ಚಿತ್ತಾಪುರದಲ್ಲಿ ಬಿಜೆಪಿ ಹೊಸಮುಖ ತಂತ್ರ, ಪ್ರಿಯಾಂಕ್‌ ಖರ್ಗೆ ಹ್ಯಾಟ್ರಿಕ್‌ ಕನಸು ನನಸಾಗುತ್ತಾ?

By Kannadaprabha News  |  First Published May 2, 2023, 12:39 PM IST

ಚಿತ್ತಾಪುರದಲ್ಲಿ ಹೈವೋಲ್ಟೆಜ್‌ ಕದನ ಏರ್ಪಟ್ಟಿದೆ. ಪ್ರಿಯಾಂಕ್ ಖರ್ಗೆ ವಿರುದ್ಧ  ಬಿಜೆಪಿ ಮಣಿಕಂಠ ರಾಠೋಡ ಅವರನ್ನು ಕಣಕ್ಕಿಳಿಸಿದೆ. ಬಂಜಾರಾ, ಕೋಲಿ ಮತಗಳ ಮೇಲೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಕಣ್ಣು ಬಿದ್ದಿದೆ.


ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.2): ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯೊಂದಿಗೆ ಕಾಂಗ್ರೆಸ್‌ ಹೈಕಮಾಂಡ್‌, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ ಕಣದಲ್ಲಿರುವ ಚಿತ್ತಾಪುರ ಮೀಸಲು ಅಖಾಡ ಎಲ್ಲರ ಗಮನ ಸೆಳೆದಿದೆ. ಸತತ 3ನೇ ಬಾರಿಗೆ ಗೆಲ್ಲುವ ಉಮೇದಿನಲ್ಲಿರುವ ಪ್ರಿಯಾಂಕ್‌ ಖರ್ಗೆಯದ್ದು ಇಲ್ಲಿ ಅಭಿವೃದ್ಧಿ ಮಂತ್ರವಾದರೆ, ಮಣಿಕಂಠ ರಾಠೋಡರನ್ನ ಕಣಕ್ಕಿಳಿಸಿರುವ ಬಿಜೆಪಿ ಇಲ್ಲಿ ಹೊಸ ಮುಖ ತಂತ್ರದ ದಾಳ ಉರುಳುಸಿದ್ದರಿಂದ ಚಿತ್ತಾಪುರ ಕದನ ಕಣ ರೋಚಕ ತಿರುವು ಪಡೆದುಕೊಂಡಿದೆ.

Tap to resize

Latest Videos

undefined

ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ 2013 ಮತ್ತು 2018 ಹೀಗೆ ಎರಡು ಬಾರಿ ಗೆಲುವು ಸಾಧಿಸಿರುವ ಪ್ರಿಯಾಂಕ್‌, ಈ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು . 4500 ಕೋಟಿ ಅನುದಾನ ತಂದಿರೋ ಖ್ಯಾತಿ ಹೊಂದಿದ್ದಾರಲ್ಲದೆ, ಎದುರಾಳಿಯ ಅಪರಾಧ ಹಿನ್ನೆಲೆಯನ್ನೂ ಪ್ರಚಾರದ ಮುನ್ನೆಲೆಗೆ ತರುತ್ತಿದ್ದಾರೆ.

ಇನ್ನು, ಹೇಗಾದರೂ ಮಾಡಿ ಜ್ಯೂನಿಯರ್‌ ಖರ್ಗೆ ಮಣಿಸುವ ಸಂಕಲ್ಪ ಮಾಡಿರುವ ಬಿಜೆಪಿ ಇಲ್ಲಿ ಹೊಸ ಮುಖ, ಬಂಜಾರಾ ಸಮುದಾಯದವರಾದ ಮಣಿಕಂಠ ರಾಠೋಡರನ್ನ ಕಣಕ್ಕಿಳಿಸಿ ರಣಕಹಳೆಯನ್ನೇನೋ ಮೊಳಗಿಸಿದೆ. ಆದರೆ, ತಮ್ಮ ಅಪರಾಧ ಹಿನ್ನೆಲೆಯಿಂದಾಗಿ ಸಾರ್ವಜನಿಕವಾಗಿ ಸುದ್ದಿಯಲ್ಲಿರುವ ಮಣಿಕಂಠ ರಾಠೋಡ ಉಮೇದುವಾರಿಕೆಗೆ ಚಿತ್ತಾಪುರ ಬಿಜೆಪಿಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಮಣಿಕಂಠ ರಾಠೋಡ ಉಮೇದುವಾರಿಕೆ ಘೋಷಣೆಯಾದ ಬೆನ್ನಲ್ಲೇ ಖರ್ಗೆ ಕುಟುಂಬವನ್ನು ಧಿಕ್ಕರಿಸಿ ಬಂದಿದ್ದ ಮಾಜಿ ಶಾಸಕ, ಲಿಂಗಾಯಿತ ಕೋಮಿನ ಪ್ರಮುಖ ನಾಯಕ ವಿಶ್ವನಾಥ ಪಾಟೀಲ್‌ ಹೆಬ್ಬಾಳ, ಬಿಜೆಪಿ ಟಿಕೆಟ್‌ ವಂಚಿತ, ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ್‌ ಸೇರಿದಂತೆ ಅನೇಕ ಪ್ರಮುಖರು ಕಾಂಗ್ರೆಸ್‌ಗೆ ಮರಳಿರೋದು ಬಿಜೆಪಿಯ ಚಿತ್ತಾಪುರ ಗೆಲುವಿನ ಹೋರಾಟದ ವೇಗಕ್ಕೆ ಬ್ರೆಕ್‌ ಹಾಕಿದೆ.

