ವಿರೋಧಿಗಳೇನು ಹುಲಿಯಲ್ಲ, ಕರಡಿಯಲ್ಲ, ಎದುರು ನಿಂತರೆ ಓಡಿ ಹೋಗ್ತಾರೆ: ರಮೇಶ ಜಾರಕಿಹೊಳಿ

By Kannadaprabha News  |  First Published May 3, 2023, 11:02 PM IST

ಯಾವುದೇ ಹೆದರಿಕೆ ಬೆದರಿಕೆಗೆ ನಮ್ಮ ಕಾರ್ಯಕರ್ತರು ಅಂಜುವ ಅಗತ್ಯವಿಲ್ಲ. ನಾನು ಮಧ್ಯರಾತ್ರಿ ಕರೆದರೂ ನಿಮ್ಮ ರಕ್ಷಣೆಗೆ ಬರುತ್ತೇನೆ. ಎಕ್ಸ್‌ವೈಝೆಡ್‌ ನಂತೆ ನಾನು ಎಂದಿಗೂ ನಮ್ಮ ಸಂಬಂಧಿಕರ ಮಾತುಗಳನ್ನು ಕೇಳಿ ರಾಜಕೀಯ ಮಾಡಿಲ್ಲ. ಸಂಬಂಧಿಕರ ಮಾತು ಕೇಳಿ ರಾಜಕೀಯ ಮಾಡಿದರೆ ಬೇಗ ಮಾಜಿ ಆಗುವ ಪ್ರಸಂಗ ಬರುತ್ತದೆ: ರಮೇಶ ಜಾರಕಿಹೊಳಿ 


ಅಥಣಿ(ಮೇ.03): ಬಿಜೆಪಿ ಸೇರ್ಪಡೆಯಾಗಿರುವ ವಿವಿಧ ಸಮುದಾಯದ ಮುಖಂಡರು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಯಾರಿಗೂ ಹೆದರುವ ಅಗತ್ಯವಿಲ್ಲ. ವಿರೋಧಿಗಳೇನು ಹುಲಿಯಲ್ಲ, ಕರಡಿಯಲ್ಲ. ಎದುರು ನಿಂತರೆ ಓಡಿ ಹೋಗುತ್ತಾರೆ. ಈ ಚುನಾವಣೆಯನ್ನು ನಾವೆಲ್ಲರೂ ಕಾನೂನು ಚೌಕಟ್ಟಿನಲ್ಲಿ ಮಾಡೋಣ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡ ದಲಿತ ಮುಖಂಡ ಗೌತಮ ಪಾರಟಜಪೆ ಹಾಗೂ ನ್ಯಾಯವಾದಿ ಸುನೀಲ ಸಂಕ ಮತ್ತು ಬೆಂಬಲಿಗರನ್ನು ಸ್ವಾಗತಿಸಿಕೊಂಡು ಮಾತನಾಡಿದ ಅವರು, ವಿರೋಧಿಗಳ ವೈಯಕ್ತಿಕ ಟೀಕೆ ಬೇಡ, ಹಿಂದಿನ ಅನೇಕ ಸಭೆಗಳಲ್ಲಿ ನಾವು ಆವೇಶದಲ್ಲಿ ಏನೇನೋ ಮಾತನಾಡಿದ್ದೇವೆ. ಅದಕ್ಕೆ ಅವರು ಮಾತನಾಡಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರಾದ ಬಿ.ಎಸ್‌.ಯಡಿಯೂರಪ್ಪನವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಶಾಂತಿಯುತವಾಗಿ ಚುನಾವಣೆ ಮಾಡೋಣ. ಬಿಜೆಪಿಗೆ ಅನೇಕ ಸಮುದಾಯದ ಮುಖಂಡರು, ಕಾಂಗ್ರೆಸ್‌ ಮುಖಂಡರು ಸ್ವಯಂ ಪ್ರೇರಣೆಯಿಂದ ಬಿಜೆಪಿಗೆ ಬರುತ್ತಿದ್ದಾರೆ. ಅಥಣಿ ಮತಕ್ಷೇತ್ರದಲ್ಲಿ ಮಹೇಶ್‌ ಕುಮಟಳ್ಳಿ ಅವರನ್ನು ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ತಕ್ಕ ಪಾಠ ಕಲಿಸೋಣ ಎಂದರು.

