ಕಾದು ನೋಡಿ, ನವೆಂಬರ್‌ಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published May 19, 2023, 4:40 AM IST
Highlights

ನವೆಂಬರ್‌ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದ್ದು, ಅಲ್ಲಿಯವರೆಗೆ ಕಾದು ನೋಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಚನ್ನಪಟ್ಟಣ (ಮೇ.19): ನವೆಂಬರ್‌ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದ್ದು, ಅಲ್ಲಿಯವರೆಗೆ ಕಾದು ನೋಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ತಾಲೂಕಿನ ಖಾಸಗಿ ರೆಸಾರ್ಚ್‌ನಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಈ ಬಾರಿ ಕಾಂಗ್ರೆಸ್‌ಗೆ ಬಹುಮತ ಬಂದಿರಬಹುದು. ಬಹುಮತ ಬಂದಿದ್ದರೂ ಅಲ್ಲಿ ಏನೇನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ, ನವೆಂಬರ್‌ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಮುಂದಿನ ಲೋಕಸಭಾ ಚುನಾವಣೆಯ ನಂತರ ಏನೇನು ಬೆಳವಣಿಗೆಯಾಗುವುದೋ ನೋಡೋಣ ಎಂದರು.

ಕಾಂಗ್ರೆಸ್‌ ಸರ್ಕಾರ ಯಾವ ರೀತಿ ಆಡಳಿತ ನಡೆಸಲಿದೆ ಎಂಬುದು ಇನ್ನು ಎರಡು, ಮೂರು ತಿಂಗಳಲ್ಲಿ ಗೊತ್ತಾಗಲಿದೆ. ಏನೇ ಆದರೂ ಇನ್ನು ಮುಂದೆ ಬಿಜೆಪಿಯವರು ಲೂಟಿ ಮಾಡಿದ ರೀತಿಯಲ್ಲೇ ಕಾಂಗ್ರೆಸ್‌ನವರು ಲೂಟಿಗೆ ಇಳಿಯಲಿದ್ದಾರೆ. ಇಬ್ಬರಿಗೂ ಅಂತಹ ವ್ಯತ್ಯಾಸವಿಲ್ಲ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಸುಲಭವಲ್ಲ. ಅವರು ನೀಡಿರುವ ಗ್ಯಾರಂಟಿಗಳಿಗೆ ಸುಮಾರು 60ರಿಂದ 70 ಸಾವಿರ ಕೋಟಿ ಅವಶ್ಯಕತೆ ಇದೆ. ಅಷ್ಟೊಂದು ಹಣವನ್ನು ಅವರು ಎಲ್ಲಿಂದ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದರು.

Latest Videos

ಒಳಒಪ್ಪಂದವೆಂಬ ಬಿಜೆಪಿ ಆರೋ​ಪ​ ಸತ್ಯಕ್ಕೆ ದೂರ: ಜೆಡಿ​ಎಸ್‌ ಶಾಸಕಿ ಶಾರದಾ ಪೂರ್ಯನಾಯ್ಕ್

ಜೆಡಿಎಸ್‌ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಸುಮಾರು 60ಕ್ಕೂ ಹೆಚ್ಚು ಕ್ಷೇತ್ರಗಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿತ್ತು. ಆದರೆ, ಕಾಂಗ್ರೆಸ್‌ ಹಾಗೂ ಬಿಜೆಪಿಯವರ ಅಪಪ್ರಚಾರದಿಂದ ಹಿನ್ನಡೆ ಉಂಟಾಯಿತು. 1989ರಲ್ಲಿ ಸೋತ ನಂತರ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದರು, ನಂತರ ದೇಶದ ಪ್ರಧಾನಿಯೇ ಆದರು. ಹೀಗಾಗಿ, ಪಕ್ಷಕ್ಕೆ 19 ಸ್ಥಾನ ಬಂದಿರುವುದರಿಂದ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗಲಿ ಎಂಬ ಒಕ್ಕಲಿಗ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಒಕ್ಕಲಿಗ ಸಮಾಜಕ್ಕೆ ಸಿಎಂ ಸ್ಥಾನ ಸಿಗಲಿ ಎಂಬ ಅಭಿಮಾನದಿಂದ ಹೇಳಿರುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಯಾರೇ ಸಿಎಂ ಆದರೂ, ಒಂದು ಸಮಾಜಕ್ಕೆ ಅಥವಾ ವರ್ಗಕ್ಕೆ ಸೀಮಿತವಾಗಿ ಕೆಲಸ ಮಾಡಬಾರದು. ರಾಜ್ಯದ ಒಟ್ಟಾರೆ ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಎಚ್ಡಿಕೆ ಗೆಲುವಿಗೆ ಲಡ್ಡು ಹಂಚಿದ ಅಭಿಮಾನಿಗಳು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಗುಡ್ಡೆ ತಿಮ್ಮಸಂದ್ರ ಗ್ರಾಮದ ಜೆಡಿಎಸ್‌ ಕಾರ್ಯಕರ್ತರು, ಅಭಿಮಾನಿಗಳು ತಮ್ಮ ಸ್ವಂತ ಖರ್ಚಿನಲ್ಲಿ 2500 ಲಡ್ಡು ತಯಾರಿಸಿ, ಗ್ರಾಮಸ್ಥರಿಗೆ ವಿತರಣೆ ಮಾಡಿದರು. ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರ ಜತೆಗೆ ತಿಮ್ಮಸಂದ್ರ ಗ್ರಾಮದಲ್ಲಿ ಜೆಡಿಎಸ್‌ಗೆ ಹೆಚ್ಚು ಲೀಡ್‌ ಬಂದಿದ್ದು, ಈ ಹಿನ್ನೆಲೆಯಲ್ಲಿ ಲಡ್ಡು ತಯಾರಿಸಿ ಹಂಚಲಾಗಿದೆ ಎಂದು ಗ್ರಾಮದ ಜೆಡಿಎಸ್‌ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಸೋಲಿಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಕಾರಣ: ಕುಮಾರ್‌ ಬಂಗಾರಪ್ಪ

ಗ್ರಾಮದಲ್ಲಿ ಒಟ್ಟು 1002 ಮತದಾರರಿದ್ದು ಈ ಬಾರಿ ಚುನಾವಣೆಯಲ್ಲಿ 872 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿಗೆ 494 ಮತಗಳು ಲಭಿಸಿದ್ದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ 348 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಗಂಗಾಧರ್‌ 9 ಮತ ಪಡೆದಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್‌ಗೆ 146 ಮತಗಳ ಲೀಡ್‌ ದೊರೆತಿದೆ ಎಂದು ಹೇಳಿದ್ದಾರೆ.

click me!