ರಮೇಶ ಜಾರಕಿಹೊಳಿ ಯಾರು? ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೂ ಇವರಿಗೂ ಏನು ಸಂಬಂಧ?, ಬೆಂಕಿ ಜೊತೆ ಸರಸವಾಡಬೇಡಿ: ರಮೇಶಗೆ ಚನ್ನರಾಜ್ ಎಚ್ಚರಿಕೆ
ಬೆಳಗಾವಿ(ಫೆ.19): ರಮೇಶ ಜಾರಕಿಹೊಳಿ ಯಾರು? ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೂ ಇವರಿಗೂ ಏನು ಸಂಬಂಧ? ನಿಮ್ಮ ಗೋಕಾಕ ಕ್ಷೇತ್ರವನ್ನು ನೀವು ನೋಡಿಕೊಳ್ಳಿ. ಗ್ರಾಮೀಣ ಕ್ಷೇತ್ರದ ಶಾಸಕರು ಸಮರ್ಥರಿದ್ದಾರೆ. ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಅವರದ್ದೇನು ಕೆಲಸ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರಶ್ನಿಸಿದರು. ಬೆಳಗಾವಿ ತಾಲೂಕಿನ ರಾಜಹಂಸಗಡ ಕೋಟೆಯ ಬಳಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗ್ರಾಮೀಣ ಕ್ಷೇತ್ರದ ಜನತೆಯ ಭಾವನೆಗಳ ವಿರುದ್ಧ, ಬೆಂಕಿಯ ಜೊತೆ ಸರಸವಾಡುತ್ತಿದ್ದೀರಿ ಎಂದು ರಮೇಶ ಜಾರಕಿಹೊಳಿಗೆ ಎಚ್ಚರಿಕೆ ನೀಡಿದರು.
ಗೋಕಾಕ ಕ್ಷೇತ್ರ ನೋಡಿಕೊಳ್ಳಿ:
ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣವಾಗಬೇಕೆನ್ನುವ ಕನಸು ಇಂದು ಈಡೇರಿದೆ. ರಮೇಶ ಜಾರಕಿಹೊಳಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಏನು ಸಂಬಂಧ? ಗೋಕಾಕ ಕ್ಷೇತ್ರದ ಶಾಸಕರು ಅವರು. ಬೆಳಗಾವಿ ತಾಲೂಕಿಗೆ ಏನು ಸಂಬಂಧ? ಈ ಭಾಗದ ಶಾಸಕರು ಲಕ್ಷ್ಮಿ ಹೆಬ್ಬಾಳಕರ. ಈ ಭಾಗದ ಬಗ್ಗೆ ವಿಚಾರ ಮಾಡಲು ಅವರಿಗೆ ಸಾಕಷ್ಟುಜ್ಞಾನವಿದೆ. ನೀವು ಗೋಕಾಕ ಕ್ಷೇತ್ರದ ವಿಚಾರ ಮಾಡಿಕೊಳ್ಳಿ. ಇಲ್ಲಿ ಹಸ್ತಕ್ಷೇಪ ಮಾಡಲು ನಿಮಗೇನೂ ಹಕ್ಕಿಲ್ಲ. ನಿಮ್ಮ ಕ್ಷೇತ್ರದ ಬಗ್ಗೆ ವಿಚಾರ ಮಾಡಿಕೊಳ್ಳಿ ಎಂದರು.
KARNATAKA BUDGET 2023: ಬೆಳಗಾವಿ ಜಿಲ್ಲೆಗೆ ಬೆರಳೆಣಿಕೆ ಯೋಜನೆ: ಜನರ ನಿರೀಕ್ಷೆ ಹುಸಿ!
ಈ ಮತಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಶಾಸಕ ರಮೇಶ ಜಾರಕಿಹೊಳಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ವಿಧಾನಸಭೆ ಸ್ಪೀಕರ್‌ಗೆ ನಾವು ಪತ್ರ ಬರೆಯುತ್ತೇವೆ. ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.
ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಆಮಂತ್ರಣ ಪತ್ರಿಕೆ ಇನ್ನೂ ಬಂದಿಲ್ಲ. ಜಿಲ್ಲಾಡಳಿತದಿಂದ ಆಮಂತ್ರಣ ಪತ್ರಿಕೆಯೇ ಬಂದಿಲ್ಲ. ನಾನು ಇವರ ಹಾಗೆ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ. ಆಮಂತ್ರಣ ಪತ್ರಿಕೆಯೇ ಬಾರದಿದ್ದಾಗ ಶಿಷ್ಟಾಚಾರ ಉಲ್ಲಂಘನೆ ಎಲ್ಲಿಂದ ಬಂತು? ಇವರು ಇಂತಹ ಮಹತ್ವವಾದ ಕಾರ್ಯಕ್ರಮಕ್ಕೆ ವಿಘ್ನವನ್ನುಂಟು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಹಿಂದಿನ ಎಲ್ಲ ಶಾಸಕರು ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸುವ ಕನಸು ಕಂಡಿದ್ದರು. ಪ್ರಯತ್ನವನ್ನೂ ಮಾಡಿದ್ದರು. ಆದರೆ, ದೈವೀ ಇಚ್ಚೇ ಲಕ್ಷ್ಮೇ ಹೆಬ್ಬಾಳಕರ ಅವರಿಂದ ಮಾಡಿಸಿದೆ. ಇಲ್ಲಿರುವ ಸಿದ್ದೇಶ್ವರ ಮಹಾರಾಜರ ಆಶೀರ್ವಾದದಿಂದ ಹೆಬ್ಬಾಳಕರ ಈ ಕೆಲಸವನ್ನು ಮಾಡಿದ್ದಾರೆ. ಎಲ್ಲರೂ ಪ್ರಯತ್ನ ಮಾಡಿದರು. ಆದರೆ, ಹೆಬ್ಬಾಳಕರ ಕಾಲದಲ್ಲಿ ಅದು ಆಗಿದೆ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ. ಲಕ್ಷ್ಮೇ ಹೆಬ್ಬಾಳಕರ ಬೆಳೆಯುತ್ತಿದ್ದಾರೆ. ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ ಎನ್ನುವ ಕಾರಣದಿಂದ ರಮೇಶ ಜಾರಕಿಹೊಳಿ ಸಮಸ್ತ ಶಿವಾಜಿ ಭಕ್ತರಿಗೆ ನೋವುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕು: ಜಾರಕಿಹೊಳಿ
ಬೆಂಕಿ ಜೊತೆ ಸರಸ:
ಮಾ.5ರಂದು ರಮೇಶ ಜಾರಕಿಹೊಳಿ ಪ್ರತಿಭಟನೆ ಮಾಡುತ್ತಾರಂತೆ. ಜಾರಕಿಹೊಳಿ ಅವರೇ ನೀವು ಬೆಂಕಿಯ ಜೊತೆ ಸರಸವಾಡುತ್ತಿದ್ದೀರಿ. ಸಮಸ್ತ ಶಿವಾಜಿ ಮಹಾರಾಜರ ಭಕ್ತರ ಭಾವನೆಯ ಜೊತೆಗೆ ಆಟವಾಡುತ್ತಿದ್ದೀರಿ. ಪ್ರತಿಭಟನೆ ಮಾಡುವುದಾಗಿ ಹಿರೇಬಾಗೇವಾಡಿಯಲ್ಲಿ ಕನ್ನಡದಲ್ಲಿ ಹೇಳಿದ್ದೀರಿ. ಅದು ಮುಗ್ಧ ಮರಾಠಿ ಭಾಷಿಕರಿಗೆ ಅರ್ಥವಾಗಿಲ್ಲ. ಅರ್ಥವಾದರೆ ಅವರು ಸುಮ್ಮನಿರುವುದಿಲ್ಲ. ಶಿವಾಜಿ ಭಕ್ತರ ಮನಸಿನ ಜೊತೆ ನೀವು ಆಟವಾಡುತ್ತಿದ್ದೀರಿ. ಜನರೇ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ರಮೇಶ-ಚನ್ನರಾಜ್ ಕಾರು ಮುಖಾಮುಖಿ: ಹೆಬ್ಬಾಳಕ ಪರ ಘೋಷಣೆ
ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಜಹಂಸಗಡ ಕೋಟೆಯತ್ತ ಆಗಮಿಸುತ್ತಿದ್ದಂತೆಯೇ ಅವರ ಕಾರಿನೆದುರೇ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಕಾರು ಬಂದಿತು. ಜಾರಕಿಹೊಳಿ ಮತ್ತು ಹಟ್ಟಿಹೊಳಿ ಕಾರು ಮುಖಾಮುಖಿಯಾದವು. ರಮೇಶ ಜಾರಕಿಹೊಳಿ ಅವರು ರಸ್ತೆಯ ನಡುವೆಯೇ ಇಳಿದು ಕೋಟೆಯತ್ತ ತೆರಳಿದರು. ಆದರೆ, ಅವರ ಕಾರು ಅಲ್ಲಿಂದ ಕದಲಲಿಲ್ಲ. ಕೆಲ ಕ್ಷಣಗಳ ಕಾಲ ಚನ್ನರಾಜ ತಮ್ಮ ಕಾರಿನಲ್ಲೇ ಕುಳಿತರು. ಈ ವೇಳೆ ಅವರ ಬೆಂಬಲಿಗರು, ಲಕ್ಷ್ಮೇ ಹೆಬ್ಬಾಳಕರ, ಚನ್ನರಾಜ್ ಪರವಾಗಿ ಘೋಷಣೆ ಕೂಗಿದರು. ನಿಮ್ಮ ಜೊತೆ ನಾವಿದ್ದೇವೆ ಎಂದು ಘೋಷಣೆ ಹಾಕಿದರು. ರಮೇಶ ಜಾರಕಿಹೊಳಿ ಅವರ ಕಾರಿನ ಪಕ್ಕದಲ್ಲಿದ್ದ ವಾಹನಗಳನ್ನು ತೆಗೆಯಿಸಿ, ಬಳಿಕ ಚನ್ನರಾಜ ಹಟ್ಟಿಹೊಳಿ ಕಾರು ಮುಂದೆ ಸಾಗಿತು.