ಹುಬ್ಬಳ್ಳಿ ಧಾರವಾಡವನ್ನು ಮೆಗಾಸಿಟಿ ಮಾಡುತ್ತೇವೆ - ಸಿಎಂ ಬೊಮ್ಮಾಯಿ

By Sathish Kumar KH  |  First Published May 3, 2023, 11:06 PM IST

ಹುಬ್ಬಳ್ಳಿ ಧಾರವಾಡವನ್ನು ಮೆಗಾ‌ಸಿಟಿ ಆಗಿ ಪರಿವರ್ತನೆ ಮಾಡುತ್ತೇವೆ. ಹುಬ್ಬಳ್ಳಿ ಪೂರ್ವಕ್ಕೆ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಪಾರ್ಕ್ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಹುಬ್ಬಳ್ಳಿ (ಮೇ 3): ಹುಬ್ಬಳ್ಳಿ ಧಾರವಾಡವನ್ನು ಮೆಗಾ‌ಸಿಟಿ ಆಗಿ ಪರಿವರ್ತನೆ ಮಾಡುತ್ತೇವೆ. ಹುಬ್ಬಳ್ಳಿ ಪೂರ್ವಕ್ಕೆ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಪಾರ್ಕ್ ಮಾಡುವ ಮುಖಾಂತರ ಈ ಭಾಗದ ಚಿತ್ರಣ ಬದಲು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಭಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಅಭ್ಯರ್ಥಿ ಡಾ. ಕ್ರಾಂತಿಕಿರಣ್ ಪರವಾಗಿ ಬುಧವಾರ ರೋಡ್ ಶೋ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಾನು ಮಂಗಳವಾರ ಪೇಟೆಯ ಪಕ್ಕದ ಓಣಿಯಲ್ಲಿ ಹುಟ್ಟಿ ಇದೇ ಓಣಿಗಳಲ್ಲಿ ಆಡುತ್ತಾ ನನ್ನ ಬಾಲ್ಯವನ್ನು ಕಳೆದಿದ್ದೇನೆ. ಇದು ನನಗೆ ಭಾವನಾತ್ಮಕ ಸಂಬಂಧ ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆ ಇಲ್ಲಿಗೆ ತಲುಪಿಲ್ಲ. ಈ ಭಾಗಕ್ಕೆ ಸಿಗಬೇಕಿದ್ದ ನ್ಯಾಯ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಇಲ್ಲಿ ಅಭಿವೃದ್ಧಿ ಮಾಡಿಲ್ಲ. ಅವರಿಗೆ ಕೇವಲ ಸಮಾಜ ಒಡೆದು, ಸಮಾಜವನ್ನು ಓಲೈಸಿ ಅಧಿಕಾರಕ್ಕೆ ಬರುವುದು ಮಾತ್ರ ಗೊತ್ತು. ನಿಮ್ಮ ಓಟು ಬೇಡ ಎನ್ನುವ ವರ್ತನೆ ಈ ಭಾಗದ ಶಾಸಕರದ್ದಾಗಿದೆ. ಅವರಿಗೆ ನಿಮ್ಮ ಓಟಿನ ಕಿಮ್ಮತ್ತು ತೋರಿಸಿ. ಬಿಜೆಪಿ ಗೆ ಸಂಪೂರ್ಣ ಬಹುಮತ ಬರಬೇಕಾದ್ರೆ ಈ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

Tap to resize

Latest Videos

ಕಾಂಗ್ರೆಸ್ ನಾಯಕರದ್ದು ಒಡೆದು ಆಳುವ ನೀತಿ: ಕಾಂಗ್ರೆಸ್ ನವರು ಸ್ವಾತಂತ್ರ್ಯ ಬಂದ ನಂತರ ಈ ದೇಶವನ್ನು ಒಡೆದರು. ಆ ಐತಿಹಾಸಿಕ ತಪ್ಪಿನಿಂದ ಈ ದೇಶದ ನಾಗರೀಕರು ಅಭಿವೃದ್ಧಿ ವಂಚಿತರಾಗಿ ಇಂದಿಗೂ ಅಶಾಂತಿಯನ್ನು ಅನುಭವಿಸುವಂತಾಗಿದೆ. ಕಾಂಗ್ರೆಸ್ ಬ್ರಿಟಿಷರ ವಂಶಾವಳಿ ಪಕ್ಷ. ಬ್ರಿಟಿಷರ ಒಡೆದು ಆಳುವ ನೀತಿಯಿಂದ ದೀನ ದಲಿತರು, ಹಿಂದುಳಿದವರನ್ನು, ಅಲ್ಪ ಸಂಖ್ಯಾತರನ್ನು ಮುಖ್ಯವಾಹಿನಿಗೆ ಬರಲು ಬಿಡಲಿಲ್ಲ. ಕಾಂಗ್ರೆಸ್ ಗೆ ಅವರೆಲ್ಲರೂ ಕೇವಲ ಓಟ್ ಬ್ಯಾಂಕ್ ಅಷ್ಟೇ. ಕಾಂಗ್ರೆಸ್ ನವರಿಗೆ ಮೋದಿಯವರು ಮುಂದೊಂದು ದಿನ ಪ್ರಧಾನಿ ಆಗುತ್ತಾರೆ ಅನ್ನುವುದು ಗೊತ್ತಿರಲಿಲ್ಲ. ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿ ಆದ ನಂತರ ಇಡೀ ಭಾರತದ ಭವಿಷ್ಯವನ್ನು ಸರಿದಾರಿಗೆ ತರುತ್ತಿರುವುದರಿಂದ ಕಾಂಗ್ರೆಸ್ ಅವರು ಹತಾಶರಾಗಿದ್ದಾರೆ. ಅವರನ್ನು ವಿಷ ಸರ್ಪ ಎಂದು ಕರೆಯುತ್ತಾರೆ. ಖರ್ಗೆ ಅವರ ಮಗ ಮೋದಿ ಅವರನ್ನು ನಾಲಾಯಕ್ ಅಂತಾರೆ. ಮೇ 13 ರಂದು ಯಾರು ನಾಲಾಯಕ್ ಅನ್ನೋದು ಗೊತ್ತಾಗುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದರು

