ಮೋದಿ ಸಲಹೆಯಂತೆ ದಲಿತ ಮೀಸಲು ಏರಿಕೆ: ಸಿಎಂ ಬೊಮ್ಮಾಯಿ

By Govindaraj SFirst Published Nov 21, 2022, 10:19 AM IST
Highlights

ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ಆದರೆ, ದಲಿತರು, ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಈವರೆಗೆ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ನಿಂದ ಮೀಸಲಾತಿ ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಳ್ಳಾರಿ (ನ.21): ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ಆದರೆ, ದಲಿತರು, ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಈವರೆಗೆ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ನಿಂದ ಮೀಸಲಾತಿ ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ನಡೆದ ಬಿಜೆಪಿ ಎಸ್ಟಿ ನವಶಕ್ತಿ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದರು. ಅಹಿಂದ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ಕಳೆದ 60 ವರ್ಷಗಳಲ್ಲಿ ಅಹಿಂದ ಸಮಾಜಕ್ಕೆ ಮಾಡಿದ್ದೇನು? ತಾನು ಬಹಳ ಬುದ್ಧಿವಂತ ಎಂದು ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ, ದಲಿತರು, ಶೋಷಿತ ಸಮುದಾಯಕ್ಕೆ ಮಾಡಿರುವುದೇನು? ತಮ್ಮದೇ ಹಾಲುಮತ ಸಮಾಜಕ್ಕೆ ನೀಡಿದ ಕೊಡುಗೆ ಏನು? ಎಂದು ಕೇಳಿದರು.

ಮಂಗಳೂರು ಸ್ಫೋಟ ಪ್ರಕರಣದ ಜಾಲ ಭೇದಿಸುತ್ತೇವೆ: ಸಿಎಂ ಬೊಮ್ಮಾಯಿ

ಬಳ್ಳಾರಿಯಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದ ಸೋನಿಯಾ ಗಾಂಧಿ ಅವರು ಈ ಜಿಲ್ಲೆಗೆ ಮೋಸ ಮಾಡಿದ್ದಾರೆ. ಸೋನಿಯಾ ಪ್ಯಾಕೇಜ್‌ನಲ್ಲಿ .3 ಸಾವಿರ ಕೋಟಿ ಘೋಷಣೆಯಾಯಿತು. ಆದರೆ, .3 ಸಹ ಬರಲಿಲ್ಲ. ಕನಿಷ್ಠ ಪಕ್ಷ ಬಳ್ಳಾರಿ ಜನರಿಗೆ ಕೃತಜ್ಞತೆ ಸಲ್ಲಿಸಲು ಸೋನಿಯಾ ಗಾಂಧಿಯವರು ಬಳ್ಳಾರಿಗೆ ಬರಲಿಲ್ಲ ಎಂದು ಟೀಕಿಸಿದರು. ಬಿಜೆಪಿಯನ್ನು ಕಾಂಗ್ರೆಸ್‌ ನಾಯಕರು ಸುನಾಮಿ ಎಂದು ಕರೆದಿದ್ದಾರೆ. ಬಿಜೆಪಿ ಕಾರ್ಯಕರ್ತರ ಸುನಾಮಿಯಲ್ಲಿ ಕಾಂಗ್ರೆಸ್‌ ಬರುವ ಚುನಾವಣೆಯಲ್ಲಿ ಧೂಳಿಪಟವಾಗುವುದು ಸತ್ಯಎಂದು ಭವಿಷ್ಯ ನುಡಿದರು.

ಶ್ರೀರಾಮುಲು ಸಿಎಂ ಆಗೋ ಕಾಲ ಬರುತ್ತೆ: ಶ್ರೀರಾಮುಲು ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಎಸ್ಟಿಗಳಿಗೆ ಹೆಚ್ಚಿಸಲಾದ ಮೀಸಲಾತಿಯೇ ಉತ್ತರವಾಗಿದೆ. ಶ್ರೀರಾಮುಲು ಅವರು ಎಸ್ಟಿಸಮಾಜದ ಹೃದಯ ಸಾಮ್ರಾಟ ಆಗಿದ್ದಾರೆ. ಶ್ರೀರಾಮುಲು ರಕ್ತದ ಬಗ್ಗೆ ಮಾತನಾಡುವವರಿಗೆ ಈಗಲಾದರೂ ಗೊತ್ತಾಯಿತೇ ಶ್ರೀರಾಮುಲು ರಕ್ತ ಎಷ್ಟುಪವಿತ್ರ ಎಂಬುದು?. ಶ್ರೀರಾಮುಲು ಮುಖ್ಯಮಂತ್ರಿ ಆಗೋ ಕಾಲ ಬಂದೇ ಬರುತ್ತೆ ಎಂದರು.