ಇತ್ತ ಬಿಜೆಪಿ ತೊರೆದು ಬಂದಿರುವ ಬಾಬೂರಾವ ಚಿಂಚನಸೂರ್‌, ವಿಶ್ವನಾಥ ಹೆಬ್ಬಾಳರಿಂದಾಗಿ ಕಾಂಗ್ರೆಸ್‌ ಮೊದಲಿಗಿಂತಲೂ ಚಿತ್ತಾಪುರದಲ್ಲಿ ಸಂಘಟನಾತ್ಮಕವಾಗಿ ಕಾಣುತ್ತಿದ್ದು ಇದು ಪ್ರಿಯಾಂಕ್‌ ಖರ್ಗೆ ಗೆಲುವಿಗೆ ಪೂರಕವಾಗಲಿದೆ.

ಬಿಟ್ಕಾಯಿನ್‌ ಹಗರಣ, ಪಿಎಸ್‌ಐ ಹಗರಣ, ಗಂಗಾ ಕಲ್ಯಾಣ ಯೋಜನೆಯಲ್ಲಿನ ಅವ್ಯವಹಾರ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ದಾಖಲೆ, ಅಂಕಿ- ಸಂಖ್ಯೆ ಸಮೇತ ಮುಗಿಬೀಳುತ್ತಿದ್ದ ಪ್ರಿಯಾಂಕ್‌ ಅವರನ್ನು ಈ ಬಾರಿ ವಿಧಾನಸೌಧ ಮೆಟ್ಟಿಲು ಹತ್ತದಂತೆ ನೋಡಿಕೊಳ್ಳಬೇಕೆಂದು ಬಿಜೆಪಿ ಸಂಕಲ್ಪಿಸಿ ಇಲ್ಲಿ ಸ್ಥಳೀಯ ಬಂಜಾರಾ ಸಮಾಜದ ಮಣಿಕಂಠ ರಾಠೋಡರನ್ನ ಕಣಕ್ಕಿಳಿಸಿದೆ.

ಲಾಭ-ನಷ್ಟದ ಲೆಕ್ಕಾಚಾರ: ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದ ಅರವಿಂದ ಚವ್ಹಾಣ್‌ ತಮಗೆ ಟಿಕೆಟ್‌ ಕೈ ತಪ್ಪಿದ್ದಕ್ಕೆ ಬೇಸರಿಸಿ ಬಿಜೆಪಿ ತೊರದಿದ್ದಾರೆ. ಮತ್ತೊಂದೆಡೆ, ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ್‌ ಪುತ್ರ ವಿಠ್ಠಲ ನಾಯಕ್‌ ಅವರಿಗೆ ಕ್ಷೇತ್ರದ ತಾಂಡಾಗಳಲ್ಲಿ ಉತ್ತಮ ಸಂಬಂಧವಿದೆ. ಇವರ ತಂದೆ ದಿ. ವಾಲ್ಮೀಕಿ ಜೊತೆಗಿದ್ದ ಲಿಂಗಾಯತ ಮುಖಂಡರು ವಿಠ್ಠಲ್‌ ಬೆನ್ನಿಗೆ ನಿಂತಿದ್ದಾರೆ.

Chikkamagaluru Constituencies: 5 ಕ್ಷೇತ್ರಗಳ ಸಮೀಕ್ಷೆ, ಬಿಜೆಪಿ-ಕಾಂಗ್ರೆಸ್‌ ನಡುವೆ ಟೈಟ್‌ ಫೈಟ್‌!

ಜೆಡಿಎಸ್‌ ನಾಮ್‌ ಕೆ ವಾಸ್ತೆ ಸ್ಪರ್ಧೆ: ಇವರಿಬ್ಬರ ನಡುವೆ ಡಾ.ಸುಭಾಶ್ಚಂದ್ರ ರಾಠೋಡ್‌ ಕಿರಿಯ ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ರಾಜಿನಾಮೆ ಕೊಟ್ಟು ಚುನಾವಣಾ ರಾಜಕೀಯಕ್ಕೆ ಎಂಟ್ರಿಯಾಗಿದ್ದು, ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

2018 ರ ಫಲಿತಾಂಶ

1) ಪ್ರಿಯಾಂಕ್‌ ಖರ್ಗೆ (ಕಾಂಗ್ರೆಸ್‌) - 69, 700

2) ವಾಲ್ಮೀಕಿ ನಾಯಕ್‌ (ಬಿಜೆಪಿ)- 65, 307

ಜಾತಿ ಲೆಕ್ಕಾಚಾರ: ಚಿತ್ತಾಪುರ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತರು ಸುಮಾರು 60 ಸಾವಿರ, ಬಂಜಾರ 35 ಸಾವಿರ, ದಲಿತರು 40 ಸಾವಿರ, ಕುರುಬರು 25 ಸಾವಿರ, ಕೊಲಿ ಸಮಾಜದ 30 ಸಾವಿರ, ಮುಸ್ಲಿಂ 30 ಸಾವಿರ ಗಾಣಿಗ 8 ಸಾವಿರ ಹಾಗೂ 8 ಸಾವಿರ ಬ್ರಾಹ್ಮಣ ಮತಗಳಿವೆ.

Chitradurga Constituencies: ದುರ್ಗದಲ್ಲಿ ಬಿಜೆಪಿ ಕೋಟೆ ಛಿದ್ರಗೊಳಿಸಲು ಕಾಂಗ್ರೆಸ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!