ಮುಂದಿನ ದಿನಗಳಲ್ಲಿ ಚನ್ನಪಟ್ಟಣ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಗೆ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಆ ಬಗ್ಗೆ ಯಾವುದೇ ಚಿಂತನೆ ಸದ್ಯಕ್ಕಿಲ್ಲ.
ಬೆಂಗಳೂರು (ಜೂ.07): ಮುಂದಿನ ದಿನಗಳಲ್ಲಿ ಚನ್ನಪಟ್ಟಣ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಗೆ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಆ ಬಗ್ಗೆ ಯಾವುದೇ ಚಿಂತನೆ ಸದ್ಯಕ್ಕಿಲ್ಲ. ಮಾಧ್ಯಮದವರಿಗೆ ಆ ಬಗ್ಗೆ ಚಿಂತನೆಯಿರಬೇಕು ಅಷ್ಟೇ ಎಂದರು. ಈಗಾಗಿರುವ ಸೋಲಿನಿಂದ ಚೇತರಿಸಿಕೊಳ್ಳಬೇಕಿದೆ. ಸೋತೆವು ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ. ನನ್ನನ್ನು ನಂಬಿರುವ ಜನ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಕೆಲಸ ಮಾಡುತ್ತೇನೆ. ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಲು ತಂತ್ರ, ಪ್ರತಿತಂತ್ರ ಏನು ಮಾಡಬೇಕೋ ಎಲ್ಲವೂ ಗೊತ್ತಿದೆ. ದೊಡ್ಡ, ದೊಡ್ಡ ನಾಯಕರೇ ಸೋತಿದ್ದಾರೆ. ಡಿ.ಕೆ.ಸುರೇಶ್ ಸೋಲು ನನ್ನ ವೈಯಕ್ತಿಕ ಸೋಲು ಎಂದರು.
ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ನರೇಂದ್ರ ಮೋದಿ ಹಾಗೂ ರಾಮ ಮಂದಿರದ ಅಲೆ ಇರಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶ ಸಾಬೀತು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಲೋಕಸಭಾ ಚುನಾವಣೆ ಫಲಿತಾಂಶದ ಕುರಿತಂತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯ ಮತ್ತು ದೇಶದಲ್ಲಿ ಜನರು ನೀಡಿರುವ ತೀರ್ಪನ್ನು ಗೌರವಿಸುತ್ತೇನೆ ಎಂದರು.
ರಾಜ್ಯದಲ್ಲಿ 14 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಆದರೂ, 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆಯಾಗಿದ್ದೇವೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸ್ಥಾನ ಬರಬೇಕಿತ್ತು. ಕಡಿಮೆ ಸ್ಥಾನ ಬಂದಿದ್ದರ ಬಗ್ಗೆ ಚಿಂತನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಸೀಟು ನಿರೀಕ್ಷೆ ಮಾಡಿದ್ದೆವು. ಜನ ಯಾವ ವಿಚಾರದಲ್ಲಿ ನಮ್ಮನ್ನು ಒಪ್ಪಿಲ್ಲ ಎಂಬುದನ್ನು ಪರಿಶೀಲಿಸಿ, ಮುಂದೆ ಅದನ್ನು ಸರಿಪಡಿಸುತ್ತೇವೆ ಎಂದರು.
ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್
ನನ್ನ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಗೆಲುವು ಸಾಧಿಸಿದ್ದು, ಅವರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಪಕ್ಷಕ್ಕಿಂತ ಅಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಆದರೂ, ಇಷ್ಟು ದೊಡ್ಡ ಅಂತರದಲ್ಲಿ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ಡಿ.ಕೆ.ಸುರೇಶ್ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧ ಇರಲಿಲ್ಲ. ಜನರು ಡಾ.ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಅವರನ್ನು ಗೆಲ್ಲಿಸಿದ್ದಾರಷ್ಟೆ. ಕನಕಪುರ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಆದರೆ, ಅಷ್ಟು ಕಡಿಮೆ ಅಂತರ ಬಂದಿದ್ದನ್ನು ನಿರೀಕ್ಷಿಸಿರಲಿಲ್ಲ. ಈ ಫಲಿತಾಂಶದ ಮೂಲಕ ಜನರು ನೀಡಿರುವ ಸಂದೇಶವನ್ನು ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪನ್ನು ಒಪ್ಪುತ್ತೇನೆ ಎಂದು ಹೇಳಿದರು.