ಬಿಲ್ಲಿನ ಮೂಲಕ ಬಾಣ ಹೂಡಿ ಸಮಾವೇಶಕ್ಕೆ ಚಾಲನೆ: ಬಿಜೆಪಿ ಪರಿಶಿಷ್ಟಪಂಗಡಗಳ ನವಶಕ್ತಿ ಸಮಾವೇಶಕ್ಕೆ ಬಿಲ್ಲಿಗೆ ಬಾಣ ಹೂಡುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಬುಡಕಟ್ಟು ಜನಗಳ ಪ್ರತೀಕವಾಗಿರುವ ಬಿಲ್ಲನ್ನು ಎದೆಗೇರಿಸಿಕೊಂಡು ಬಾಣ ಹೂಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಾವೇಶಕ್ಕೆ ಚಾಲನೆ ನೀಡಿದರು.

1100 ಬಾಣಸಿಗರಿಂದ ಭರ್ಜರಿ ಭೋಜನ: ಸಮಾವೇಶಕ್ಕೆ ಆಗಮಿಸಿದ್ದವರಿಗೆ ಬೆಳಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟ ವಿತರಿಸಲಾಯಿತು. ಉಪಾಹಾರಕ್ಕೆ ಕೇಸರಿಬಾತ್‌, ಉಪ್ಪಿಟ್ಟು, ಅವಲಕ್ಕಿ ವಗ್ಗರಣೆ, ಮಧ್ಯಾಹ್ನ ಊಟಕ್ಕೆ ಹುಗ್ಗಿ, ಪಲಾವ್‌, ಮೊಸರನ್ನ ವಿತರಿಸಲಾಯಿತು. ಜನರು ಮುಗಿಬಿದ್ದು ಊಟದ ಪೊಟ್ಟಣಗಳನ್ನು ಪಡೆದರು. ವೇದಿಕೆ ಬಳಿ 250ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಊಟ ತಯಾರಿಯಲ್ಲಿ 1,100 ಬಾಣಸಿಗರು ತೊಡಗಿಸಿಕೊಂಡಿದ್ದರು.

ಬಸವನಗುಡಿಗೆ ಪಾರಂಪರಿಕ ತಾಣ ಮಾನ್ಯತೆ: ಸಿಎಂ ಬೊಮ್ಮಾಯಿ

ಗಮನ ಸೆಳೆದ ಕಲಾ ತಂಡ: ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ಕಲಾತಂಡಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. ಸಮಾವೇಶಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳ ಮೆರವಣಿಗೆ ನಡೆಯಿತು. ಕಲಾ ತಂಡಗಳ ಜತೆ ಜನರು ಹೆಜ್ಜೆ ಹಾಕಿದರು. ಮೈಸೂರಿನ ಬುಡಕಟ್ಟು ನೃತ್ಯ ತಂಡದ ಸದಸ್ಯರು ಹೆಚ್ಚು ಗಮನ ಸೆಳೆದರು. ಸಮಾವೇಶಕ್ಕೆ ಆಗಮಿಸಿದ್ದ ಕಲಾ ತಂಡಗಳ ಉಸ್ತುವಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್‌ ರಂಗಣ್ಣನವರ ವಹಿಸಿಕೊಂಡಿದ್ದರು. ಪಕ್ಷದ ಕಾರ್ಯಕ್ರಮದಲ್ಲಿ ಅಧಿಕಾರಿಯೊಬ್ಬರು ಕಲಾ ತಂಡಗಳ ಉಸ್ತುವಾರಿ ವಹಿಸಿ ಕರೆದುಕೊಂಡು ಬರುತ್ತಿರುವುದು ಗಮನ ಸೆಳೆಯಿತು.

click me!