ರಘು ಆಚಾರ್ ಚಿತ್ರದುರ್ಗದಿಂದ ಟಿಕೆಟ್ ಕೇಳಿದ್ದಾರೆ. ಆಯ್ತು ಈ ಬಗ್ಗೆ ನೋಡೋಣ ಎಂದಿದ್ದೇನೆ: ಸಿದ್ದರಾಮಯ್ಯ
ಎಚ್.ಡಿ.ಕೋಟೆ(ಅ.28): ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಕಾಂಗ್ರೆಸ್ ಟಿಕೆಟ್ ಸಿಗುವ ಸುಳಿವು ದೊರೆತಿದೆ. ನಗರದಲ್ಲಿ ಗುರುವಾರ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸುಳಿವು ನೀಡಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ರಘು ಆಚಾರ್ ಅವರು ಚಿತ್ರದುರ್ಗದಿಂದ ಟಿಕೆಟ್ ಕೇಳಿದ್ದಾರೆ. ಆಯ್ತು ಈ ಬಗ್ಗೆ ನೋಡೋಣ ಎಂದಿದ್ದೇನೆ ಎಂದು ಹೇಳಿದರು.
‘ರಘು ಆಚಾರ್ ಅವರು ಆರ್ಥಿಕವಾಗಿ ಪ್ರಬಲರಾಗಿದ್ದು, ಯಾರ ವಿರುದ್ಧ ಬೇಕಿದ್ದರೂ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಚುನಾವಣೆಗೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಿದ್ದಾರೆ. ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎಂಎಲ್‌ಸಿಯಾಗಿ ಎರಡು ಬಾರಿ ಗೆದ್ದಿದ್ದಾರೆ. 12 ವರ್ಷ ಎಂಎಲ್‌ಸಿಯಾಗಿದ್ದಾರೆ. ಅವರು ನಾಮನಿರ್ದೇಶನ ಆದವರಲ್ಲ. ಚುನಾವಣೆಗೆ ನಿಂತು ಗೆದ್ದಿದ್ದಾರೆ ಎಂದರು.
undefined
ಸಿದ್ದು, ಡಿಕೆಶಿ ಸದಾ ಉತ್ತರ-ದಕ್ಷಿಣ ಧ್ರುವ: ಡಾ.ಕೆ. ಸುಧಾಕರ್ ವ್ಯಂಗ್ಯ
ನೀವೆಲ್ಲಾ ಹೇಳಿದ್ದನ್ನು ಕೇಳಿಸಿಕೊಂಡಿದ್ದೇವೆ. ನಮ್ಮ ಅಭಿಪ್ರಾಯವೂ ಅದೇ ಆಗಿದೆ. ನಮಗೆ ಅವಕಾಶ ಸಿಕ್ಕರೆ ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಯಾವ ಅನುಮಾನ, ಸಂಶಯ ಬೇಡ. ನೀವು ಕೇಳಬೇಕು. ನಾವು ಕೊಡುತ್ತೇವೆ. ನೀವು ಕೇಳದಿದ್ದರೂ ಕೊಟ್ಟೇ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಈ ಮೂಲಕ ರಘು ಆಚಾರ್ ಅವರಿಗೆ ಟಿಕೆಟ್ ನೀಡುವ ಸುಳಿವನ್ನು ನೀಡಿದರು.
ಇದಕ್ಕೂ ಮೊದಲು ರಘು ಆಚಾರ್ ಅವರಿಗೆ ಚಿತ್ರದುರ್ಗದ ಟಿಕೆಟ್ ನೀಡುವಂತೆ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರು ಚೀಟಿಯಲ್ಲಿ ಬರೆದು ಕೊಟ್ಟರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಏ, ಸುಮ್ನಿರಯ್ಯ, ನಾನು ರಘು ಆಚಾರ್‌ಗೂ ಹೇಳಿದ್ದೇನೆ, ಸ್ವಾಮೀಜಿಗೂ ಹೇಳಿದ್ದೇನೆ ನೀನು ವೈಯಕ್ತಿಕವಾಗಿ ಸಿಗು ನಿನಗೂ ಹೇಳುತ್ತೇನೆ’ ಎಂದರು.
ಕಾಂಗ್ರೆಸ್‌ಗೆ ಖರ್ಗೆ ಆಯ್ಕೆ ರಾಜ್ಯಕ್ಕೆ ದೊಡ್ಡ ಶಕ್ತಿ
ಮುಂದಿನ ಸಿಎಂ ಸಿದ್ದರಾಮಯ್ಯ: ರಘು ಆಚಾರ್
ವಿಶ್ವಕರ್ಮ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ‘ನಮ್ಮ ಸಮುದಾಯಕ್ಕೆ ಸರಸ್ವತಿ ಒಲಿದಿದ್ದಾಳೆ, ಆದರೆ, ಲಕ್ಷ್ಮೇ ಒಲಿಯಲಿಲ್ಲ. ನಾನು, ಕೆ.ಪಿ. ನಂಜುಂಡಿ ಅವರು ವಿಧಾನಸೌಧಕ್ಕೆ ಹೋಗುವುದು ಮುಖ್ಯವಲ್ಲ, ಸಿದ್ದರಾಮಯ್ಯ ಅವರಂತಹ ನಾಯಕರು ವಿಧಾನಸಭೆಗೆ ಹೋಗಬೇಕು. ಡಿ. ದೇವರಾಜ ಅರಸು ನಂತರ ಸಣ್ಣಪುಟ್ಟಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದವರು ಸಿದ್ದರಾಮಯ್ಯ ಮಾತ್ರ. ಫ್ಯೂಚರ್ ಮುಖ್ಯಮಂತ್ರಿಗಳು ಸಿದ್ದರಾಮಯ್ಯ. ನಾನು ಮನಸಾರೆ ಮಾತನಾಡುತ್ತಿದ್ದೇನೆ, ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ. ನಾನು ವಿಧಾನಸಭೆಗೆ ಹೋಗಬೇಕು ಅನ್ನೋದು ನನಗೆ ಮುಖ್ಯವಲ್ಲ. ಸಣ್ಣಪುಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಿ’ ಎಂದು ಹೇಳಿದರು.
ಮಾಜಿ ಶಾಸಕ ಜಿ.ಟಿ. ದೇವೇಗೌಡ ಎಂದ ಸಿದ್ದರಾಮಯ:
ಈ ಮಧ್ಯೆ, ಸಿದ್ದರಾಮಯ್ಯನವರು ಭಾಷಣ ಮಾಡುವಾಗ ಎಡವಟ್ಟು ಮಾಡಿಕೊಂಡರು. ಭಾಷಣದ ಮಧ್ಯೆ ಶಾಸಕ ಜಿ.ಟಿ.ದೇವೇಗೌಡರನ್ನು ಮಾಜಿ ಶಾಸಕ ಜಿ.ಟಿ.ದೇವೇಗೌಡ ಎಂದರು. ಈ ವೇಳೆ, ಜನರು ಹಾಲಿ, ಹಾಲಿ ಎಂದು ಕೂಗಿಕೊಂಡಾಗ ಎಚ್ಚೆತ್ತುಕೊಂಡ ಅವರು, ‘ನಾನು ಉದ್ದೇಶಪೂರ್ವಕವಾಗಿ ಹೇಳಿಲ್ಲ, ಆಯ್ತು ಬಿಡ್ರಪ್ಪ, ಹಾಲಿ ಶಾಸಕ ಜಿ.ಟಿ.ದೇವೇಗೌಡ’ ಎಂದರು.