ಕಾಂಗ್ರೆಸ್‌ ಬಂದಾಗೆಲ್ಲ ಬರಗಾಲ: ಡಾ.ಕೆ.ಸುಧಾಕರ್‌

By Kannadaprabha NewsFirst Published Apr 9, 2024, 4:54 AM IST
Highlights

ಲೋಕಸಭಾ ಚುನಾವಣೆಯು ದೇಶದ ಪ್ರಧಾನಮಂತ್ರಿಯನ್ನು ಆರಿಸುವ ಚುನಾವಣೆ. ಈ ಬಾರಿಯೂ ನರೇಂದ್ರ ಮೋದಿಯವರನ್ನೇ ಹ್ಯಾಟ್ರಿಕ್‌ ಆಗಿ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣ್ಣಿನ ಮಗ ಎಚ್‌.ಡಿ.ದೇವೇಗೌಡರ ಸಮಾಗಮವಾಗಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಕಂಡುಬಂದಿದೆ. ರಾಜ್ಯದ ಆರೂವರೆ ಕೋಟಿ ಜನರ ಏಳಿಗೆಗಾಗಿ ಈ ಸಮಾಗಮ ನಡೆದಿದೆ ಎಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ 

ದೊಡ್ಡಬಳ್ಳಾಪುರ/ಹೊಸಕೋಟೆ(ಏ.09): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳಿಂದ ಮೋಸ ಮಾಡಿ ಗೆದ್ದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಮೋಸಕ್ಕೆ ಅವಕಾಶ ಮಾಡಿಕೊಡದೆ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು. ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಯಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯು ದೇಶದ ಪ್ರಧಾನಮಂತ್ರಿಯನ್ನು ಆರಿಸುವ ಚುನಾವಣೆ. ಈ ಬಾರಿಯೂ ನರೇಂದ್ರ ಮೋದಿಯವರನ್ನೇ ಹ್ಯಾಟ್ರಿಕ್‌ ಆಗಿ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣ್ಣಿನ ಮಗ ಎಚ್‌.ಡಿ.ದೇವೇಗೌಡರ ಸಮಾಗಮವಾಗಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಕಂಡುಬಂದಿದೆ. ರಾಜ್ಯದ ಆರೂವರೆ ಕೋಟಿ ಜನರ ಏಳಿಗೆಗಾಗಿ ಈ ಸಮಾಗಮ ನಡೆದಿದೆ ಎಂದರು.

ಲೋಕಸಭೆ ಚುನಾವಣೆ 2024: ಎಸ್‌.ಎಂ.ಕೃಷ್ಣ ಭೇಟಿಯಾಗಿ ಆಶೀರ್ವಾದ ಪಡೆದ ಕುಮಾರಸ್ವಾಮಿ

ಬಡಜನರ ಕಣ್ಮಣಿ ಎಂದು ಎಚ್‌.ಡಿ.ಕುಮಾರಸ್ವಾಮಿ ಹೆಸರಾಗಿದ್ದಾರೆ. ಅವರ ಕಾಲದಲ್ಲಿ ಹಾಗೂ ಬಿಜೆಪಿ ಸರ್ಕಾರದ ಕಾಲದಲ್ಲಿ ನೀಡಿದ ಯೋಜನೆಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರ ಕಿತ್ತುಕೊಂಡಿದೆ. ವಿದ್ಯುತ್‌ ಉಚಿತ ನೀಡುತ್ತೇವೆಂದು ವಿದ್ಯುತ್‌ ಇಲ್ಲದಂತೆ ಮಾಡಿದ್ದಾರೆ. ರೈತರು ಒಂದು ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಳ್ಳಬೇಕೆಂದರೆ 4-5 ಲಕ್ಷ ರು. ನೀಡಬೇಕಿದೆ. ಬಿಜೆಪಿ ಕಾಲದಲ್ಲಿ ಕೇವಲ 25 ಸಾವಿರ ರು.ನಲ್ಲಿ ಈ ಕೆಲಸ ನಡೆಯುತ್ತಿತ್ತು. ದೇಶದಲ್ಲಿ 10 ಕೋಟಿ ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಸಾಲ ನೀಡಲಾಗಿದೆ ಎಂದರು.

ನಿಮ್ಮ ಸಂಸದರು 400 ರಲ್ಲಿ ಇರಬೇಕಾ, ವಿರೋಧ ಪಕ್ಷದಲ್ಲಿ ಕೂರುವ 40 ರಲ್ಲಿ ಇರಬೇಕಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಆರೋಗ್ಯ ಸಚಿವನಾಗಿ, ಕೋವಿಡ್‌ ಹೋರಾಟದ ಸೇನಾನಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.

ಭಯೋತ್ಪಾದಕರಿಗೆ ಮೃದು ಧೋರಣೆ:

ಹೊಸಕೋಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್‌, ಕಾಂಗ್ರೆಸ್‌ ಸರ್ಕಾರ ಭಯೋತ್ಪಾದಕರಿಗೆ ಮೃದು ಧೋರಣೆ ತೋರಿಸುತ್ತದೆ. ಈ ಸರ್ಕಾರ ಬಂದ ಬಳಿಕ ಬೆಂಗಳೂರಿನಲ್ಲಿ ಬಾಂಬ್‌ ಸ್ಪೋಟವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಆದರೆ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹೋಗಿ ದಾಳಿ ಮಾಡುವ ಮಟ್ಟಿಗೆ ಎದೆಗಾರಿಕೆ ತೋರುತ್ತದೆ ಎಂದರು.

