* ಉದಾಸಿ ಸಾವಿನ ಕುರಿತ ಡಿಕೆಶಿ ಹೇಳಿಕೆಯಿಂದ ಏನನ್ನೂ ಸಾಧಿಸಲಾಗದು
* ಒತ್ತಾಯದಿಂದ ಬಿಎಸ್‌ವೈ ಕೆಳಿಗಿಳಿಸಿದರೆಂಬುದು ಬಾಲಿಶ ಹೇಳಿಕೆ
* ಮಠಗಳಿಗೆ ತೆರಳಿ ಶ್ರೀಗಳ ಆಶೀರ್ವಾದ ಪಡೆದ ಬಸವರಾಜ ಬೊಮ್ಮಾಯಿ
ಹಾವೇರಿ(ಅ.21): ಕಾಂಗ್ರೆಸ್‌ಗೆ(Congress) ಚುನಾವಣಾ ಪ್ರಚಾರದಲ್ಲಿ ಬೇರೆ ವಿಷಯಗಳಿಲ್ಲ. ಅಲ್ಪಸಂಖ್ಯಾತರ ಓಲೈಕೆಗಾಗಿ ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ಜತೆಗೆ, ಮಾಜಿ ಸಚಿವ ದಿ. ಉದಾಸಿ ಅವರಿಗೆ ಸಚಿವ ಸ್ಥಾನ ನೀಡದ್ದರಿಂದ ಅವರು ಕೊರಗಿ ನಿಧನರಾದರು ಎಂಬ ಹೇಳಿಕೆಯಿಂದ ಕಾಂಗ್ರೆಸ್ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಿರುದ್ಧ ಕಿಡಿಕಾರಿದ್ದಾರೆ.
ಉಪ ಚುನಾವಣೆ(Byelection) ಪ್ರಚಾರದ(Campaign) ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್‌ಗೆ(Hanagal) ಆಗಮಿಸಿರುವ ಅವರು ಬುಧವಾರ ರಾತ್ರಿ ತಾಲೂಕಿನ ನರೇಗಲ್ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ವಿರಕ್ತಮಠಕ್ಕೆ ಭೇಟಿ ನೀಡಿ, ಮಠದ ಗದ್ದುಗೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆರೆಸ್ಸೆಸ್(RSS) ಬಗ್ಗೆ ಟೀಕೆ ಮಾಡಿದರೆ ಅಲ್ಪಸಂಖ್ಯಾತರ(Minorities) ಓಲೈಕೆ ಆಗುತ್ತದೆ ಎಂದು ತಿಳಿದು ಕಾಂಗ್ರೆಸ್‌ನವರು ಆ ರೀತಿ ಮಾತನಾಡುತ್ತಿದ್ದಾರೆ. ವಿನಾ ಕಾರಣ ಆರೆಸ್ಸೆಸ್ ಅನ್ನು ಪ್ರಚಾರದ ವೇಳೆ ಎಳೆದು ತರುತ್ತಿದ್ದಾರೆ. ಆದರೆ ಇದರಲ್ಲಿ ಕಾಂಗ್ರೆಸ್ಸಿಗರಿಗೆ ಯಶಸ್ಸು ಸಿಗುವುದಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಅಲ್ಲ ಎಂದರೆ ಸರ್ಟಿಫಿಕೆಟ್ ತೋರಿಸಿ: ರವಿಕುಮಾರ
ಉದಾಸಿ ಕುರಿತ ಮಾತಿಗೆ ಕಿಡಿ:
ಸಚಿವ ಸ್ಥಾನ ನೀಡಲಾಗಿಲ್ಲ ಎಂಬ ಕಾರಣಕ್ಕಾಗಿ ಸಿ.ಎಂ.ಉದಾಸಿ(CM Udasi) ಕೊರಗಿ ನಿಧನರಾದರು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂಥ ಹೇಳಿಕೆಯಿಂದ ಕಾಂಗ್ರೆಸ್ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಉದಾಸಿ ಅವರಿಗೆ ಪಕ್ಷ ನೀಡಿದ ಗೌರವ, ಅವರು ಪಕ್ಷಕ್ಕೆ ನೀಡಿದ ಕೊಡುಗೆ ಎಲ್ಲವೂ ಜನರಿಗೆ ಗೊತ್ತಿದೆ. ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಸ್ಥಿತಿ ಬಗ್ಗೆ ನೋಡಿಕೊಳ್ಳಲಿ. ನಾವು ಏನು ಮಾಡಿದ್ದೇವೆಂಬುದು ಜನರಿಗೆ ಗೊತ್ತಿದೆ. ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನರ ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ಇದೇ ವೇಳೆ, ಯಡಿಯೂರಪ್ಪ(BS Yediyurappa) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಒತ್ತಾಯಪೂರ್ವಕವಾಗಿ ಕೆಳಗಿಳಿಸಲಾಯಿತು. ಆ ಸಮಯಕ್ಕಾಗಿ ಬೊಮ್ಮಾಯಿ ಕಾದು ಕುಳಿತಿದ್ದರು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಇಂಥ ಬಾಲಿಶ, ಸಣ್ಣ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ ಎಂದರು.
ಬಹಿರಂಗ ಪ್ರಚಾರ ರದ್ದು:
ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಜೆಯೇ ಬೆಂಗಳೂರಿಂದ(Bengaluru) ಹಾನಗಲ್ ಕ್ಷೇತ್ರಕ್ಕೆ ಆಗಮಿಸಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಬೇಕಿತ್ತು. ಆದರೆ, ಬೆಂಗಳೂರಿನಲ್ಲಿ ಬಿಡುವಿಲ್ಲದ ಕಾರ್ಯಕ್ರಮದಿಂದಾಗಿ ಹಾನಗಲ್‌ಗೆ ಆಗಮಿಸುವುದು ವಿಳಂಬವಾದ ಕಾರಣ ಅನಿವಾರ್ಯವಾಗಿ ಬುಧವಾರದ ಬಹಿರಂಗ ಪ್ರಚಾರವನ್ನು ರದ್ದುಗೊಳಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಮಠಗಳಿಗೆ ತೆರಳಿದ ಬೊಮ್ಮಾಯಿ ಶ್ರೀಗಳ ಆಶೀರ್ವಾದ ಪಡೆದರು. ನರೇಗಲ್ ಬಳಿಕ ಮಾರನಬೀಡ ಗ್ರಾಮದ ಮಠಕ್ಕೆ ಭೇಟಿ ನೀಡಿ ಶ್ರೀಗಳ ಜತೆ ಕೆಲಕಾಲ ಮಾತುಕತೆ ನಡೆಸಿದರು.