ಮಾಯಿ ಸಾಹೇಬರು ನೀರಿನ ವಿಷಯದಲ್ಲಿ ಮಾತ್ರ ಗಟ್ಟಿಯಾಗಿ ಮಾತನಾಡಿದ್ದು ಕೇಳಿ ಅವರ ಜೊತೆ ಹೋಗಿದ್ದ ಸಚಿವರು ಅಧಿಕಾರಿಗಳೇ ಚಕಿತರಾಗಿದ್ದಾರೆ.

ಹೈಕಮಾಂಡ್‌ನಲ್ಲಿ ದ್ವಂದ್ವ

ಯುಪಿ ಚುನಾವಣೆ ಬಳಿಕ ದಿಲ್ಲಿ ಬಿಜೆಪಿ ನಾಯಕರ ಗಮನ ಗುಜರಾತ್‌, ಕರ್ನಾಟಕ ಮತ್ತು ಹಿಮಾಚಲ ಮೇಲೇ ಇದೆ. ಅದಕ್ಕಾಗಿಯೇ ಅಮಿತ್‌ ಶಾ ಮತ್ತು ಜೆ ಪಿ.ನಡ್ಡಾ ಮೂರು ರಾಜ್ಯಗಳ ಬಿಜೆಪಿ ಸಂಘಟನೆ ಹಾಗೂ ಸರ್ಕಾರದ ವರ್ಚಸ್ಸು ವೃದ್ಧಿಗಾಗಿ ಸ್ವತಃ ಓಡಾಟ ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಪುನಾರಚನೆ ಮಾಡಬೇಕಾ ಅಥವಾ ಬೇಡವಾ ಎನ್ನುವ ಬಗ್ಗೆ ಇನ್ನೂ ಶಾ ಮತ್ತು ನಡ್ಡಾ ತೀರ್ಮಾನಿಸಿಲ್ಲ. ನಡ್ಡಾ ಅವರನ್ನು ಭೇಟಿ ಆದ ಬೊಮ್ಮಾಯಿ,

‘ಚುನಾವಣೆ ದೃಷ್ಟಿಯಿಂದ ಒಂದೆರಡು ಸಣ್ಣ ಬದಲಾವಣೆಗಳೊಡನೆ ಸಂಪುಟ ಪುನಾರಚನೆ ಮಾಡುವುದು ಸೂಕ್ತ’ ಎಂಬ ಪ್ರಸ್ತಾವನೆ ಇಟ್ಟಿದ್ದರು. ಆದರೆ ನಡ್ಡಾ, ‘ವಿಜಯನಗರದ ಕಾರ್ಯಕಾರಿಣಿಗೆ ಹೇಗೂ ಬರುತ್ತೇನೆ. ಅದಾದ ನಂತರ ಕುಳಿತು ನಿರ್ಧಾರ ಮಾಡೋಣ’ ಎಂದಿದ್ದಾರೆ. ದಿಲ್ಲಿ ಬಿಜೆಪಿ ಮೂಲಗಳ ಪ್ರಕಾರ, ಅಮಿತ್‌ ಶಾ ಮತ್ತು ನಡ್ಡಾ ಚುನಾವಣೆ ದೃಷ್ಟಿಯಿಂದ ಯಾವುದು ಸೂಕ್ತ ಎಂದು ಬಿ.ಎಲ್‌.ಸಂತೋಷ್‌, ಯಡಿಯೂರಪ್ಪ, ಪ್ರಹ್ಲಾದ್‌ ಜೋಶಿ ಮತ್ತು ಸ್ಥಳೀಯ ಆರ್‌ಎಸ್‌ಎಸ್‌ ಜೊತೆ ಚರ್ಚೆ ಮಾಡಿದ ನಂತರವೇ ಅಂತಿಮ ನಿಷ್ಕರ್ಷೆಗೆ ಬರಲಿದ್ದಾರೆ. ದಿಲ್ಲಿ ಮೂಲಗಳ ಪ್ರಕಾರ, ಸಂಪುಟದ ಅಂತಿಮ ನಿರ್ಣಯ ತೆಗೆದುಕೊಳ್ಳೋದು ಅಮಿತ್‌ ಶಾ ಅವರು.

ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ..?

ಕಟೀಲ್‌ ಭವಿಷ್ಯ ಏನು?

