Karnataka Politics: ಕಾಂಗ್ರೆಸ್‌ನಿಂದ ಅಲ್ಪ ಸಂಖ್ಯಾತ ಸಮುದಾಯಕ್ಕೆ ನಿರಂತರ ದ್ರೋಹ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಶಾಸಕ ತಿಪ್ಪಾರೆಡ್ಡಿ ಆರೋಪ
ಚಿತ್ರದುರ್ಗ (ಅ. 28): ಕಳೆದ ಎಪ್ಪತ್ತು ವರ್ಷಗಳಿಂದ ದೇಶದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕನ್ನಾಗಿ ಮಾಡಿಕೊಂಡಿತೇ ವಿನಃ ಅವರ ಅಭಿವೃದ್ಧಿಗೆ ಎಂದೂ ಚಿಂತಿಸಲಿಲ್ಲ. ನಿರಂತರವಾಗಿ ದ್ರೋಹ ಮಾಡಿಕೊಂಡು ಬಂದಿದೆ ಎಂದು ಶಾಸಕ ತಿಪ್ಪಾರೆಡ್ಡಿ ಆರೋಪಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಎನ್ನುವುದನ್ನು ಮೊದಲು ಮುಸಲ್ಮಾನರು ಅರ್ಥಮಾಡಿಕೊಳ್ಳಬೇಕು ಎಂದರು. ಬಿಜೆಪಿ ಯಾವ ಜಾತಿ ಪರವಾಗಿಲ್ಲ. ಎಲ್ಲಾ ಕೋಮಿನವರ ಪರವಾಗಿದೆ ಎನ್ನುವುದನ್ನು ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಅಲ್ಪಸಂಖ್ಯಾತ ಮೋರ್ಚಾ ಮೇಲಿದೆ. ಬಡವರ ಸೇವೆ ಮಾಡಲು ಪಕ್ಷದಲ್ಲಿ ಸಾಕಷ್ಟುಅವಕಾಶವಿದೆ. ಎಲ್ಲವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಕ್ರಿಶ್ಚಿಯನ್, ಮುಸ್ಲಿಂ ಸೇರಿದಂತೆ ಎಲ್ಲಾ ಜಾತಿಯ ಬಡವರು ನಗರದ ಘೋಷಿತ ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಬರೀ ನಗರವೊಂದರಲ್ಲಿಯೇ ನಲವತ್ತರಿಂದ ಐವತ್ತು ಸಾವಿರದಷ್ಟುಇರಬಹುದು. ನಗರದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ 12 ಸಾವಿರ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದೇವೆ. ಆಶ್ರಯ ಮನೆಗಳ ಸಾಲ ಕೂಡ ಮನ್ನಾ ಮಾಡಲಾಗಿದೆ. ಮುಸಲ್ಮಾನರನ್ನು ಸಂಘಟಿಸಿ ಪಕ್ಷಕ್ಕೆ ಸೆಳೆಯುವ ಕಾರ್ಯತಂತ್ರವನ್ನು ಅಲ್ಪಸಂಖ್ಯಾತ ಮೋರ್ಚಾ ಮಾಡಬೇಕಿದೆ ಎಂದರು.
undefined
ಬಿಜೆಪಿ ಅಲ್ಪಸಂಖ್ಯಾತ ವಿರೋಧಿಯಲ್ಲ: ಚುನಾವಣೆ ಸಮೀಪ ಬಂದಾಗ ಕಾಂಗ್ರೆಸ್‌ನವರು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಬಣ್ಣ ಕಟ್ಟುತ್ತಾರೆ. ಅದಕ್ಕೆ ಯಾರು ಕಿವಿಗೊಡುವುದು ಬೇಡ. ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ. ಬಿಜೆಪಿಗೆ ಧರ್ಮಕ್ಕಿಂತ ದೇಶ ಮುಖ್ಯ. ಸಿಎಎ, ಎನ್‌ಆರ್‌ಸಿ ಬಗ್ಗೆ ಅಲ್ಪಸಂಖ್ಯಾತರಲ್ಲಿ ವಿರೋಧಿಗಳು ತಪ್ಪು ತಿಳುವಳಿಕೆ ಮೂಡಿಸುತ್ತಿದ್ದಾರೆ. ಯಾರೂ ಹೆದರುವುದು ಬೇಡ. ಮುಸ್ಲಿಂ, ಕ್ರಿಶ್ಚಿಯನ್, ಜೈನರಿಗೆ ಬಿಜೆಪಿಯಿಂದ ಯಾವುದೇ ತೊಂದರೆಯಾಗಿಲ್ಲವೆಂದು ತಿಪ್ಪಾರೆಡ್ಡಿ ಹೇಳಿದರು.
