* 47 ಅಧ್ಯಕ್ಷರ ಕೈಬಿಟ್ಟ ಸಮಿತಿ
* ಹೊಸಬರಿಗೆ ಅವಕಾಶ
* ಕೋರ್ ಕಮಿಟಿಯಲ್ಲಿ ತೀರ್ಮಾನ ಆಗಿತ್ತು ಎಂದ ಸಿಎಂ ಬೊಮ್ಮಾಯಿ
ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಜು.12): ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ನೇಮಕವಾಗಿದ್ದ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಆಗಬೇಕು ಅನ್ನೋದು ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಆಗಿತ್ತು. ಆದ್ರೆ ಅಂದು ನಿರ್ಧಾರ ಆಗಿದ್ದರೂ ಇಲ್ಲಿಯ ತನಕ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡೋಕೆ ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ್ರು. ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೂ ನಿಗಮ ಮಂಡಳಿ ಬದಲಾವಣೆ ಇಂದಲ್ಲ ನಾಳೆ, ಇಂದಲ್ಲ ನಾಳೆ ಎನ್ನುವಂತೆ ಆಗಿತ್ತು. ಆದ್ರೆ ಅಂತಿಮವಾಗಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿ ನಿರ್ಧಾರ ಮಾಡಿದ ಮೇಲೂ ಒಂದು ವರ್ಷ ಬಳಿಕ ಈಗ ಹೊಸದಾಗಿ ಅಧ್ಯಕ್ಷರ ಮೇಲೆ ಬದಲಾವಣೆ ಮಾಡಲು ಸಿಎಂ ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ. ಇಂದು(ಮಂಗಳವಾರ) ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎರಡು ವರ್ಷ ಅವಧಿ ಪೂರೈಸಿದವರಿಗೆ ಕೊಕ್? ಶಾಸಕರು ಸೇಫ್?
ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ನಿಗಮ ಮಂಡಳಿಗೆ ಆಯ್ಕೆ ಆದಾಗ ಪಕ್ಷದಲ್ಲಿ ಒಂದಿಷ್ಟು ಗೊಂದಲ ಆಗಿತ್ತು. ಪಕ್ಷದ ಹಳೆಯ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿಲ್ಲ. ಎಲ್ಲ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ವಿಜಯೇಂದ್ರ ಫಾಲೋವರ್‌ಗೆ ಹೆಚ್ಚಿನ ಅವಕಾಶ ಸಿಕ್ಕಿದೆ ಎಂಬ ಆರೋಪ ಪಕ್ಷದ ವಲಯದಲ್ಲಿ ಜೋರಾಗಿ ನಡೆದಿತ್ತು. ಪರಿಣಾಣಮ ಕೋರ್ ಕಮಿಟಿ ಸಭೆಯಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ್ ಮತ್ತು ಸಂಸದ ಡಿವಿ ಸದಾನಂದ ಗೌಡ ಈ ಬಗ್ಗೆ ದನಿ ಎತ್ತಿದ್ರು. ನಿಗಮ ಮಂಡಳಿಯ ಅಧ್ಯಕ್ಷರ ಬದಲಾವಣೆ ಆಗಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದು ಬಿಎಸ್ ಯಡಿಯೂರಪ್ಪ ಕೂಡ ಬದಲಾವಣೆಗೆ ಒಪ್ಪಿಗೆ ನೀಡಿದ್ರು. ಆದ್ರೆ ಇಲ್ಲಿ ತನಕ ಬದಲಾವಣೆ ಆಗಿರಲಿಲ್ಲ. ಈಗ ಮುಹೂರ್ತ ಕೂಡಿಬಂದಿದೆ. ಆದ್ರೆ ನಿಗಮ ಮಂಡಳಿಯಲ್ಲಿ ಶಾಸಕರು ಕೂಡ ಅಧ್ಯಕ್ಷ ಆಗಿದ್ದಾರೆ. ಶಾಸಕರಿಗೆ ನೀಡಲಾಗಿರುವ ಅಧ್ಯಕ್ಷಗಿರಿಯನ್ನು ಬದಲಾವಣೆಗಳನ್ನು ಮಾಡಿಲ್ಲ ಎನ್ನುವ ಮಾಹಿತಿ ಇದೆ.
Karnataka Politics: ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಬಗ್ಗೆ ಮಹತ್ವದ ಸಭೆ
ಶಾಸಕರ ಬದಲಾವಣೆ ಯಾಕಿಲ್ಲ?
ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗದ ಬಹುತೇಕ ಶಾಸಕರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿದೆ. ಈಗ ಚುನಾವಣೆ ಹತ್ತಿರದಲ್ಲಿ ಇದೆ. ಈ ಸಮಯದಲ್ಲಿ ಶಾಸಕರಿಗೆ ಅಧ್ಯಕ್ಷ ಹುದ್ದೆಯಿಂದ ಕೋಕ್ ನೀಡಿದ್ರೆ, ಶಾಸಕರು ಅಸಮಾಧಾನಗೊಳ್ಳುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಕ್ಯಾಬಿನೆಟ್ ವಿಸ್ತರಣೆಗೆ ಕಾದವರಿಗೆ ನಿರಾಸೆ ಆಗಿದೆ. ಅತ್ತ ಸಂಪುಟ ವಿಸ್ತರಣೆಯೂ ಆಗದೆ, ಇತ್ತ ಅಧ್ಯಕ್ಷ ಸ್ಥಾನ ಕಳೆದುಕೊಂಡರೆ ಪಕ್ಷದಲ್ಲಿ ಅಸಮಾಧಾನ ತೀವ್ರ ಆಗಬಹುದು. ಚುನಾವಣೆ ಸಮಯದಲ್ಲಿ ನಾಜೂಕಾಗಿ ನಿರ್ಧಾರ ಕೈಗೊಂಡಿರುವ ಪಕ್ಷ ಶಾಸಕರನ್ನು ಅಧ್ಯಕ್ಷ ಪೋಸ್ಟ್ ನಿಂದ ತೆಗೆದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಂದು ವಾರದ ಹಿಂದೆ ಸಿಎಂ ಕೈ ಸೇರಿದ್ದ ಪಟ್ಟಿ
ಹಿರಿಯ ಸಚಿವ ಆರ್. ಅಶೋಕ್, ಮಾಜಿ ಸಚಿವ ಲಕ್ಷ್ಮಣ ಸವದಿ ಪಾರ್ಟಿಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಒಳಗೊಂಡ ಮೂವರ ಸಮಿತಿಯನ್ನು ನಿಗಮ ಮಂಡಳಿ ಆಯ್ಕೆ ಪ್ರಕ್ರಿಯೆಗೆ ರಚಿಸಲಾಗಿತ್ತು. ಕಳೆದ ವಾರವೇ ಸಿಎಂ ಬೊಮ್ಮಾಯಿಗೆ ಪಟ್ಟಿ ಸಲ್ಲಿಸಿತ್ತಾದರೂ, ಸಿಎಂ ಬೊಮ್ಮಾಯಿ ನಿನ್ನೆ ಅಂತಿಮವಾಗಿ ಬೊಮ್ಮಾಯಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಪಟ್ಟಿ ವಿಳಂಬಕ್ಕೆ ಕಾರಣ ಏನು?
ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಒಂದು ವರ್ಷದ ಹಿಂದೆಯೇ ತೀರ್ಮಾನ ಆಗಿತ್ತಾದರೂ, ರಾಜ್ಯದಲ್ಲಿ ಎದುರಾದ ಕೆಲವು ಬೈ ಎಲೆಕ್ಷನ್, ಪರಿಷತ್ ಚುನಾವಣೆ ಹಾಗೂ ಪಕ್ಷದೊಳಗಿದ್ದ ಅನ್ಯ ರಾಜಕೀಯ ಕಾರಣಕ್ಕೆ ಹೊಸ ನೇಮಕಾತಿಗೆ ಅಡ್ಡಿಯಾಗಿತ್ತು. ಅದರಲ್ಲೂ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಕೂಡಲೇ, ಹೊಸ ಅಧ್ಯಕ್ಷರ ನೇಮಕ ಮಾಡಿದರೆ, ರಾಜಕೀಯವಾಗಿ ಬೇರೆ ಸಂದೇಶ ಹೋಗಲಿದೆ ಎನ್ನುವ ಆತಂಕವೂ ರಾಜ್ಯ ಬಿಜೆಪಿಗೆ ಇತ್ತು ಎನ್ನಲಾಗಿದೆ. ಜೊತೆಗೆ ಕೆಲವರ ಬದಲಾವಣೆಗೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಆರಂಭದಲ್ಲಿ ಒಪ್ಪಿಗೆ ನೀಡಿರಲಿಲ್ಲ ಎನ್ನುತ್ತವೆ ಬಿಜೆಪಿ ಮೂಲಗಳು. ಅಂತಿಮವಾಗಿ ಬದಲಾವಣೆಗೆ ಈಗ ಕಾಲ ಕೂಡಿಬಂದಿದೆ.
BJP Politics: ಕತ್ತಿ ಮನೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಹೊರಗಿಟ್ಟು ಸಭೆ..!
ಕೋರ್ ಕಮಿಟಿಯಲ್ಲಿ ತೀರ್ಮಾನ ಆಗಿತ್ತು ಎಂದ ಸಿಎಂ ಬೊಮ್ಮಾಯಿ
ನಿಗಮ ಮಂಡಳಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಕೋರ್ ಕಮಿಟಿಯಲ್ಲಿ ಈ ಹಿಂದೆ ಚರ್ಚೆ ಆಗಿತ್ತು ಎಂದು ಸ್ವತಃ ಸಿಎಂ ಬೊಮ್ಮಾಯಿ ಮೀಡಿಯಾಗೆ ಹೇಳಿಕೆ ನೀಡಿದ್ದಾರೆ. ಆರು ತಿಂಗಳ ಹಿಂದೆಯೇ ಅಧ್ಯಕ್ಷರ ಬದಲಾವಣೆಗೆ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದ ಬೊಮ್ಮಾಯಿ, ಒಂದುವರೆ ವರ್ಷ ಪೂರೈಸಿರುವ ಅಧ್ಯಕ್ಷರಗಳು ರಾಜೀನಾಮೆ ಸೂಚನೆ ನೀಡಿದ್ದೇವೆ ಎಂದರು. ಒಂದುವರೆ ವರ್ಷ ಅಧಿಕಾರ ಪೂರೈಸಿರುವವರ ಪಟ್ಟಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಅದರ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.
47 ಅಧ್ಯಕ್ಷರ ಕೈಬಿಟ್ಟ ಸಮಿತಿ
ಮೂಲಗಳ ಮಾಹಿತಿ ಪ್ರಕಾರ ಒಟ್ಟು 47 ನಿಗಮಗಳ ಅಧ್ಯಕ್ಷರ, ನಿರ್ದೇಶಕರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.