ಬಿಜೆಪಿಯಲ್ಲಿ ರಾಷ್ಟ್ರ ಇರಲಿ, ಮಂಡಲ ಇರಲಿ ಅಧ್ಯಕ್ಷ ಸ್ಥಾನದ ಅವಧಿ ಸರಿಯಾಗಿ ಮೂರು ವರ್ಷ. 2019 ಆಗಸ್ಟ್‌ನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಹೀಗಾಗಿ ಈ ವರ್ಷದ ಆಗಸ್ಟ್‌ನಲ್ಲಿ ಕಟೀಲ್‌ ಅವಧಿ ಮುಕ್ತಾಯಗೊಳ್ಳುತ್ತದೆ. ಈಗ ಚುನಾವಣೆ ಇರುವಾಗ ಹೊಸ ಅಧ್ಯಕ್ಷರನ್ನು ನೇಮಿಸಬೇಕೋ ಅಥವಾ ಇವರನ್ನೇ ಮುಂದುವರೆಸಬೇಕೋ ಎಂದು ಹೈಕಮಾಂಡ್‌ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಮೊದಲು ಬಿಜೆಪಿ ಅಧ್ಯಕ್ಷರು ಒಂದೇ ಅವಧಿಗೆ ಸಾರಥ್ಯ ವಹಿಸಲು ಸಾಧ್ಯವಿತ್ತು. ಆದರೆ ಗಡ್ಕರಿ ಅಧ್ಯಕ್ಷರಿದ್ದಾಗ ಬಿಜೆಪಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅಧ್ಯಕ್ಷರ ಅವಧಿ 2 ವರ್ಷಕ್ಕೆ ವಿಸ್ತರಿಸಿದೆ.

ಬೊಮ್ಮಾಯಿ ಮನಸ್ಸಿನಲ್ಲಿ ಒಕ್ಕಲಿಗ ಸಮುದಾಯದವರು ಅಧ್ಯಕ್ಷರಾಗಬೇಕೆಂಬ ಅಭಿಪ್ರಾಯವಿದೆ. ಒಕ್ಕಲಿಗರನ್ನು ಮಾಡುವುದಾದರೆ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಅಶ್ವಥ್‌ ನಾರಾಯಣ, ಹಿಂದುಳಿದ ವರ್ಗಕ್ಕೆ ಕೊಡುವುದಾದರೆ ಯುವ ಮಂತ್ರಿ ಸುನೀಲ್‌ ಕುಮಾರ್‌ ಹೆಸರು ಓಡುತ್ತಿವೆ. ಆದರೆ ಬಿಜೆಪಿಯಲ್ಲಿ ಸಂಘಟನೆಯ ಸಾರಥ್ಯ ವಹಿಸುವ ರಾಜ್ಯ ಅಧ್ಯಕ್ಷರನ್ನು ನೇಮಿಸುವಾಗ ಆರ್‌ಎಸ್‌ಎಸ್‌ ಮಾತಿಗೆ ಮಣೆ ಹಾಕುವ ಸಾಧ್ಯತೆ ಜಾಸ್ತಿ. ಗಮನಿಸಬೇಕಾದ ವಿಷಯ ಎಂದರೆ ಕಟೀಲ್‌ ಸಂಘದ ಪ್ರಮುಖರಾದ ಮುಕುಂದಜಿ, ಬಿ.ಎಲ….ಸಂತೋಷ್‌ ಮತ್ತು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ಗೆ ಪರಮಾಪ್ತರು. ಕಟೀಲ್‌ ಮುಂದುವರೆಸಬೇಕೋ ಬೇಡವೋ ಎಂಬ ತೀರ್ಮಾನ ತೆಗೆದುಕೊಂಡ ಮೇಲೆಯೇ ಉಳಿದದ್ದು ಮುನ್ನೆಲೆಗೆ ಬರಲಿದೆ.