ನರೇಂದ್ರ ಮೋದಿ ವಿಷ ನುಂಗುವ ನೀಲಕಂಠ: ನರೇಂದ್ರ ಮೋದಿಯವರು ಸಮಾಜದ ಎಲ್ಲ ದುಷ್ಟರನ್ನು ಸಂಹಾರ ಮಾಡಿ ವಿಷವನ್ನು ಕುಡಿದು ಸಮಾಜಕ್ಕೆ ಅಮೃತ ಕೊಟ್ಟಿರುವ ನಾಯಕ. ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ. ಅವರು 53 ಸಾವಿರ ಕೋಟಿ ಮೌಲ್ಯದ ವಕ್ಪ್ ಆಸ್ತಿಯನ್ನು ಕರ್ನಾಟಕದಲ್ಲಿ ಕಬಳಿಸಿದ್ದಾರೆ. ಅದರಲ್ಲಿ ಮಹಾನ್ ನಾಯಕ ಖರ್ಗೆಯವರ ಹೆಸರೂ ಇದೆ. ಕಾಂಗ್ರೆಸ್ ನವರು ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಸಹಿಸಲು ಸಾಧ್ಯವಿಲ್ಲ. ಭಜರಂಗದಳ ನಿಷೇಧ ಮಾಡಲು ಕೇಂದ್ರಕ್ಕೆ ಮಾತ್ರ ಅಧಿಕಾರ ಇದೆ. ಓಟ್ ಗಾಗಿ ಇವರು ಸುಳ್ಳು ಭರವಸೆ ನೀಡುತ್ತಾರೆ. ಇದನ್ನು ಕರ್ನಾಟಕದ ಜನತೆ ಕ್ಷಮಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದ ಸರ್ವ ರೋಗಕ್ಕೂ ಅಭಿವೃದ್ಧಿಯೇ ಮದ್ದು: ಈ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧ ಆಗುವ ಅವಕಾಶ ಇದೆ. ಇಲ್ಲಿ ಮೂಲಭೂತ ಸೌಕರ್ಯ, ಶಾಲೆಗಳು, ಆಸ್ಪತ್ರೆ, ಹಾಗೂ ಈ ಭಾಗಕ್ಕೆ ಔದ್ಯೋಗಿಕ ನಗರ ಕೊಡುವುದು ನಮ್ಮ ಗುರಿ. ಈ ಜಿಲ್ಲೆಯನ್ನು ಮೆಗಾಸಿಟಿ ಮಾಡಿ, ಇಂಡಸ್ಟ್ರಿಯಲ್ ಪಾರ್ಕ್ ಪ್ರಾರಂಭ ಮಾಡುತ್ತೇವೆ. ಹುಬ್ಬಳ್ಳಿ ಪಶ್ಚಿಮದ ರೀತಿ ಈ ಕ್ಷೇತ್ರ ಯಾಕೆ ಅಭಿವೃದ್ಧಿ ಆಗಿಲ್ಲ. ಈ ಕ್ಷೇತ್ರದಲ್ಲಿ ಮೂಲಭೂತ ಅಭಿವೃದ್ಧಿ ಆಗಬೇಕಿದೆ. ಇದಕ್ಕೆ ರಾಜಕೀಯ ಬದ್ಧತೆ ಅಗತ್ಯ ಇದೆ. ಡಾ. ಕ್ರಾಂತಿ ಕಿರಣ್ ಅವರು ಬಹಳ ಪ್ರಬುದ್ಧ ನಾಯಕರು. ಬಡವರ ಬಗ್ಗೆ ಕಳಕಳಿ ಇರುವಂತಹ ಡಾಕ್ಟರ್.  ಈ ಕ್ಷೇತ್ರದ ಅಭಿವೃದ್ಧಿ ಗೆ ಹಿಡಿದಿರುವ ರೋಗವನ್ನು ವಾಸಿ ಮಾಡಲು ಡಾಕ್ಟರ್ ಅವರನ್ನು ನಿಲ್ಲಿಸಿದ್ದೇವೆ. ಅವರನ್ನು ಗೆಲ್ಲಿಸಿದರೆ ಅಭಿವೃದ್ಧಿಯ ರೋಗಕ್ಕೆ ಮದ್ದು ನೀಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

click me!