‘ಮುಳುಗುತ್ತಿರುವ ಪಕ್ಷ’ ಅಲ್ಲ: ಕೇವಲ 4 ಸೀಟು ಗೆದ್ರೂ ಕಲಬುರಗಿಯಲ್ಲಿ ಜೆಡಿಎಸ್‌ ಪವರ್‌ಫುಲ್‌!

By Kannadaprabha News  |  First Published Sep 9, 2021, 7:27 AM IST

* ಮೈಸೂರು ಬಳಿಕ ಮತ್ತೊಂದು ಪಾಲಿಕೆಯಲ್ಲಿ ನಿರ್ಣಾಯಕ

* ಪಾಲಿಕೆ ಅಧಿಕಾರಕ್ಕೆ ಜೆಡಿಎಸ್‌ ಕಿಂಗ್‌ಮೇಕರ್‌

* ಮೇಯರ್‌ ಸ್ಥಾನಕ್ಕೆ ಬೇಡಿಕೆ

* ಅಂತಿಮವಾಗಿ ಬಿಜೆಪಿ ಜೊತೆಗೆ ಮೈತ್ರಿ, ಉಪಮೇಯರ್‌ ಹುದ್ದೆಗೆ ಸಮ್ಮತಿ ಸಂಭವ

* ತಮ್ಮದು ‘ಮುಳುಗುತ್ತಿರುವ ಪಕ್ಷ’ ಅಲ್ಲ ಎಂದು ತೋರಿಸಿಕೊಡುತ್ತಿರುವ ಜೆಡಿಎಸ್‌


ಕಲಬುರಗಿ(ಸೆ.09): ಇತ್ತೀಚೆಗೆ ಮೈಸೂರು ಮೇಯರ್‌ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜಾತ್ಯತೀತ ಜನತಾ ದಳ (ಜೆಡಿಎಸ್‌), ಇದೀಗ ಕಲಬುರಗಿ ಮಹಾನಗರಪಾಲಿಕೆ ಚುನಾವಣೆಯಲ್ಲೂ ಕಿಂಗ್‌ ಮೇಕರ್‌ ಆಗಿದೆ. 55 ಸ್ಥಾನಗಳ ಪಾಲಿಕೆಯಲ್ಲಿ ಕೇವಲ 4 ಸ್ಥಾನ ಗೆದ್ದಿದ್ದರೂ, ಜೆಡಿಎಸ್‌ ಬೆಂಬಲಿಸುವ ಪಕ್ಷ ಅಧಿಕಾರಕ್ಕೆ ಬರುವ ಸ್ಥಿತಿ ಎದುರಾಗಿದೆ. ಈ ಸನ್ನಿವೇಶದ ಲಾಭ ಪಡೆಯಲು ಮುಂದಾಗಿರುವ ಜೆಡಿಎಸ್‌, ಮೇಯರ್‌ ಪಟ್ಟತನಗೇ ಬಿಟ್ಟುಕೊಡುವಂತೆ ಮೈತ್ರಿ ಆಹ್ವಾನ ನೀಡಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಬೇಡಿಕೆ ರವಾನಿಸಿದೆ. ತನ್ಮೂಲಕ ರಾಜ್ಯದಲ್ಲಿ ತಮ್ಮದು ‘ಮುಳುಗುತ್ತಿರುವ ಪಕ್ಷವಲ್ಲ. ಇನ್ನೂ ನಿರ್ಣಾಯಕ ಪಾತ್ರ ವಹಿಸಬಲ್ಲ ಸಾಮರ್ಥ್ಯ ಇರುವ ರಾಜಕೀಯ ಸಂಘಟನೆ’ ಎಂಬ ಸಂದೇಶ ರವಾನೆ ಮಾಡಿದೆ.

ಬಿಜೆಪಿ ರಣತಂತ್ರ:

Tap to resize

Latest Videos

ಆದರೆ, ಯಾವುದೇ ಕಾರಣಕ್ಕೂ ಜೆಡಿಎಸ್‌ ಪಟ್ಟಿಗೆ ಮಣಿಯುವ ಸಾಧ್ಯತೆಯೇ ಇಲ್ಲ ಎಂಬ ನಿಲವಿಗೆ ಬಂದಿರುವ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಬೇರೆ ರಣತಂತ್ರ ಹೆಣೆಯುತ್ತಿದೆ. ಜತೆಗೆ ಮೇಯರ್‌ ಪಟ್ಟಬಿಟ್ಟು ಉಪಮೇಯರ್‌, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹುದ್ದೆ ಸೇರಿದಂತೆ ಬೇರೆ ಮಾತುಕತೆಗೆ ಸಿದ್ಧವಿದೆ ಎಂಬ ಸಂದೇಶವನ್ನೂ ಜೆಡಿಎಸ್‌ಗೆ ರವಾನಿಸಿದೆ.