ಅರುಣ್‌ ಸಿಂಗ್‌ ಮೇಲೆ ಗರಂ

ಪೂರ್ವ ತಯಾರಿ ಇಲ್ಲದ ನಾಯಕರ ಮೇಲೆ ಅಮಿತ್‌ ಶಾ ಗರಂ ಆಗುವುದು ಸಾಮಾನ್ಯ. ಆದರೆ, ಬಿಜೆಪಿ ರಾಜ್ಯ ಉಸ್ತುವಾರಿಯೇ ಅಮಿತ್‌ ಶಾ ಕೆಂಗಣ್ಣಿಗೆ ಗುರಿಯಾಗುವುದು ಅಪರೂಪ. ಕಳೆದ ವಾರ ಕೋರ್‌ ಕಮಿಟಿ ಸಭೆ ವೇಳೆ ಅಮಿತ್‌ ಶಾ ಅವರು, ಬೊಮ್ಮಾಯಿ ಮತ್ತು ಕಟೀಲ್‌ ಅವರಿಗೆ 2023ರ ಚುನಾವಣಾ ತಯಾರಿಯ ನೀಲನಕ್ಷೆ ಕೊಡಿ ಎಂದಾಗ ಇಬ್ಬರೂ ಮುಖಮುಖ ನೋಡಿಕೊಂಡರಂತೆ. ಆಗ ಅರುಣ್‌ ಸಿಂಗ್‌ರತ್ತ ತಿರುಗಿದ ಅಮಿತ್‌ ಶಾ, ‘ನೀವು ಕೊಡಿ’ ಎಂದಾಗ ಅವರು ಬೊಮ್ಮಾಯಿ ಕಡೆ ನೋಡಿದರಂತೆ. ಗರಂ ಆದ ಅಮಿತ್‌ ಶಾ, ‘ನೀವು ಕೋರ್‌ ಕಮಿಟಿ ಸಭೆ ಬಿಟ್ಟು ಎಷ್ಟುಬಾರಿ ರಾಜ್ಯ ಪ್ರವಾಸ ಮಾಡಿದ್ದೀರಿ? ಬೆಂಗಳೂರು ಬಿಟ್ಟು ಉಳಿದ ಯಾವ ಕೇಂದ್ರಕ್ಕೆ ಹೋಗಿ ಕಾರ್ಯಕರ್ತರ ಜೊತೆ ನೇರ ಮಾತನಾಡಿದ್ದೀರಿ?’ ಎಂದು ಸಿಡುಕಿದರಂತೆ.

ನಂತರ ಒಕ್ಕಲಿಗ ಭಾಗದ ಸ್ಥಿತಿಯೇನು ಎಂದು ಕೇಳಿದಾಗ ಸಿ.ಟಿ.ರವಿ, ‘ನಾನು, ಅಶೋಕ್‌, ಸದಾನಂದಗೌಡರು ಪ್ರವಾಸ ಮಾಡುತ್ತೇವೆ’ ಎಂದು ಹೇಳಿದರಂತೆ. ಇದಕ್ಕೂ ಅತೃಪ್ತಿ ತೋರಿದ ಅಮಿತ್‌ ಶಾ, ‘ಉದ್ದನೆಯ ಭಾಷಣ ಹೊಡೆಯಬೇಡಿ, ಕುಳಿತುಕೊಳ್ಳಿ’ ಎಂದರಂತೆ. ಸಿ.ಟಿ.ರವಿ ಹಲಾಲ… ಬಗ್ಗೆ ಏನೋ ಹೇಳಲು ಹೋದಾಗ ‘ಹಿಂದೂಗಳಲ್ಲಿ ಶೇ.30 ಮಾತ್ರ ಕಟ್ಟರ್‌ ಇರುತ್ತಾರೆ. ಉಳಿದ ಶೇ.70 ಹಿಂದೂಗಳನ್ನು ತಲುಪಲು ಬರೀ ಹಲಾಲ… ಪ್ರಯೋಜನ ಇಲ್ಲ, ಸಾಮಾನ್ಯರ ದೈನಂದಿನ ವಿಷಯಗಳ ಬಗ್ಗೆ ಮಾತಾಡಬೇಕು’ ಎಂದರಂತೆ. ಅಲ್ಲದೆ, ಏ.14ರೊಳಗೆ ಚುನಾವಣಾ ಬ್ಲೂ ಪ್ರಿಂಟ್‌ ತಯಾರು ಮಾಡಿ, ನಡ್ಡಾ ಅವರು ಬಂದಾಗ ಕೊಡಿ ಎಂದು ಬೊಮ್ಮಾಯಿ, ಕಟೀಲ್‌ ಮತ್ತು ಅರುಣ್‌ ಸಿಂಗ್‌ ಹೇಳಿ ಹೋಗಿದ್ದಾರೆ.