Tap to resize

Latest Videos

ದೇಶದಲ್ಲಿ ಕಾಂಗ್ರೆಸ್‌ ಇಲ್ಲದಂತೆ ಮಾಡುವ ಶಕ್ತಿ ಮೋದಿಗಿದೆ: ಸಚಿವ ರಾಮದಾಸ್‌ ಅಠವಳೆ

ಎಲ್ಲ ಜಾತಿ ಜನಾಂಗವನ್ನು ಪ್ರೀತಿಸುವ ರಾಜಕೀಯ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ. ಪಕ್ಷದ ನಾಯಕರು ಮತ್ತು ಆರ್‌ಎಸ್‌ಎಸ್‌ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸಿ ಇಂದು ದೇಶದ ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಭಾರತೀಯ ಜನತಾ ಪಕ್ಷ. ಇಲ್ಲಿ ಸಾಮಾನ್ಯ ವ್ಯಕ್ತಿಯು ಕೂಡ ನಿಷ್ಠೆಯಿಂದ ದುಡಿದರೇ ಉನ್ನತ ಸ್ಥಾನಕ್ಕೂ ಹೋಗಬಹುದು. ಚಹಾ ಮಾರುವ ವ್ಯಕ್ತಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಹಣ್ಣು ಮಾರುತ್ತಿದ್ದ ಬಿ.ಎಸ್‌.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ ಎಂದರು.

ಇಂದು ಭಾರತೀಯ ಜನತಾ ಪಕ್ಷಕ್ಕೆ ದಲಿತ ಮುಖಂಡರು ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಇನ್ನಷ್ಟುಬಲಬಂದಂತಾಗಿದೆ. ರಾಜ್ಯದಲ್ಲಿಯೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ಸಮುದಾಯವೇ ದಲಿತ ಸಮುದಾಯವಾಗಿದೆ. ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ನಮಗೆ ಅವಕಾಶಗಳು ದೊರಕುತ್ತಿಲ್ಲ. ದಲಿತರು ಒಗ್ಗಟ್ಟಾಗಿದ್ದರೇ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಮ್ಮ ನಮ್ಮಲ್ಲಿಯೇ ಎಡ, ಬಲ ಎಂಬ ಭೇದ ಭಾವ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಮಾತನಾಡಿ, ಅಥಣಿ ಮತಕ್ಷೇತ್ರದ ಆಡಳಿತದಲ್ಲಿ ರಮೇಶ ಜಾರಕಿಹೊಳಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ವಿಶೇಷವಾಗಿ ಅಮ್ಮಾಜೇಶ್ವರಿ ಯಾತ ನೀರಾವರಿ ಯೋಜನೆಯ ಅನುಷ್ಠಾನ ವಿಚಾರದಲ್ಲಿ ನನಗೆ ಸಹಾಯ ಮಾಡಿದ್ದಾರೆ. ಅಥಣಿ ಮತಕ್ಷೇತ್ರದಲ್ಲಿ 2800 ಕೋಟಿ ರೂಪಾಯಿ ಅನುದಾನವನ್ನು ತರುವ ಮೂಲಕ ಅನಿಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಅಭಿವೃದ್ಧಿ ಕೆಲಸಗಳೇ ಇಂದು ನನಗೆ ಶ್ರೀರಕ್ಷೆ ಯಾಗಿದೆ. ಇನ್ನುಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮತ್ತು ನನ್ನ ಕನಸಿನ ಅಥಣಿ ಅಭಿವೃದ್ಧಿಗಾಗಿ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಥಣಿ ಮತಕ್ಷೇತ್ರದ ಪ್ರಭಾರಿ ವಿಜಯಕುಮಾರ ಕಡಿಗನೂರ, ಅಥಣಿ ಬಿಜೆಪಿ ಮಂಡಲ ಅಧ್ಯಕ್ಷ ಡಾ.ರವಿ ಸಂಕ, ಮುಖಂಡರಾದ ನಿಂಗಪ್ಪ ನಂದೇಶ್ವರ, ಪ್ರಭಾಕರ ಚವ್ಹಾಣ, ಸಿದ್ದಪ್ಪ ಮುದುಕಣ್ಣವರ, ಮಾರುತಿ ಮೋಹಿತೆ, ಶಶಿಕಾಂತ ಸಾಳವೆ, ಅನಿಲ ಸೌದಾಗರ, ಅಶೋಕ ದಾನಗೌಡರ, ಸಿದ್ದು ಹಂಡಿಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸವದಿಯನ್ನು ಎಕ್ಸ್‌ವೈಝೆಡ್‌ ಎಂದು ಸಂಬೋಧಿಸಿದ ರಮೇಶ!

