ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳ ಸಮೀಕ್ಷೆ ಇಲ್ಲಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿಯಲ್ಲಿ ಹೊಸಮುಖಗಳು ಕಣದಲ್ಲಿದೆ. ಉಳಿದೆಡೆ ಹಳೆಯ ಕಲಿಗಳ ನಡುವೆ ಮತ್ತದೇ ಹೋರಾಟ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆರ್.ತಾರಾನಾಥ್
ಚಿಕ್ಕಮಗಳೂರು (ಮೇ.2): ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಕ್ಷೇತ್ರದಲ್ಲಿಗ ರಾಜಕೀಯ ಬದಲಾವಣೆಯ ಗಾಳಿ ಬೀಸಿದ್ದು, ‘ಕೈ’ ಸೊರಗಿದೆ. ‘ಕಮಲ’ ಅರಳಿದೆ. ಜೊತೆಗೆ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರದಲ್ಲಿ ಹೊಸಮುಖಗಳು ಕಣಕ್ಕಿಳಿದಿದ್ದು, ಬದಲಾವಣೆಯ ಗಾಳಿಗೆ ನಾಂದಿಯಾಗಿದೆ.
undefined
ತರೀಕೆರೆ-ರಾಷ್ಟ್ರೀಯ ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿ ಟಕ್ಕರ್: ಈ ಕ್ಷೇತ್ರದಲ್ಲಿ ಗೆಲ್ಲಲು ಜಾತಿಯೇ ಶಕ್ತಿಯಾದರೂ, ಒಂದೇ ಜಾತಿಯವರು ಗೆದ್ದಿಲ್ಲ. ಒಮ್ಮೆ ಲಿಂಗಾಯತರು, ಇನ್ನೊಮ್ಮೆ ಕುರುಬರು ಗೆಲ್ಲುತ್ತಾ ಬಂದಿದ್ದಾರೆ. ಫೈಟ್ ಇರುವುದು ಸಾಧಾರಣವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. 2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅತಿ ಹೆಚ್ಚು ಮತಗಳನ್ನು ಪಡೆದವರ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದ ಜಿ.ಎಚ್.ಶ್ರೀನಿವಾಸ್ ಈಗ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಶಾಸಕ ಡಿ.ಎಸ್.ಸುರೇಶ್ ಮತ್ತೆ ಸ್ಪರ್ಧೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೋಪಿಕೃಷ್ಣ, ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡುವುದು ಖಚಿತ.
ಕಡೂರು: ದತ್ತಗೆ ಅನುಕಂಪ ಕೈ ಹಿಡಿಯುತ್ತಾ?: ಈ ಕ್ಷೇತ್ರದ ಅಭ್ಯರ್ಥಿಯ ಗೆಲುವಿನಲ್ಲಿ ಜಾತಿಯೊಂದೇ ನಿರ್ಣಾಯಕವಲ್ಲ ಎಂಬುದು ಸಾಬೀತಾಗಿದೆ. ಸುಮಾರು ಒಂದು ಸಾವಿರ ಆಸುಪಾಸಿನಲ್ಲಿ ಜನಸಂಖ್ಯೆ ಹೊಂದಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವೈಎಸ್‌ವಿ ದತ್ತ 2013ರಲ್ಲಿ ಗೆದ್ದಿದ್ದು ಇದಕ್ಕೆ ಸ್ಪಷ್ಟಉದಾಹರಣೆ. 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವೈಎಸ್‌ವಿ ದತ್ತ, ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ. ಬಿಜೆಪಿಯಿಂದ ಶಾಸಕ ಬೆಳ್ಳಿಪ್ರಕಾಶ್, ಕಾಂಗ್ರೆಸ್‌ನಿಂದ ಆನಂದ್ ಕಣದಲ್ಲಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ದತ್ತಾಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಹೀಗಾಗಿ, ಮತ್ತೆ ಜೆಡಿಎಸ್‌ಗೆ ಅವರು ಮರಳಿದ್ದಾರೆ. ಕಾಂಗ್ರೆಸ್ ಮೋಸ ಮಾಡಿತು ಎಂಬ ಅನುಕಂಪದ ಅಲೆ ದತ್ತಗೆ ಪ್ಲಸ್ ಪಾಯಿಂಟ್. ಹಿಂದಿನ ಚುನಾವಣೆಯ ಸೋಲಿನ ಅನುಕಂಪ ಕೆ.ಎಸ್.ಆನಂದ್‌ಗೆ ಪ್ಲಸ್ ಪಾಯಿಂಟ್. ಹೀಗಾಗಿ, ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತ.