ಮೇಯರ್‌ ಸ್ಥಾನ ನೀಡುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರಾಗಲಿ ಅಥವಾ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಾಗಲಿ ಹೇಳಿಲ್ಲ. ಹೇಳಿದ್ದು ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಉಸ್ತಾದ್‌ ನಾಸೀರ್‌ ಹುಸೇನ್‌.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾಸಿರ್‌ ಹುಸೇನ್‌, ಪಾಲಿಕೆಯ ಮೇಯರ್‌ ಗಾದಿ ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂದು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳಿಗೆ ಬೇಡಿಕೆ ಇಟ್ಟಿದ್ದೇವೆ, ಯಾವ ಪಕ್ಷ ಮೇಯರ್‌ ಹುದ್ದೆ ನೀಡುವುದೋ ಅವರಿಗೆ ಬೆಂಬಲ ನೀಡುತ್ತೇವೆ. 4 ಮಂದಿ ಸದಸ್ಯರು ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ ಇಂತಹದ್ದೇ ಪಕ್ಷಕ್ಕೆ ಬೆಂಬಲ ಕೊಡುವ ಬಗ್ಗೆ ಚರ್ಚೆ ಆಗಿಲ್ಲ, ಅಂತಿಮ ನಿರ್ಧಾರವನ್ನು ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಈ ವಿಷಯದಲ್ಲಿ ಮೌನ ವಹಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಬಿಜೆಪಿಗೆ ಬೆಂಬಲ ನೀಡುವ ಮನಸ್ಸಿದೆ. ದೇವೇಗೌಡರಿಗೆ ಜಾತ್ಯತೀತ ನಿಲುವನ್ನು ಪ್ರದರ್ಶಿಸಲು ಕಾಂಗ್ರೆಸ್‌ಗೆ ಬೆಂಬಲಿಸುವ ಒಲವಿದೆ. ಆದರೆ, ಅಂತಿಮವಾಗಿ ಕುಮಾರಸ್ವಾಮಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ದೇವೇಗೌಡರೂ ಸಮ್ಮತಿ ನೀಡುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

55 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದರೆ, ಬಿಜೆಪಿ 23 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಜೆಡಿಎಸ್‌ 4 ಹಾಗೂ ಪಕ್ಷೇತರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

ಬೆಂಗಳೂರಿಗೆ ದೌಡು:

ಜೆಡಿಎಸ್‌ ಪಕ್ಷದಿಂದ ಗೆದ್ದಿರುವ ನಾಲ್ವರು ಸದಸ್ಯರು, ಸ್ಥಳೀಯ ನಾಯಕರೊಂದಿಗೆ ಬೆಂಗಳೂರಿಗೆ ದೌಡಾಯಿಸಿದ್ದು, ಅಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ.ದೇವೇಗೌಡರ ಜೊತೆ ಮಾತುಕತೆ ನಡೆಸಿದ ನಂತರ ಮೇಯರ್‌ ಪಟ್ಟಕ್ಕಾಗಿ ಹೊಸ ಷರತ್ತು ಒಡ್ಡಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಕಂಗಾಲಾಗಿವೆ.

