ಜೇನು ಹುಳು ಕಚ್ಚಿದರೂ ಸರಿ, ಅದರ ಸಿಹಿ ನಿಮಗೆ ಸಿಗಲೆಂದು ಒಳಮೀಸಲಾತಿ ತಂದೆ: ಸಿಎಂ ಬೊಮ್ಮಾಯಿ

By Girish Goudar  |  First Published Apr 20, 2023, 8:08 PM IST

ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಎಲ್ಲಿದೆ ಸಾಮಾಜಿಕ ನ್ಯಾಯ ? ನೀವು ಯಾರಿಗೆ ಕೊಟ್ಟಿದ್ದೀರಿ ಸಮಾಜಿಕ ನ್ಯಾಯ? ಎಂದು  ಸಿದ್ರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ. 


ವರದಿ: ಶರಣಯ್ಯ ಹಿರೇಮಠ, ಕಲಬುರಗಿ

ಕಲಬುರಗಿ(ಏ.20):  ಹೌದು ! ನಾನು ಜೇನುಗೂಡಿಗೆ ಕೈ ಹಾಕಿದ್ದೇನೆ. ಜೇನು ಹುಳು ನನಗೆ ಕಚ್ಚಿದರೂ ಪರವಾಗಿಲ್ಲ. ಜೇನಿನ ರುಚಿ ಬಡ ಸಮುದಾಯಗಳಿಗೆ ಉಣಬಡಿಸುವ ಉದ್ದೇಶದಿಂದ ನಾನು ಜೇನು ಗೂಡಿಗೆ ಕೈ ಹಾಕಿದ್ದೇನೆ. ಎಸ್ಸಿ/ ಎಸ್ಟಿ ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ಅನುಷ್ಠಾನದ ಬಗ್ಗೆ ಹೀಗೆಂದು ತೀಕ್ಷ್ಣವಾಗಿ ಹೇಳಿದವರು ಸಿಎಂ ಬಸವರಾಜ ಬೊಮ್ಮಾಯಿ. 

Tap to resize

Latest Videos

undefined

ಇಂದು(ಗುರುವಾರ) ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಪಾಲ್ಗೊಂಡು ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಎಲ್ಲಿದೆ ಸಾಮಾಜಿಕ ನ್ಯಾಯ ? ನೀವು ಯಾರಿಗೆ ಕೊಟ್ಟಿದ್ದೀರಿ ಸಮಾಜಿಕ ನ್ಯಾಯ ? ಎಂದು ಅವರು ಮಾಜಿ ಸಿಎಂ ಸಿದ್ರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. 

ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ ‘ರಾಜಕೀಯ’ಕ್ಕೆ ಎಂಟ್ರಿ ಕೊಟ್ಟ ಸುಭಾಶ್ಚಂದ್ರ ರಾಠೋಡ

ಪರವೋ ವಿರೋಧವೋ ಹೇಳಿ

ಕಾಂಗ್ರೆಸ್ ನವರು ಒಳಮೀಸಲಾತಿಯ ಪರ ಇದ್ದಾರೋ ಅಥವಾ ವಿರೋಧವಾಗಿದ್ದಾರೋ ಮೊದಲು ಹೇಳಲಿ. ಕಾಂಗ್ರೆಸ್ ಗೆ ಮೊದಲಿನಿಂದಲೂ ದಲಿತರ ಮತ ಬೇಕು ಆದ್ರೆ ದಲಿತರ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೌದು ಜೇನುಗೂಡಿಗೆ ಕೈ ಹಾಕಿದ್ದೇನೆ

ಒಳಮೀಸಲಾತಿ ಜಾರಿಗೆ ತಂದಾಗ ಮತ್ತು ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಮಾಡಿದಾಗ ನೀವು ಜೇನುಗೂಡಿಗೆ ಹೈ ಹಾಕುತ್ತಿದ್ದಿರಿ ಎಂದು ಬಹಳಷ್ಟು ಜನ ಎಚ್ಚರಿಸಿದ್ದರು. ಹೌದು , ನಾನು ಕೈ ಹಾಕಿದ್ದು ಜೇನುಗೂಡಿಗೆ. ಜೇನು ಹುಳುಗಳು ನನಗೆ ಕಚ್ಚಿದರೂ ಪರವಾಗಿಲ್ಲ, ಆ ಜೇನಿನ ರುಚಿ ತುಳಿತಕ್ಕೊಳಗಾದ ಬಡ ದಲಿತ ಮತ್ತು ಹಿಂದುಳಿದವರಿಗೆ ಸಿಗುವಂತಾಗಲಿ ಎಂದು ಒಳಮೀಸಲಾತಿ ಜಾರಿಗೆ ತಂದಿದ್ದೇನೆ. ಎಸ್ಸಿ ಎಸ್ಸಿಗಳಿಗೆ ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ಕ್ರಮ ಕೈಗೊಂಡಿದ್ದೇನೆ ಎಂದರು. 

ಹಿಂದೆ ಮಾಡಿದ ತಪ್ಪು ಮಾಡಬೇಡಿ

ಕಾಂಗ್ರೆಸ್ ಗೆ ದಲಿತ ಹಿಂದುಳಿದವರ ಮತ ಬೇಕು. ಆ ಸಮುದಾಯಗಳ ಅಭಿವೃದ್ಧಿ ಬೇಕಿಲ್ಲ. ಹಾಗಾಗಿ ದಲಿತ ಹಿಂದುಳಿದವರು ಈ ಹಿಂದೆ ಮಾಡಿದ ತಪ್ಪು ಮಾಡಬೇಡಿ. ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಗೆ ಮತ ಹಾಕಬೇಡಿ. ಬಿಜೆಪಿಗೆ ಈ ಬಾರಿ ನಿಮ್ಮ ಮತ ಕೊಟ್ಟು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು. 