ಚಿಕ್ಕಮಗಳೂರು: ಸಿ.ಟಿ.ರವಿಗೆ ಈ ಬಾರಿ ಅಗ್ನಿ ಪರೀಕ್ಷೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ 6ನೇ ಬಾರಿಗೆ ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಿ.ಟಿ.ರವಿ ಜೊತೆಗಿದ್ದು, ಕಳೆದ 3 ಚುನಾವಣೆಗಳಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಎಚ್.ಡಿ.ತಮ್ಮಯ್ಯ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಕ್ಷೇತ್ರದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಲಿಂಗಾಯತ, ಕುರುಬ ಸಮುದಾಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯಡಿಯೂರಪ್ಪನವರು ಚುನಾವಣೆ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಲಿಂಗಾಯತ ಸಮುದಾಯ ಚಿಕ್ಕಮಗಳೂರಿನಲ್ಲಿ ತಮ್ಮದೇ ಸಮುದಾಯದ ಪರ್ಯಾಯ ನಾಯಕರನ್ನು ಹುಟ್ಟು ಹಾಕುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಹೀಗಾಗಿ, ಎಚ್.ಡಿ.ತಮ್ಮಯ್ಯ ಪರವಾಗಿ ಲಿಂಗಾಯತರು ಇದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಸಿ.ಟಿ.ರವಿಯವರು ಸಿದ್ದರಾಮಯ್ಯ ವಿರುದ್ಧ ಆಗಾಗ ಅಸಂವಿಧಾನಿಕ ಹೇಳಿಕೆ ನೀಡುತ್ತಿರುವುದು ಕುರುಬ ಸಮುದಾಯವನ್ನು ಕೆಣಕುವಂತೆ ಮಾಡಿದೆ. ಜತೆಗೆ ಹಿಜಾಬ್, ಹಲಾಲ್ ಕಟ್, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂಬ ಹೇಳಿಕೆಗಳು ಅಲ್ಪಸಂಖ್ಯಾತರಲ್ಲಿ ಅಸಮಾಧಾನ ಮೂಡಿಸಿವೆ. ಇವುಗಳು ಮತಗಳಾಗಿ ಪರಿವರ್ತನೆಯಾದರೆ ಕಾಂಗ್ರೆಸ್‌ಗೆ ಅನುಕೂಲ, ಸಿ.ಟಿ.ರವಿಗೆ ಅಗ್ನಿಪರೀಕ್ಷೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಸ್ಪಷ್ಟ. ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿಯವರ ಫೈಟ್ ಅಷ್ಟಕಷ್ಟೆ.
ಮೂಡಿಗೆರೆ (ಮೀಸಲು): ಬಿಜೆಪಿಗೆ ಪ್ರತಿಷ್ಠೆಯಾಗಿರುವ ಗೆಲುವು: ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹೊಸಮುಖಗಳನ್ನು ಕಣಕ್ಕಿಳಿಸಿವೆ. ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ಟಿಕೆಟ್ ನೀಡದ್ದಕ್ಕಾಗಿ ಅಸಮಾಧಾನಗೊಂಡು ಶಾಸಕ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಸೇರಿದ್ದು, ಆ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ದೀಪಕ್ ದೊಡ್ಡಯ್ಯ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಟಿಕೆಟ್ ಘೋಷಣೆಯಾಗಿದ್ದರೂ, ಬಳಿಕ, ಟಿಕೆಟ್ ನೀಡದ್ದಕ್ಕೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅಸಮಾಧಾನಗೊಂಡಿದ್ದಾರೆ. ಅವರು ಜೆಡಿಎಸ್ ಬೆಂಬಲಿಸುತ್ತಾರೋ, ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಶಾಸಕ ಕುಮಾರಸ್ವಾಮಿಗೆ ಟಿಕೆಟ್ ತಪ್ಪಿಸಿ, ಹೊಸಮುಖಕ್ಕೆ ಟಿಕೆಟ್ ನೀಡಿದ ಬಿಜೆಪಿಗೆ, ಗೆಲುವು ಪ್ರತಿಷ್ಠೆಯ ವಿಷಯವಾಗಿದೆ. ಇಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ.