ಕುದುರೆ ವ್ಯಾಪಾರ ಭೀತಿ: ಗೌಪ್ಯ ಸ್ಥಳಕ್ಕೆ ಸದಸ್ಯರು

ಯಾವುದೇ ಪಕ್ಷಕ್ಕೆ ಪಾಲಿಕೆಯ ಅಧಿಕಾರ ಹಿಡಿಯುವಷ್ಟುಸಂಖ್ಯಾಬಲ ಸಿಗದ ಹಿನ್ನಲೆಯಲ್ಲಿ ಆಪರೇಷನ್‌ ಕಮಲ ಹಾಗೂ ಆಪರೇಷನ್‌ ಹಸ್ತಕ್ಕೆ ಒಳಗಾಗಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ನಾಲ್ಕು ಸದಸ್ಯರನ್ನು ಜೆಡಿಎಸ್‌ ವರಿಷ್ಠರು ಬೆಂಗಳೂರಿನ ಗೌಪ್ಯ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಇನ್ನು ಕೆಲದಿನ ಬೆಂಗಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಕಲಬರಗಿಯಿಂದ ಇನೊವಾ ಕಾರುಗಳಲ್ಲಿ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಗೆ ಆಗಮಿಸಿದ ಪಾಲಿಕೆ ಚುನಾವಣೆಯಲ್ಲಿ ವಿಜೇತರಾದ ನಾಲ್ವರು ಸದಸ್ಯರು ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಬಿಡದಿ ಬಳಿಯ ತೋಟದ ಮನೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ​ದ​ರು. ಜೆಡಿಎಸ್‌ ಮೂಲಗಳ ಪ್ರಕಾರ ಖುದ್ದು ಕುಮಾರಸ್ವಾಮಿ ಅವರೇ ಪಾಲಿಕೆ ನೂತನ ಸದಸ್ಯರಾದ ವಿಜಯಲಕ್ಷ್ಮಿ ರೆಡ್ಡಿ, ಸಾಜೀದ್‌ ಕಲ್ಯಾಣಿ, ವಿಶಾಲ ನವರಂಗ ಹಾಗೂ ಅಲಿಮುದ್ದೀನ್‌ ಅವರಿಗೆ ಬಿಡದಿ ತೋಟದ ಮನೆಗೆ ಆಗಮಿಸುವಂತೆ ಬುಲಾವ್‌ ನೀಡಿದ್ದರು ಎನ್ನಲಾಗಿದೆ.

ಅಧಿಕಾರ ಲೆಕ್ಕಾಚಾರ

- ಕಲಬುರಗಿ ಪಾಲಿಕೆ ಬಲ 55. ಕಾಂಗ್ರೆಸ್‌ 27, ಬಿಜೆಪಿ 23, ಜೆಡಿಎಸ್‌ 4, ಒಬ್ಬ ಬಿಜೆಪಿ ಬಂಡಾಯ ಪಕ್ಷೇತರ ಇದ್ದಾರೆ

- ಇಷ್ಟೇ ಆಗಿದ್ದರೆ, ಪಕ್ಷೇತರ ಅಭ್ಯರ್ಥಿಯ ಬೆಂಬಲ ದೊರಕಿದರೆ ಕಾಂಗ್ರೆಸ್‌ ಸುಲಭವಾಗಿ ಅಧಿಕಾರಕ್ಕೆ ಬರಬಹುದಿತ್ತು

- ಆದರೆ, ಪಾಲಿಕೆಯ ಮೇಯರ್‌ ಚುನಾವಣೆಗೆ ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಮತದಾನ ಮಾಡುವ ಹಕ್ಕು ಇದೆ

- ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ 31 ಹಾಗೂ ಬಿಜೆಪಿ 29 ಮತ ಹೊಂದಿದೆ. ಜೆಡಿಎಸ್‌ನ 4 ಮತಗಳು ನಿರ್ಣಾಯಕ

ಮೇಯರ್‌ ಗಾದಿ ಕೇಳಿದ್ದೇವೆ, ವರಿಷ್ಠರ ನಿರ್ಧಾರ ಅಂತಿಮ

ಮೇಯರ್‌ ಗಾದಿ ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂದು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಬೇಡಿಕೆ ಇಟ್ಟಿದ್ದೇವೆ, ಯಾವ ಪಕ್ಷ ಮೇಯರ್‌ ಹುದ್ದೆ ನೀಡುವುದೋ ಅವರಿಗೆ ಬೆಂಬಲ ನೀಡುತ್ತೇವೆ. 4 ಮಂದಿ ಸದಸ್ಯರು ಕುಮಾರಸ್ವಾಮಿಯವರನ್ನು ಭೇಟಿಯಾಗಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಜೆಡಿಎಸ್‌ ವರಿಷ್ಠರು ನಿರ್ಧರಿಸುತ್ತಾರೆ.

- ನಾಸೀರ್‌ ಹುಸೇನ್‌, ಜೆಡಿಎಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ

click me!