ಕಾಂಗ್ರೆಸ್‌ ರಾಜ್ಯಕ್ಕೆ ಕಾಲಿಟ್ಟರೆ ಬರಗಾಲ ಬರುತ್ತದೆ, ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಪ್ರವಾಹದಿಂದ ಬೆಳೆ ನಷ್ಟವಾದಾಗ, 48 ಗಂಟೆಯಲ್ಲಿ ಅಂದಾಜು ತಿಳಿದು ಒಂದೇ ತಿಂಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಎರಡು ಪಟ್ಟು ಅಧಿಕ ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರವನ್ನು ಈ ಬಗ್ಗೆ ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಯುಪಿಎ ಇದ್ದಾಗ 1.50 ಲಕ್ಷ ಕೋಟಿ ರೂ. ರಾಜ್ಯಕ್ಕೆ ಬಂದರೆ, ಪ್ರಧಾನಿ ಮೋದಿ ಸರ್ಕಾರದಿಂದ 4.52 ಲಕ್ಷ ಕೋಟಿ ರು. ಬಂದಿದೆ. ರಾಜ್ಯ ಸರ್ಕಾರ ಮೇಕೆದಾಟುವಿಗಾಗಿ ಪಾದಯಾತ್ರೆ ಮಾಡಿದ್ದು, ಈಗ ಅದರಿಂದ ಮೇಕೆಯ ಶಬ್ದವೂ ಕೇಳುತ್ತಿಲ್ಲ. ಬಡವರು ಬಡವರಾಗಿಯೇ ಉಳಿಯಬೇಕೆನ್ನುವುದು ಕಾಂಗ್ರೆಸ್‌ನ ಧ್ಯೇಯ ಎಂದರು.

ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್‌ ಗ್ಯಾರಂಟಿಗೆ ಬಳಸಿದೆ. ಆದರೆ ಪ್ರಧಾನಿ ಮೋದಿ ಮಹಿಳೆಯರು, ಯುವಜನರು, ಮಕ್ಕಳಿಗೆ ಉತ್ತಮ ಯೋಜನೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಗ್ಯಾರಂಟಿಗೆ ಮತ ನೀಡಬೇಕೆಂದು ಜನರು ತೀರ್ಮಾನಿಸಿದ್ದಾರೆ ಎಂದರು.

ಸರ್ಕಾರಿ ಜಮೀನನ್ನು ಗುರುತಿಸಿ ಜನರಿಗೆ ವಸತಿ ನಿರ್ಮಿಸಲಾಗಿದೆ. ನಾನು ಚಿಕ್ಕಬಳ್ಳಾಪುರದಲ್ಲಿ 22 ಸಾವಿರ ನಿವೇಶನಗಳನ್ನು ಬಡಜನರಿಗೆ ನೀಡಿದ್ದೆ. ಹೊಸಕೋಟೆಯಲ್ಲಿ 291 ಎಕರೆ ಜಾಗವನ್ನು ಗುರುತಿಸಿ ಅಲ್ಲಿ ಬಡಜನರಿಗೆ ನಿವೇಶನ ನೀಡಲು ನಿರ್ಧರಿಸಲಾಯಿತು. ಅದರಿಂದಾಗಿ 10,450 ಕುಟುಂಬಗಳಿಗೆ ಉಚಿತ ನಿವೇಶನ ಸಿಕ್ಕಿದೆ. ಅಂತಹ ಪುಣ್ಯದ ಕೆಲಸವನ್ನು ಎಂಟಿಬಿ ನಾಗರಾಜ್‌ ಮಾಡಿದ್ದಾರೆ. ಆದರೆ ಈಗಿನ ಶಾಸಕರು ಹಳೆಯ ಯೋಜನೆಗಳನ್ನು ಈಗ ಉದ್ಘಾಟಿಸಿ ಹೆಸರು ಪಡೆಯುತ್ತಿದ್ದಾರೆ ಎಂದರು.

ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ಬಿವೈ ರಾಘವೇಂದ್ರ ಭರ್ಜರಿ ಮತ ಪ್ರಚಾರ; ವಿಜಯೇಂದ್ರ ಸಾಥ್

ಮಾಜಿ ಸಚಿವ ಎಂಟಿಬಿ ನಾಗರಾಜ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಮುಖಂಡ ನಿಸರ್ಗ ನಾರಾಯಣಸ್ವಾಮಿ, ಜಿ.ಕೆ.ಕೃಷ್ಣಾ ರೆಡ್ಡಿ, ಬಿ.ಮುನೇಗೌಡ, ಶರವಣ, ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ನ ದುರಾಡಳಿತ ಅಂತ್ಯಗೊಳಿಸಲು ಹಾಗೂ ಕಳೆದ 10 ತಿಂಗಳಲ್ಲಿ ಕಾಣದ ಅಭಿವೃದ್ಧಿಯನ್ನು ಮತ್ತೆ ತರಲು ಶ್ರೀ ನರೇಂದ್ರ ಮೋದಿಯವರ ನಾಯಕತ್ವ ಬೇಕಿದೆ. ಮೂರನೇ ಬಾರಿಗೆ ಮೋದಿಯವರನ್ನು ಗೆಲ್ಲಿಸುವ ಮೂಲಕ ವಿಕಸಿತ ಚಿಕ್ಕಬಳ್ಳಾಪುರಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದ್ದಾರೆ. 

click me!