CHITRADURGA CONSTITUENCIES: ದುರ್ಗದಲ್ಲಿ ಬಿಜೆಪಿ ಕೋಟೆ ಛಿದ್ರಗೊಳಿಸಲು ಕಾಂಗ್ರೆಸ್ ರಣತಂತ್ರ!
ಶೃಂಗೇರಿ: ಜೀವರಾಜ್, ರಾಜೇಗೌಡರ ನಡುವೆ ಫೈಟ್: ಶಾರದಾಂಬೆಯ ನೆಲೆಬೀಡು ಶೃಂಗೇರಿಯಲ್ಲಿ ಈ ಹಿಂದೆ ಹ್ಯಾಟ್ರಿಕ್ ಗೆಲುವು ಸಾಧಿಸಿ, 2018ರಲ್ಲಿ ಸೋತಿದ್ದ, ಡಿ.ಎನ್.ಜೀವರಾಜ್, ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಶಾಸಕ ಟಿ.ಡಿ.ರಾಜೇಗೌಡ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಹೊಸಮುಖ ಸುಧಾಕರ್ ಶೆಟ್ಟಿಸ್ಪರ್ಧಾಳು. 2018ರಲ್ಲಿ ಟಿ.ಡಿ.ರಾಜೇಗೌಡ ಹಾಗೂ ಡಿ.ಎನ್.ಜೀವರಾಜ್ ನಡುವೆ ಕೊನೆ ಹಂತದವರೆಗೂ ಟೈಟ್ ಫೈಟ್ ನಡೆಯಿತು. ರಾಜೇಗೌಡರು 1,989 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಶಿಕಾರಿಪುರ ವಿಧಾನಸಭಾ ಕ್ಷೇತ್ರ: ವಿಜಯೇಂದ್ರ ಓಟಕ್ಕೆ ನಾಗರಾಜ ಅಡ್ಡಿಯಾಗುವರೇ?
ಕ್ಷೇತ್ರದಲ್ಲಿ ದಲಿತರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ನ ಸುಧಾಕರ್ ಶೆಟ್ಟಿಯವರು ಬಿಜೆಪಿ ಮತಗಳ ಬುಟ್ಟಿಗೆ ಕೈ ಹಾಕುತ್ತಾರೆಂಬ ಮಾತಿದೆ. ಇದು ನಿಜವಾದಲ್ಲಿ ರಾಜೇಗೌಡರಿಗೆ ಅನುಕೂಲ. ಸುಧಾಕರ್ ಶೆಟ್ಟಿಯವರು ಒಳ್ಳೆಯ ವ್ಯಕ್ತಿ. ಆದರೆ, ಗೆಲ್ಲುವ ಮಟ್ಟದಲ್ಲಿ ಟಕ್ಕರ್ ಕೊಡಲಾರರು ಎಂದು ಹೇಳಲಾಗುತ್ತಿದೆ. ಪಕ್ಷಕ್ಕಿಂತ ಹೆಚ್ಚಾಗಿ, ಡಿ.ಎನ್.ಜೀವರಾಜ್ ಮತ್ತು ಟಿ.ಡಿ.ರಾಜೇಗೌಡರ ನಡುವೆ ವೈಯಕ್ತಿಕವಾಗಿ ಇಲ್ಲಿ ಫೈಟ್ ಇದೆ.