
ಹಾವೇರಿ (ಶಿಗ್ಗಾಂವಿ)(ಏ.20): ‘ನನ್ನನ್ನು ಬೆಳೆಸಿದವರು ನೀವು. ನನ್ನನ್ನು ಉಳಿಸಿಕೊಳ್ಳುವವರೂ ನೀವು. ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ನನ್ನ ಸಾವಾದರೆ ಶಿಗ್ಗಾಂವಿಯಲ್ಲೇ ಮಣ್ಣು ಮಾಡಬೇಕು. ಈ ಮೂಲಕ ನನ್ನ ಶಿಗ್ಗಾಂವಿಯ ಭೂಮಿತಾಯಿಯ ಮಣ್ಣಿನ ಋುಣ ತೀರಿಸುವಂತಾಗಲಿ...’ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೂ ಮುನ್ನ ಬುಧವಾರ ಸಮಾವೇಶವನ್ನುದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿದ ಭಾವುಕ ಮಾತುಗಳಿವು.
ಅದ್ಯಾವ ಜನ್ಮದ ಸಂಬಂಧವೋ, ಯಾವ ಋುಣಾನುಬಂಧವೋ ನೀವು 15 ವರ್ಷ ಸತತ ಬೆಂಬಲ ನೀಡಿದ್ದೀರಿ. ನಮ್ಮ-ನಿಮ್ಮ ನಡುವೆ ಯಾವುದೇ ಶಕ್ತಿ ಅಡ್ಡಿ ಬರುವುದಿಲ್ಲ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ತಲೆ ಬಾಗಿ, ನನ್ನ ಕೊನೇ ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.
ಮೇ 10ರ ವೇಳೆಗೆ ಬಿಜೆಪಿ 130 ಸ್ಥಾನ ದಾಟಲಿದೆ: ಸಿಎಂ ಬೊಮ್ಮಾಯಿ
ನಾನು ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುತ್ತೇನೆ, ದಾವಣಗೆರೆಗೆ ಹೋಗುತ್ತೇನೆ ಎಂದು ಹೇಳಿದರು. ಆದರೆ, ನಾನು ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ಕರ್ನಾಟಕ ಮಾತೆಗೆ, ಕನ್ನಡಿಗರಿಗೆ ಮತ್ತು ಈ ಕ್ಷೇತ್ರದ ಜನರಿಗೆ ನಾನು ಪ್ರಾಮಾಣಿಕ ಸೇವೆ ಮಾಡಿದ್ದೇನೆ ಎಂದರು.
ಸಮಸ್ಯೆಗಳ ಆಗರ: ಶಿಗ್ಗಾಂವಿ-ಸವಣೂರಿನ ಅಭಿವೃದ್ಧಿ ನಮ್ಮೆಲ್ಲರ ಕನಸಾಗಿತ್ತು. 2008ರಲ್ಲಿ ನಾನು ಬಂದಾಗ ಒಳ್ಳೆಯ ರಸ್ತೆ ಇರಲಿಲ್ಲ. ರಸ್ತೆ ಮಧ್ಯೆ ಹಳ್ಳಗಳಿದ್ದವು. ಕುಡಿಯಲು ನೀರಿರಲಿಲ್ಲ. ಕುಡಿಯುವ ನೀರಿಗಾಗಿ ಮಹಿಳೆಯರು ರಸ್ತೆಯಲ್ಲಿ ಕೊಡ ಹಿಡಿದು ಸಾಲು ಹಿಡಿದು ನಿಲ್ಲುತ್ತಿದ್ದರು. ಒಂದು ಒಳ್ಳೆಯ ಸರ್ಕಾರಿ ಕಚೇರಿ ಕಟ್ಟಡ ಇರಲಿಲ್ಲ. ಜನರ ಕಷ್ಟಕ್ಕೆ ಸ್ಪಂದನೆ ಇರಲಿಲ್ಲ. ಕೆರೆಗಳಿಗೆ ನೀರು ಇರಲಿಲ್ಲ. ಇದರ ಮಧ್ಯೆ ಪ್ರಾರಂಭವಾಗಿರುವ ನಮ್ಮ ಅಭಿವೃದ್ಧಿ ಪಯಣ ಇವತ್ತು ಎರಡು ಏತ ನೀರಾವರಿ ಮಾಡಿ 100ಕ್ಕಿಂತ ಹೆಚ್ಚು ಕೆರೆಗಳನ್ನು ತುಂಬಿಸಿರುವ ದಾಖಲೆ ಶಿಗ್ಗಾಂವಿ-ಸವಣೂರಿನಲ್ಲಿ ಆಗಿದೆ ಎಂದರು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಳ್ಳಿಯಿಂದ ಹೊಲಗಳಿಗೆ ಹೋಗುವ 2 ಸಾವಿರ ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣ ಮಾಡಿದ್ದೇವೆ. 