ಈ ಬಗ್ಗೆ ಸಧ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ನಮ್ಮ ಎಐಸಿಸಿ ಅಧ್ಯಕ್ಷರು, ಚುನಾವಣಾ ಸಮಿತಿ, ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ಪಡೆಯಬೇಕು’ ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಏ.09): ‘ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಆನಂದ್ ಅಸೂಟಿ ಅವರಿಗೆ ಈಗಾಗಲೇ ಬಿ-ಫಾರಂ ನೀಡಿದ್ದೇವೆ. ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಅವರೊಂದಿಗೆ ನಾವು ಮಾತನಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಈ ಬಗ್ಗೆ ತೀರ್ಮಾನ ಮಾಡಬೇಕಿದ್ದು, ಸ್ವಾಮೀಜಿಗಳ ವಿಚಾರ ಮೊದಲೇ ಗೊತ್ತಿದ್ದರೆ ನಿರ್ಧಾರ ಮಾಡಲು ಸುಲಭವಾಗುತ್ತಿತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಧಾರವಾಡದಿಂದ ನಾನು ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅವಕಾಶ ಬಂದರೆ ಮತದಾರರ ಮುಂದೆ ಹೋಗಿ ನಿರ್ಣಯ ಮಾಡುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು.
ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ
ಈ ಬಗ್ಗೆ ನೀವು ಸ್ವಾಮೀಜಿ ಅವರನ್ನು ಸಂಪರ್ಕಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಈ ಬಗ್ಗೆ ಸಧ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ನಮ್ಮ ಎಐಸಿಸಿ ಅಧ್ಯಕ್ಷರು, ಚುನಾವಣಾ ಸಮಿತಿ, ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ಪಡೆಯಬೇಕು’ ಎಂದು ಹೇಳಿದರು.