ಸಂಪುಟ ಸರ್ಕಸ್‌: ಸೋಮವಾರ ಸಿಎಂ ಬೊಮ್ಮಾಯಿ ದಿಲ್ಲಿಗೆ

By Govindaraj SFirst Published Dec 25, 2022, 6:24 AM IST
Highlights

ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಹಾಗೂ ರಮೇಶ್‌ ಜಾರಕಿಹೊಳಿ ಅವರ ಒತ್ತಡದ ಪರಿಣಾಮ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ. 

ಬೆಂಗಳೂರು/ಹಾವೇರಿ (ಡಿ.25): ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಹಾಗೂ ರಮೇಶ್‌ ಜಾರಕಿಹೊಳಿ ಅವರ ಒತ್ತಡದ ಪರಿಣಾಮ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದ ನಡುವೆಯೇ ಸೋಮವಾರದ ಕಲಾಪ ಬಳಿಕ ದೆಹಲಿಗೆ ಪ್ರಯಾಣಿಸಲಿರುವ ಮುಖ್ಯಮಂತ್ರಿಗಳು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೂ ಸಮಾಲೋಚನೆ ನಡೆಸುವ ಸಂಭವವಿದೆ.

ಆದರೆ, ಈ ಭೇಟಿಯ ವೇಳೆಯೇ ಸಂಪುಟ ವಿಸ್ತರಣೆ ಆಗಲಿದೆಯೇ ಅಥವಾ ಮತ್ತೊಂದು ಸುತ್ತಿನ ಸಭೆ ನಡೆಯಲಿದೆಯೇ ಎಂಬುದು ಕುತೂಹಲಕರವಾಗಿದೆ. ಕಳೆದ ವಾರ ಆರಂಭವಾದ ಬೆಳಗಾವಿ ಅಧಿವೇಶನಕ್ಕೆ ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಅವರಿಬ್ಬರೂ ಗೈರು ಹಾಜರಾಗಿದ್ದರು. ಈ ಪೈಕಿ ಈಶ್ವರಪ್ಪ ಅವರು ಸಚಿವ ಸ್ಥಾನ ಸಿಗದೇ ಇರುವುದರಿಂದ ಬೇಸತ್ತು ಅಧಿವೇಶನಕ್ಕೆ ಹೋಗುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಶ್ವರಪ್ಪ ಹಾಗೂ ರಮೇಶ್‌ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು. 

ಈಗ ಒಕ್ಕಲಿಗರ ಮೀಸಲು ಏರಿಕೆಗೆ ಹೆಚ್ಚಿದ ಒತ್ತಡ: ಸಿಎಂ ಭೇಟಿ ಮಾಡಿದ ಸಚಿವ ಅಶೋಕ್‌ ನೇತೃತ್ವದ ನಿಯೋಗ

ಇದೇ ವೇಳೆ ಬೊಮ್ಮಾಯಿ ಅವರು ಉಭಯ ನಾಯಕರ ಸಮ್ಮುಖದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ಸೋಮವಾರ ಸಾಧ್ಯವಾದರೆ ಸಂಪುಟ ವಿಸ್ತರಣೆಯ ಬಗ್ಗೆ ಆಕಾಂಕ್ಷಿಗಳ ಪಟ್ಟಿಯೊಂದಿಗೆ ಬನ್ನಿ ಎಂಬ ಮಾತು ಹೇಳಿದ್ದರು. ಬೊಮ್ಮಾಯಿ ಅವರ ಭರವಸೆ ಪರಿಣಾಮ ಈಶ್ವರಪ್ಪ ಮತ್ತು ಜಾರಕಿಹೊಳಿ ಅವರಿಬ್ಬರೂ ಅಧಿವೇಶನದ ಕಲಾಪಕ್ಕೆ ಹಾಜರಾದರು. ಇದೀಗ ತಾವು ನೀಡಿದ ಭರವಸೆಯಂತೆ ಬೊಮ್ಮಾಯಿ ಅವರು ಸೋಮವಾರ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಶನಿವಾರ ಶಿಗ್ಗಾಂವಿಯಲ್ಲಿ ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ, ಯೋಜನೆಗಳು ಸರಿ ದಾರಿಯಲ್ಲಿ ಸಾಗುತ್ತಿವೆ. ದೆಹಲಿ ಭೇಟಿ ವೇಳೆ ಬಿಜೆಪಿ ಘಟಕದ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಖಂಡಿತವಾಗಿ ಈ ವೇಳೆ ರಾಜಕೀಯ ವಿಚಾರವೂ ಚರ್ಚೆ ಆಗಲಿದೆ. ಚುನಾವಣಾ ತಯಾರಿ ಕೂಡ ಚರ್ಚೆಗೆ ಬರಲಿದೆ ಎಂದು ಹೇಳಿದರು.

click me!