ಗಾಂಧಿಗಳೇ ಅಧಿಕಾದಲ್ಲಿದ್ದೆ ವೋಟು ಬೀಳೋದಿಲ್ಲ, ಗಾಂಧಿಗಳು ಅಧಿಕಾರ ಬಿಟ್ರೆ ಪಕ್ಷ ಉಳಿಯೋದಿಲ್ಲ..!

ಶೆಟ್ಟರ್‌ಗೆ ಅದೃಷ್ಟದ ನಿರೀಕ್ಷೆ

ಅಧಿಕಾರದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಆತ್ಮೀಯರಾಗಿದ್ದಾರೆ. 2 ತಿಂಗಳಿನಿಂದ ಶೆಟ್ಟರ್‌ ಸಾಹೇಬರು ಪ್ರತಿ ವಾರ ದಿಲ್ಲಿಗೆ ಹೋಗುತ್ತಿದ್ದಾರೆ. ಯಾವುದಾದರೂ ಅದೃಷ್ಟಒಲಿಯಬಹುದು ಎಂಬ ನಿರೀಕ್ಷೆಯಲ್ಲಿ ಶೆಟ್ಟರ್‌ ಇದ್ದಾರೆ. 1999ರಲ್ಲಿ ಯಡಿಯೂರಪ್ಪ ಶಿಕಾರಿಪುರದಲ್ಲಿ ಸೋತಾಗ ಶೆಟ್ರು ಅದೃಷ್ಟದಿಂದ ವಿರೋಧ ಪಕ್ಷದ ನಾಯಕರಾಗಿದ್ದರು. 2004ರಲ್ಲಿ ಅನಂತ್‌ ಕುಮಾರ್‌ರನ್ನು ಇಳಿಸಿದಾಗ ಅದೃಷ್ಟದಿಂದ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.

2012ರಲ್ಲಿ ಬಿಎಸ್‌ವೈಗೆ ಸದಾನಂದ ಗೌಡರು ಬೇಡ ಆದಾಗ ಅದೃಷ್ಟಬಲದಿಂದಲೇ ಮುಖ್ಯಮಂತ್ರಿ ಆಗಿದ್ದರು. ಆದರೆ, ಅಂಥ ಯಾವುದೇ ಸೂಚನೆಗಳಂತೂ ಸಿಗುತ್ತಿಲ್ಲ. ಅಂದ ಹಾಗೆ ಇಷ್ಟುದಿನ ದಿಲ್ಲಿಗೆ ಹೋದರೂ ಶೆಟ್ಟರ್‌ ಅವರಿಗೆ ಸಮಯ ಕೊಡದ ಅಮಿತ್‌ ಶಾ ಅವರು, ಬೊಮ್ಮಾಯಿ ದಿಲ್ಲಿಯಿಂದ ನಿರ್ಗಮಿಸಿದ ಬಳಿಕ ಕರೆದು ಮಾತನಾಡಿದ್ದಾರೆ. ಅಮಿತ್‌ ಭಾಯಿಗೆ ಶೆಟ್ಟರ್‌ ಧಾರವಾಡ ಪೇಡ ಕೂಡ ತಿನ್ನಿಸಿ ಬಂದಿದ್ದಾರೆ.

ವಿಜಯೇಂದ್ರ ಮಂತ್ರಿ ಆಗ್ತಾರಾ?

ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪನವರ ಮನಸ್ಸಿನಲ್ಲಿ ಇರುವುದು ಒಂದೇ ‘ಹೇಗಾದರೂ ಪುತ್ರ ವಿಜಯೇಂದ್ರಗೆ ಕ್ಯಾಬಿನೆಟ್‌ ಕೊಡಿ’ ಎಂದು. ಈ ಬಗ್ಗೆ ನನ್ನ ಮೇಲೆ ವಿಪರೀತ ಒತ್ತಡವಿದೆ ಎಂದು ಬೊಮ್ಮಾಯಿ ಅವರು, ಅಮಿತ್‌ ಶಾ ಮತ್ತು ನಡ್ಡಾ ಎದುರು ಹೇಳಿದಾಗಲೆಲ್ಲ ‘ಮೋದಿ ಸಾಹೇಬರು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ. ಸ್ವತಃ ವಿಜಯೇಂದ್ರ ಕೂಡ ದಿಲ್ಲಿಗೆ ಹೋಗಿ ನಡ್ಡಾ ಮತ್ತು ಅಮಿತ್‌ ಶಾರನ್ನು ಭೇಟಿಯಾಗಿ ಬಂದಿದ್ದಾರೆ. ಆರ್‌ಎಸ್‌ಎಸ್‌ ಮೂಲಗಳ ಪ್ರಕಾರ, 2023ರಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಲು ಮತ್ತು ಪಕ್ಷದ ಇನ್ನಷ್ಟುಜವಾಬ್ದಾರಿ ಕೊಡಲು ಸಂಘದ ಒಪ್ಪಿಗೆ ಇದೆ. ಆದರೆ ಮಂತ್ರಿ ಮಾಡಬೇಕೋ, ಬಿಡಬೇಕೋ ಎನ್ನುವ ನಿರ್ಣಯ ಅಂತಿಮವಾಗಿ ಪ್ರಧಾನಿ ಮೋದಿಯೇ ತೆಗೆದುಕೊಳ್ಳಬೇಕು. ಸಂಪುಟ ವಿಸ್ತರಣೆಯ ಪೂರ್ತಿ ಕುತೂಹಲ ಇರುವುದೇ ವಿಜಯೇಂದ್ರರ ಬಗೆಗಿನ ನಿರ್ಣಯದ ಕಾರಣದಿಂದ.

ಬೊಮ್ಮಾಯಿ ಸ್ಟೈಲ್‌ ಆಫ್‌ ಪಾಲಿಟಿಕ್ಸ್‌

ಫ್ರೆಂಚ್‌ ತತ್ವಜ್ಞಾನಿ ನಿಕೋಲೊ ಮ್ಯಾಕಿಯಾವೆಲಿ ಪ್ರಕಾರ ನಾಯಕರು ಪ್ರೀತಿ ಮತ್ತು ಹೆದರಿಕೆ ಎರಡೂ ಗಳಿಸಲು ಸಾಧ್ಯ ಆಗದಿದ್ದರೆ ಪ್ರೀತಿಗಿಂತ ಹೆದರಿಕೆ ಹುಟ್ಟಿಸಿಕೊಳ್ಳುವುದೇ ಲೇಸು ಎಂದು 16ನೇ ಶತಮಾನದಲ್ಲೇ ಬರೆದಿಟ್ಟಿದ್ದಾನೆ. ಆದರೆ ಬೊಮ್ಮಾಯಿ ಯೋಚಿಸುವ ಪರಿಯೇ ಬೇರೆ. ದಿಲ್ಲಿಯಲ್ಲಿದ್ದಾಗ ಕೆಲ ಬಿಜೆಪಿ ಸಂಸದರು ‘ನೀವು ಇನ್ನೂ ಗಟ್ಟಿನಿರ್ಣಯ ತಗೋಬೇಕು. ತುಂಬಾ ಮೃದು ಆಗಿದ್ರೆ ನಡೆಯೋಲ್ಲ’ ಎಂದೆಲ್ಲಾ ಹೇಳುತ್ತಿದ್ದಾಗ ಬೊಮ್ಮಾಯಿ, ‘ನೋಡಪ್ಪ ಅಧಿಕಾರ ಅಂದರೆ ಮುಳ್ಳಿಗೆ ಪಂಚೆ ಸಿಲುಕಿಕೊಂಡಂತೆ. ನೀವು ಬಲ ಇದೆ ಎಂದು ಜೋರಾಗಿ ಎಳೆದರೆ ಹರಿದು ಪಂಚೆ ಇಲ್ಲದೇ ಓಡಾಡಬೇಕಾಗುತ್ತದೆ. ಜಾಣತನ ಇರುವುದು ಹರಿಯಲು ಆಸ್ಪದ ಕೊಡದೆ ಮುಳ್ಳಿನಿಂದ ತೆಗೆಯುವುದರಲ್ಲಿದೆ’ ಎಂದು ಹೇಳಿದರಂತೆ. ರಾಜಕಾರಣದಲ್ಲಿ ಕೆಲಸ ಮಾಡುವ ಪರಿ ಪ್ರತಿಯೊಬ್ಬನದು ಭಿನ್ನ ಭಿನ್ನ ನೋಡಿ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್‌, ದೆಹಲಿಯಿಂದ ಕಂಡ ರಾಜಕಾರಣ

click me!