ವಲಸೆ ಬಂದವರಿಗೆ ಪೌರತ್ವ: ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಸೈಯದ್ ಸಲಾಂಜೀ ಮಾತನಾಡಿ, ಸಿಎಎ, ಎನ್‌ಆರ್‌ಸಿ, ಗೋಹತ್ಯೆ, ಹಿಜಾಬ್, ಆರ್ಟಿಕಲ್ 370 ಇವುಗಳ ಬಗ್ಗೆ ವಿರೋಧಿಗಳು ವಿನಾಕಾರಣ ಗೊಂದಲ ಸೃಷ್ಟಿಸುತ್ತಿರುವುದಕ್ಕೆ ಅಲ್ಪಸಂಖ್ಯಾತರಲ್ಲಿ ದುಗುಡ ಬೇಡ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದಿಂದ ಎಲ್ಲವನ್ನು ಬಿಟ್ಟು ನಮ್ಮ ದೇಶಕ್ಕೆ ವಲಸೆ ಬಂದಿರುವವರನ್ನು ಗುರುತಿಸಿ ಅವರುಗಳನ್ನು ಭಾರತದ ಪ್ರಜೆಗಳನ್ನಾಗಿ ಮಾಡಿಕೊಳ್ಳುವುದು ಈ ಕಾಯಿದೆ ಉದ್ದೇಶ. ಇದರಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಿಲ್ಲ ಎಂದರು.
ಇದನ್ನೂ ಓದಿ: Chitradurga: ಕ್ರೀಡಾಪಟುಗಳಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ನೆರವು: ಶಾಸಕ ತಿಪ್ಪಾರೆಡ್ಡಿ
ಕಾಂಗ್ರೆಸ್‌ನವರಿಗೆ ಮಾತ್ರ ಕಾಶ್ಮೀರದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣುತ್ತಿವೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿರುವುದನ್ನು ಮಾತ್ರ ಈಡೇರಿಸಿದೆಯೇ ವಿನಃ ಅದನ್ನು ಬಿಟ್ಟು ಬೇರೆ ಯಾವುದಕ್ಕೂ ಕೈಹಾಕಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸಿ ಚುನಾವಣೆಯಲ್ಲಿ ಪಕ್ಷಕ್ಕೆ ಓಟು ಕೊಡಿಸುವ ಹೊಣೆಗಾರಿಕೆ ಅಲ್ಪಸಂಖ್ಯಾತ ಮೋರ್ಚಾ ಮೇಲಿದೆ. ಜಿಲ್ಲೆಯ ಒಂಬತ್ತು ಮಂಡಲಗಳಲ್ಲಿಯೂ ಕಾರ್ಯಕಾರಿಣಿ ಸಭೆ ನಡೆಸಿ ಎಂದು ಸೂಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಅಧಿಕಾರಕ್ಕಿಂತ ಬಿಜೆಪಿಗೆ ಮೊದಲು ದೇಶ ಮುಖ್ಯ. ಅಲ್ಪಸಂಖ್ಯಾತರನ್ನು ನಮ್ಮ ಪಕ್ಷ ಎಂದಿಗೂ ಕೈಬಿಟ್ಟಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮುಮ್ತಾಜ್ ಅಲಿಖಾನ್‌ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಅಲ್ಪಸಂಖ್ಯಾತರನ್ನು ಗೌರವಿಸಿದ್ದಾರೆ. ಅಬ್ದುಲ್ ಕಲಾಂರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸೈಯದ್ ನವಾಜ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಮಾತನಾಡಿದರು. ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ನಯಾಜ್ ಅಹಮದ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಮೌಲಾಸಾಬ್, ಅಸ್ಗರ್ ಅಹಮದ್, ಮೊಹಿದ್ದೀನ್ ,ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಶಾಹೀದ್, ಸೈಫುಲ್ಲಾ, ಕಾರ್ಯಾಲಯ ಕಾರ್ಯದರ್ಶಿ ಎಂ.ಡಿ.ಮುಬಾರಕ್ ಇದ್ದರು.