ಕಾಂಗ್ರೆಸ್ ಸುಳ್ಳು ಭರವಸೆ ಕೊಟ್ಟು ಎಂದಿನಂತೆ ಜನರನ್ನು ಮರಳು ಮಾಡುತ್ತಿದೆ. ನಮ್ಮ ಪಕ್ಷ ನಾವು ಮಾಡಿರುವ ಕೆಲಸದ ಅದರ ರಿಪೋರ್ಟ್ ಕಾರ್ಡ್‌ನ್ನ ನಿಮ್ಮ ಮುಂದೆ ಇಟ್ಟು ಮತ ಕೇಳುತ್ತಿದ್ದೇವೆ. ನಾವು ಭರವಸೆ ಕೊಡುತ್ತಿಲ್ಲ. ಕೆಲಸ ಮಾಡಿ ನಿಮ್ಮ ಮುಂದೆ ನಿಂತಿದ್ದೇನೆ. ಆಶೀರ್ವಾದ ಮಾಡಿ ಎಂದರು. 

ಅಫಜಲಪುರದ ಹುಲಿ ಮಾಲೀಕಯ್ಯ ಗುತ್ತೇದಾರ

ಅಫಜಲಪುರದಲ್ಲಿ ಈ ಬಾರಿ ಬಿಜೆಪಿಯ ಗಾಳಿ ಬಿಸುತ್ತಿದೆ. ಕಳೆದ ಬಾರಿ ಅಫಜಲಪುರ ಹುಲಿ ಮಾಲೀಕಯ್ಯ ಗುತ್ತೇದಾರರನ್ನ ಕರ್ನಾಟಕದ್ಯಾಂತ ಸುತ್ತಿಸಿದ್ದೇವು. ಹೀಗಾಗಿ ಕಳೆದ ಬಾರಿ ಮಾಲೀಕಯ್ಯ ಗುತ್ತೇದಾರ್ ಸೋತಿದ್ದರು.‌ ಈ ಬಾರಿ ಅಫಜಲಪುರ ಹುಲಿ ದಾಖಲೆ ಮತಗಳಿಂದ ಗೆಲುವು ದಾಖಲಿಸಲಿದೆ ಎಂದು ಸಿಎಂ ಬೊಮ್ಮಾಯಿ, ತಮ್ಮ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. 

ದೊಡ್ಡ ನಾಯಕರಿದ್ದರೂ ಅಭಿವೃದ್ಧಿ ಶೂನ್ಯ

ಐದು ವರ್ಷ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದೊಡ್ಡ ದೊಡ್ಡ ನಾಯಕರು ಈ ಭಾಗದಲ್ಲಿದ್ದರು. ಕಾಂಗ್ರೆಸ್ ನಲ್ಲಿ ದೊಡ್ಡ ದೊಡ್ಡ ನಾಯಕರಿದ್ದರೂ ಈ ಭಾಗ ಅಭಿವೃದ್ಧಿ ಶೂನ್ಯವಾಗಿದೆ ಎಂದು ಅವರು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.

ಅಫಜಲಪುರದಲ್ಲಿ ಸಂಧಾನ ವಿಫಲ: ಸಹೋದರರ ಕಾಳಗ, ನಾನೇ ಗೆಲ್ಲಲಿ ಆಶೀರ್ವದಿಸೆಂದು ಅಣ್ಣನ ಕಾಲಿಗೆ ಬಿದ್ದ ತಮ್ಮ!

ಗುತ್ತೇದಾರ ಭಾಷಣ

ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ, ನಮ್ಮ ಅಫಜಲಪುರದಲ್ಲಿ ತುಕಡೆ ತುಕಡೆ ಗ್ಯಾಂಗ್ ಇವೆ. ಆ ತುಕಡೆ ಗ್ಯಾಂಗ್ ನಮ್ಮ ಮನೆ ಒಡೆಯುವ ಕೆಲಸ ಮಾಡುತ್ತಿದೆ. ನಮ್ಮ ಮನೆ ಒಡೆಯೋದಷ್ಟೇ ಅಲ್ಲ, ತಾಲೂಕು ಒಡೆಯುವ ಕೆಲಸವೂ ಸಹ ಈ ತುಕಡೆ ಗ್ಯಾಂಗ್ ಮಾಡುತ್ತಿದೆ. ಈ ತುಕಡೆ ಗ್ಯಾಂಗ್ ನಿಂದ ಅಫಜಲಪುರ ತಾಲೂಕು ಒಡೆಯಲು ಸಾಧ್ಯವಿಲ್ಲ.‌ ಈ ಬಾರಿಯೂ ಅಫಜಲಪುರ ಜನ ನನಗೆ ಆಶೀರ್ವಾದ ಮಾಡಿ ಗೆಲ್ಲಿಸುತ್ತಿರೆಂಬ ನಂಬಿಕೆ ಇದೆ ಎಂದರು.  ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಪಕ್ಷದ ಮುಖಂಡರು ಸಮಾವೇಶದ ವೇದಿಕೆ ಮೇಲಿದ್ದರು. ಸಹಸ್ರಾರು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!