ಎಕ್ಸ್‌ವೈಝೆಡ್‌ ತಮ್ಮ ಸಂಬಂಧಿಕರ ಜೊತೆ ಚುನಾವಣೆ ಮಾಡುತ್ತಿದ್ದಾನೆ. ಆತ ಮಗನಿಂದ 2018 ರಲ್ಲಿ ಚುನಾವಣೆಯಲ್ಲಿ ಸೋತ ಬಳಿಕ ಪಾಠ ಕಲಿತಿದ್ದಾನೆ ಎಂದುಕೊಂಡಿದ್ದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಲಕ್ಷ್ಮಣ ಸವದಿ ಹೆಸರನ್ನು ಹೇಳದೇ ಎಕ್ಸ್‌ವೈಝೆಡ್‌ ಎಂದು ಸಂಬೋಧಿಸಿ ಮಾತನಾಡಿದರು.

ಅಭಿವೃದ್ಧಿಯೊಂದೇ ಜಾತಿ, ಜನರ ನೆಮ್ಮದಿಯೊಂದೇ ನನ್ನ ಮತ: ಲಕ್ಷ್ಮೀ ಹೆಬ್ಬಾಳಕರ

ಯಾವುದೇ ಹೆದರಿಕೆ ಬೆದರಿಕೆಗೆ ನಮ್ಮ ಕಾರ್ಯಕರ್ತರು ಅಂಜುವ ಅಗತ್ಯವಿಲ್ಲ. ನಾನು ಮಧ್ಯರಾತ್ರಿ ಕರೆದರೂ ನಿಮ್ಮ ರಕ್ಷಣೆಗೆ ಬರುತ್ತೇನೆ. ಎಕ್ಸ್‌ವೈಝೆಡ್‌ ನಂತೆ ನಾನು ಎಂದಿಗೂ ನಮ್ಮ ಸಂಬಂಧಿಕರ ಮಾತುಗಳನ್ನು ಕೇಳಿ ರಾಜಕೀಯ ಮಾಡಿಲ್ಲ. ಸಂಬಂಧಿಕರ ಮಾತು ಕೇಳಿ ರಾಜಕೀಯ ಮಾಡಿದರೆ ಬೇಗ ಮಾಜಿ ಆಗುವ ಪ್ರಸಂಗ ಬರುತ್ತದೆ. ನಾನು ನನ್ನ ರಾಜಕೀಯ ಜೀವನದಲ್ಲಿ ನನ್ನ ಮಕ್ಕಳು, ಅಳಿಯ ಯಾರ ಮಾತು ಕೇಳಿ ರಾಜಕೀಯ ಮಾಡುವುದಿಲ್ಲ. ಹೀಗಾಗಿ ನನಗೆ ಸೋಲೆ ಗೊತ್ತಿಲ್ಲ ಅಂತ ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅನೇಕ ಮುಖಂಡರು ಮತ್ತು ವಿವಿಧ ಸಮುದಾಯಗಳ ನಾಯಕರು ಭಾರತೀಯ ಜನತಾ ಪಕ್ಷವನ್ನು ಸೇರುತ್ತಿರುವುದರಿಂದ ವಿರೋಧ ಪಕ್ಷ ಕಾಂಗ್ರೆಸ್‌ನವರು ಅಥಣಿಯಲ್ಲಿ ಬಿಜೆಪಿ ಗೆದ್ದರೆ ಗೋಕಾಕ ಆಡಳಿತ ಶುರುವಾಗುತ್ತದೆ ಎನ್ನುವ ಟೀಕೆ ಶುರು ಮಾಡಿದ್ದಾರೆ. ಕ್ಷೇತ್ರದ ಮತದಾರರು ಪ್ರಜ್ಞಾವಂತರಿದ್ದಾರೆ. ಅವರಿಗೆ ಎಲ್ಲ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ ಅಂತ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಹೇಳಿದ್ದಾರೆ.

click me!