15 ವರ್ಷಗಳಲ್ಲಿ ಸುಮಾರು 10 ಸಾವಿರ ಬಡವರಿಗೆ ಮನೆ ನಿರ್ಮಾಣ ಮಾಡಿದ್ದೇವೆ. ಮಳೆಯಿಂದ ಹಾನಿಗೊಳಗಾದ ಜನರಿಗೆ 12 ಸಾವಿರ ಮನೆಗಳನ್ನು ಕಟ್ಟಿರುವ ದಾಖಲೆ ಮಾಡಿದ್ದೇವೆ. ಬಡತನ ಶಾಪವಲ್ಲ. ಹುಟ್ಟುವಾಗ ಬಡತನ ಇರಬಹುದು, ಸಾಯುವವರೆಗೂ ಬಡತನದಲ್ಲಿಯೇ ಇರಬೇಕೆಂದೇನೂ ಇಲ್ಲ. ದುಡಿಮೆಯಿಂದ ಪ್ರಾಮಾಣಿಕವಾಗಿ ಮುಂದೆ ಬರುವ ಅವಕಾಶ ಮಾಡಿಕೊಟ್ಟಿದ್ದೇನೆ. ಜನರು ಸ್ವಾಭಿಮಾನದ ಬದುಕಿನಿಂದ ಬಾಳುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿ 125 ಸ್ಥಾನ ಗೆಲುವು:
ಜೆ.ಪಿ.ನಡ್ಡಾ ನೇತೃತ್ವದಲ್ಲಿ ಪಕ್ಷ ಕರ್ನಾಟಕದಲ್ಲಿ ಅತ್ಯಂತ ಸಂಘಟಿತವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 125ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆದು, ಮತ್ತೊಮ್ಮೆ ಕನ್ನಡ ನಾಡಿನ ಸೇವೆ ಮಾಡಲು ಬಿಜೆಪಿಗೆ ಜನ ಆಶೀರ್ವಾದ ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ನಾನು ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ವಿದ್ಯಾರ್ಥಿಗಳಿಗೆ ಏನೆಲ್ಲ ಕೆಲಸ ಮಾಡಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ಜೀವನದ ಕೊನೇ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಬ್ಯಾಡಗಿ ಕಾಂಗ್ರೆಸ್: ಸಂಧಾನ ಯಶಸ್ವಿ, ಬಂಡಾಯ ಕೈಬಿಟ್ಟ ಎಸ್‌ಆರ್ ಪಾಟೀಲ್
ಕ್ಷೇತ್ರದಲ್ಲಿ ಆಯುರ್ವೇದ ಆಸ್ಪತ್ರೆ, ಶಿಗ್ಗಾಂವಿ, ಸವಣೂರಿನಲ್ಲಿ 250 ಹಾಸಿಗೆ ಆಸ್ಪತ್ರೆ, ಜಿಟಿಟಿಸಿ ಮತ್ತು ಎಂಜಿನಿಯರಿಂಗ್ ಕಾಲೇಜು, 10 ಸಾವಿರ ಜನರಿಗೆ ಉದ್ಯೋಗ ಕೊಡುವ ಟೆಕ್ಸ್‌ಟೈಲ್ ಪಾರ್ಕ್ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಬಂಕಾಪುರ ತಾಲೂಕು ಆಗಬೇಕೆಂದು ಜನರ ಬೇಡಿಕೆ ಇದೆ. ನಾನು ಇವತ್ತು ಅದಕ್ಕೆ ಎಲ್ಲ ಅನುಮತಿ ಕೊಟ್ಟು ಆಜ್ಞೆ ಮಾಡಿದ್ದೇನೆ. ಚುನಾವಣೆ ನೀತಿ ಸಂಹಿತೆ ಅದಕ್ಕೆ ಅಡಚಣೆಯಾಗಿದೆ. ಬರುವ ದಿನಗಳಲ್ಲಿ ಬಂಕಾಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.